ಸುಬ್ರಹ್ಮಣ್ಯ: ಸಕಲೇಶಪುರ-ಬಾಳುಪೇಟೆ ನಡುವೆ ಹಳಿಗೆ ಶುಕ್ರವಾರ ರಾತ್ರಿ ಗುಡ್ಡ ಕುಸಿದು ಬಿದ್ದ ಪರಿಣಾಮ ಮಂಗಳೂರು-ಬೆಂಗಳೂರು ರೈಲು ಮಾರ್ಗದಲ್ಲಿ ಮತ್ತೆ ರೈಲು ಸಂಚಾರ ಸ್ಥಗಿತಗೊಂಡಿದೆ. ಎಡಕುಮೇರಿ-ಕಡಗರವಳ್ಳಿ ನಡುವಿನ ದೋಣಿಗಲ್ ಎಂಬಲ್ಲಿ ರೈಲು ಮಾರ್ಗದಲ್ಲಿ ಸಂಭವಿಸಿದ ಭೂಕುಸಿತ ಹಿನ್ನೆಲೆಯಲ್ಲಿ ಕಳೆದ ಹತ್ತು ದಿನಗಳಿಂದ ಮಂಗಳೂರು-ಬೆಂಗಳೂರು ನಡುವೆ ರೈಲು ಸಂಚಾರ ಸ್ಥಗಿತಗೊಂಡು ಗುರುವಾರ ಸಂಚಾರ ಪುನಃ ಆರಂಭಗೊಂಡಿತ್ತು.
ಮಂಗಳೂರು-ಬೆಂಗಳೂರು ನಡುವೆ ರೈಲು ಸಂಚಾರ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಜು.27ರಿಂದ ಆ.7ರ ತನಕ ಪ್ರಯಾಣಿಕರಿಲ್ಲದೇ ಇಲ್ಲಿನ ಕುಕ್ಕೆ ಸುಬ್ರಹ್ಮಣ್ಯ ರೈಲು ನಿಲ್ದಾಣ ಬಿಕೋ ಎನ್ನುತ್ತಿದೆ. ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ರೈಲು ಮಾರ್ಗದ ದುರಸ್ತಿ ಕಾರ್ಯ ಭರದಿಂದ ಸಾಗುತ್ತಿದ್ದು ಮಂಗಳೂರು-ಸುಬ್ರಹ್ಮಣ್ಯ-ಬೆಂಗಳೂರು ನಡುವೆ ಶೀಘ್ರ ರೈಲು ಸಂಚಾರ ಪುನರಾರಂಭ ಆಗುವ ನಿರೀಕ್ಷೆ ಇದೆ. ಮಂಗಳೂರು-ಬೆಂಗಳೂರು ನಡುವೆ ಹಗಲಲ್ಲಿ 4, ರಾತ್ರಿ 5-6 ರೈಲುಗಳು ಓಡಾಟ ನಡೆಸುತ್ತಿದ್ದವು.