

ಭೋಪಾಲ್: ಮೂರು ವರ್ಷದ ಬಾಲಕಿಯನ್ನು ಅಪಹರಿಸಿದ ವ್ಯಕ್ತಿ ರೈಲಿನ ಮೂಲಕ ಪಾರಾಗಲು ಯತ್ನಿಸಿ ಮಣ್ಣುಮುಕ್ಕಿದ ಘಟನೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದಿದೆ.
ಈ ಕಿಡ್ನಾಪರ್ ಉತ್ತರ ಪ್ರದೇಶದ ಲಲಿತ್ಪುರ ರೈಲ್ವೆ ಸ್ಟೇಶನ್ನಿಂದ ಬಾಲಕಿಯನ್ನು ಕಿಡ್ನ್ಯಾಪ್ ಮಾಡಿ, ಭೋಪಾಲ್ಗೆ ಹೋಗುವ ರೈಲು ಹತ್ತಿದ್ದ. ತನ್ನ ಕೆಲಸ ಯಾರಿಗೂ ಗೊತ್ತಾಗಲಿಲ್ಲ ಎಂದೇ ಭಾವಿಸಿದ್ದ. ಆದರೆ ರೈಲ್ವೆ ಪೊಲೀಸರು ಅಪಹರಣಕಾರನಿಗೆ ಭರ್ಜರಿ ಬಲೆ ಬೀಸಿದ್ದರು. ರೈಲು ಲಲಿತ್ಪುರದಿಂದ ಹೊರಟು ಭೋಪಾಲ್ಗೆ ಹೋಗುವ ಮಾರ್ಗ ಮಧ್ಯೆ ಕೆಲವು ಸ್ಟೇಶನ್ಗಳಲ್ಲಿ ನಿಲ್ಲಬೇಕಿತ್ತು. ಆದರೆ ರೈಲಿನಲ್ಲಿ ಅಪಹರಣಕಾರ ಇರುವ ಬಗ್ಗೆ ಅರಿತಿದ್ದ ಪೊಲೀಸರು ಎಲ್ಲಿಯೂ ರೈಲು ನಿಲ್ಲಿಸದಂತೆ ಸೂಚನೆ ನೀಡಿದ್ದರು. ಅದರಂತೆ ಟ್ರೇನ್ ಲಲಿತ್ಪುರದಿಂದ ಭೋಪಾಲ್ವರೆಗೆ ನಾನ್-ಸ್ಟಾಪ್ ಚಲಿಸಿದೆ. ಮಧ್ಯ ರೈಲು ನಿಲ್ಲಿಸಿದರೆ ಎಲ್ಲಿ ಅಪಹರಣಕಾರ ಪಾರಾಗಿಬಿಡುತ್ತಾನೋ ಎಂಬ ಕಾರಣಕ್ಕೆ ಪೊಲೀಸರು, ರೈಲ್ವೆ ಇಲಾಖೆ ಜಂಟಿ ಪ್ಲ್ಯಾನ್ ಮಾಡಿದ್ದರು. ಭೋಪಾಲ್ನಲ್ಲಿ ಕಿಡ್ನ್ಯಾಪರ್ ರೈಲಿನಿಂದ ಇಳಿಯುತ್ತಿದ್ದಂತೆ ಅರೆಸ್ಟ್ ಆಗಿದ್ದಾನೆ.
ಬಾಲಕಿಯ ಅಪ್ಪ-ಅಮ್ಮನ ಕಣ್ಣುತಪ್ಪಿಸಿ ಆಕೆಯನ್ನು ಅಪಹರಿಸಿದ್ದ ಆರೋಪಿ ನಂತರ ರಾಪ್ಟಿಸಾಗರ್ ಎಕ್ಸ್ಪ್ರೆಸ್ ರೈಲು ಹತ್ತಿದ್ದ. ಪಾಲಕರು ತಮ್ಮ ಮಗಳು ಕಾಣದೆ ಹೋದಾಗ ತಕ್ಷಣ ಅಲ್ಲಿಯೇ ಇದ್ದ ಪೊಲೀಸರು, ರೈಲ್ವೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು.
ರೈಲ್ವೆ ಪೊಲೀಸ್ ಫೋರ್ಸ್ ಅಧಿಕಾರಿಗಳು ಸಿಸಿಟಿವಿ ಪರಿಶೀಲನೆ ಮಾಡಿದಾಗ ಈ ವ್ಯಕ್ತಿ ಮಗುವನ್ನು ಅಪಹರಿಸಿದ್ದು ಗೊತ್ತಾಯಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಹಿಡಿದಿದ್ದಾರೆ. (ಏಜೆನ್ಸೀಸ್)