ಮನೋಹರ ಬಳಂಜ ಬೆಳ್ತಂಗಡಿ
ಪೈಚಾರು-ದಿಡುಪೆ ರಾಜ್ಯ ಹೆದ್ದಾರಿ 276ರ ಧರ್ಮಸ್ಥಳ-ಕಲ್ಮಂಜ-ಮುಂಡಾಜೆ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧ ಹೇರಿ ಜಿಲ್ಲಾಧಿಕಾರಿ ಬುಧವಾರ ಆದೇಶ ನೀಡಿದ್ದಾರೆ.
9 ಕಿ.ಮೀ ವ್ಯಾಪ್ತಿಯ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದರಿಂದ ಸುತ್ತು ಬಳಸಿ ಸಾಗುವಂತಾಗಿ ಸ್ಥಳೀಯರಿಗೆ ತ್ರಿಶಂಕು ಸ್ಥಿತಿ ಎದುರಾಗಿದೆ. ಸ್ಥಳೀಯ ಕೆಲವರು ಯಾವ ಕಡೆಯಿಂದ ಸಂಚರಿಸಬೇಕು, ಪರ್ಯಾಯ ವ್ಯವಸ್ಥೆ ಏನು? ಎಂಬ ಗೊಂದಲದಲ್ಲಿದ್ದಾರೆ. ಚಾರ್ಮಾಡಿ ಮೂಲಕ ಬರುವ ಪ್ರವಾಸಿಗರಿಗೆ ಧರ್ಮಸ್ಥಳಕ್ಕೆ ಹತ್ತಿರದ ಸಂಪರ್ಕವಾಗಿದ್ದು, ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತಿದ್ದವು. ಇದೀಗ ಈ ರಸ್ತೆಯಲ್ಲಿ ಓಡಾಡುತ್ತಿದ್ದ ವಾಹನಗಳು ರಾಷ್ಟ್ರೀಯ ಹೆದ್ದಾರಿ 73ರ ಮೂಲಕವೇ ಸಂಚರಿಸಬೇಕಾಗಿದೆ.
8 ವರ್ಷಗಳ ಹಿಂದೆ ಈ ರಸ್ತೆ ಸುಮಾರು 7 ಕೋಟಿ ರೂ. ಅನುದಾನದಲ್ಲಿ 7 ಕಿ.ಮೀ ಅಭಿವೃದ್ಧಿ ಹೊಂದಿತ್ತು. ಬಳಿಕ ಕೆಲವೆಡೆ ಗುಡ್ಡ ಕುಸಿತವಾದ್ದರಿಂದ ತಾತ್ಕಾಲಿಕ ಸಮಸ್ಯೆಗಳು ಉದ್ಭವಿಸಿದ್ದವು. ಆದರೂ ಸಂಚಾರಕ್ಕೆ ಹೆಚ್ಚಿನ ಸಮಸ್ಯೆ ಉಂಟಾಗಿರಲಿಲ್ಲ.
ಈ ರಸ್ತೆಗೆ ಕಿರು ಸೇತುವೆ ನಿರ್ಮಾಣ ಕುರಿತು ಸ್ಥಳೀಯರು, ಜನಪ್ರತಿನಿಧಿಗಳ ಬಳಿ ಸಾಕಷ್ಟು ಬಾರಿ ಮನವಿ ಮಾಡಿದ್ದಾರೆ. ಆದರೆ ಎಂಟು ವರ್ಷಗಳಿಂದ ಸ್ಪಂದನೆ ಸಿಕ್ಕಿಲ್ಲ. ರಸ್ತೆ ಅತ್ಯಂತ ಅಪಾಯಕಾರಿಯಾಗಿರುವ ಕಾರಣ ಇಲ್ಲಿ ಸ್ಥಳೀಯ ಪಂಚಾಯಿತಿ ಹಾಗೂ ಪಿಡಬ್ಲ್ಯೂಡಿಯಿಂದ ಸೂಚನಾ ಫಲಕ ಅಳವಡಿಸುವ ಕೆಲಸ ಬಿಟ್ಟರೆ ಬೇರೇನೂ ಆಗಿಲ್ಲ. ಪ್ರಸ್ತುತ ರಸ್ತೆ ನಿರ್ಬಂಧ ಇರುವ ಕಾರಣ ಹಲವರು ಪ್ರಯಾಣಕ್ಕೆ ಸರ್ಕಸ್ ಮಾಡಬೇಕಾಗಿ ಬಂದಿದೆ.
ಕಿರು ಸೇತುವೆ ನಿರ್ಮಾಣವಾಗಿಲ್ಲ
ರಸ್ತೆಯ ಅಭಿವೃದ್ಧಿ ವೇಳೆ ಅಗತ್ಯ ಬೇಕಾಗಿದ್ದ ಕಿರು ಸೇತುವೆಗಳನ್ನು ನಿರ್ಮಿಸದೆ ಕಾಮಗಾರಿ ಅಪೂರ್ಣವಾಗಿತ್ತು. ತೆಪ್ಪದ ಗುಂಡಿ, ಪಿಲತ್ತಡ್ಕ, ಒಂಜರಬೈಲು, ಕರ್ಬಿಂತ್ತಿಲು, ಕೊಳಂಬೆ ಬಳಿ ಕಿರು ಸೇತುವೆಗಳಿದ್ದು ಅವು ಸಂಪೂರ್ಣ ಶಿಥಿಲಾವಸ್ಥೆ ತಲುಪಿವೆ. ಅಗಲ ಕಿರಿದಾದ ಕಿರು ಸೇತುವೆಗಳಿಗೆ ತಡೆ ಬೇಲಿಯೂ ಇಲ್ಲ. ಕಿರು ಸೇತುವೆಗಳಿಗೆ ಹಾಕಿರುವ ಮೋರಿ ಮುರಿದಿದ್ದು ರಸ್ತೆ ಮೇಲೆಯೇ ನೀರು ಹರಿದು ಕುಸಿತ ಉಂಟಾಗಿದೆ. ಈ ಕಿರು ಸೇತುವೆಗಳಲ್ಲಿ ಹಲವಾರು ಅಪಘಾತಗಳು ಸಂಭವಿಸಿವೆ.
ಸ್ಥಳೀಯರ ಸಂಕಷ್ಟ
ಕಲ್ಮಂಜ-ಮುಂಡಾಜೆ ಗ್ರಾಮದ 500ರಷ್ಟು ಮನೆಗಳಿಗೆ ಅಗತ್ಯವಾಗಿರುವ ರಸ್ತೆ ಇದು. ಉದ್ಯೋಗಿಗಳು, ಶಾಲಾ ಮಕ್ಕಳು, ಹೈನುಗಾರರು ಮುಂಡಾಜೆ -ಕಲ್ಮಂಜ ಪೇಟೆ ಕಡೆ ಬರಬೇಕಾದರೆ 20 ಕಿ.ಮೀ ಸುತ್ತಿ ಬಳಸಿ ರಾಷ್ಟ್ರೀಯ ಹೆದ್ದಾರಿ ಮೂಲಕ ಬರಬೇಕು. ಪ್ರತಿದಿನ ಇಲ್ಲಿ ಓಡಾಟ ನಡೆಸುತ್ತಿದ್ದ ಬಾಡಿಗೆ ವಾಹನಗಳು ಸುತ್ತು ಬಳಸಿನ ರಸ್ತೆ ಬಳಸುವುದು ಅನಿವಾರ್ಯವಾಗಿದೆ.
ರಾಜ್ಯ ಹೆದ್ದಾರಿಯಾಗಿರುವ ಈ ರಸ್ತೆಯ ಕಿರು ಸೇತುವೆಗಳ ನಿರ್ಮಾಣದ ಕುರಿತು ಸಾಕಷ್ಟು ಬಾರಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ರಸ್ತೆ ನಿರ್ಬಂಧದಿಂದ ಪ್ರಸ್ತುತ ಸ್ಥಳೀಯ ಜನರಿಗೆ ಹತ್ತಿರದ ಸಂಪರ್ಕ ಇಲ್ಲವಾಗಿದೆ. ನಮ್ಮ ಹೆಚ್ಚಿನ ವ್ಯವಹಾರಗಳು ಮುಂಡಾಜೆಯಲ್ಲಿರುವ ಕಾರಣ ಪ್ರತಿದಿನ ಹೋಗುವುದು ಅನಿವಾರ್ಯ. ಸಂಚಾರ ನಿರ್ಬಂಧ ಹೇರಿರುವ ಕಾರಣ ಜನ ತ್ರಿಶಂಕು ಸ್ಥಿತಿ ಎದುರಿಸುವಂತಾಗಿದೆ.
– ವಿಷ್ಣು ಭಟ್, ಸ್ಥಳೀಯರು