ತೆಯ್ಯಂಕೆಟ್ಟ್‌ಗಾಗಿ ಸಾಂಪ್ರದಾಯಿಕ ಬುಟ್ಟಿ ಕಸುಬು

Ksd_basket craft
Published on

ಪುರುಷೋತ್ತಮ ಪೆರ್ಲ ಕಾಸರಗೋಡು ಉದುಮ ಪಾಲಕುನ್ನು ಕುರುಕ್ಕನ್‌ಕುನ್ನು ತರವಾಡಿನ ವಯನಾಟು ಕುಲವನ್ ತೆಯ್ಯಂಕೆಟ್ಟ್ ಮಹೋತ್ಸವಕ್ಕಾಗಿ ಅಗತ್ಯವಿರುವ ಬುಟ್ಟಿಗಳನ್ನು ಹೆಣೆಯುವ ಕಾಯಕದಲ್ಲಿ ಬದಿಯಡ್ಕ ಪಂಚಾಯಿತಿ ಪೆರಡಾಲ ಉನ್ನತಿಯ ಕುಮಾರ್ ಮತ್ತು ಅವರ ಪತ್ನಿ ಉಷಾ ತಲ್ಲೀನರಾಗಿದ್ದಾರೆ. ಪರಂಪರಾಗತ ಬುಟ್ಟಿ ಹೆಣೆಯುವ ಕಾಯಕದಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಕ್ಷೀಣಿಸುತ್ತಿರುವ ಮಧ್ಯೆ ಕುಮಾರನ್ ದಂಪತಿ ಕೆಲಸ ಗಮನಸೆಳೆಯುತ್ತಿದೆ. ತಚ್ಚಂಗಾಡ್ ಕೋಟಪ್ಪಾರ ಅರಣ್ಯ ಪ್ರದೇಶದಲ್ಲಿ ಲಭ್ಯವಾಗುವ ಬೆತ್ತವನ್ನು ಸಂಗ್ರಹಿಸಿ ವಾಹನದಲ್ಲಿ ತಂದು ಬುಟ್ಟಿ ಹೆಣೆಯುತ್ತಾರೆ. ದೊಡ್ಡ ಬುಟ್ಟಿ ಹೆಣೆದು ನೀಡಿದಲ್ಲಿ 300ರಿಂದ 350 ರೂ. ಲಭಿಸುತ್ತದೆ. ದಂಪತಿ ಒಟ್ಟು ಸೇರಿ ದಿನವೊಂದಕ್ಕೆ ನಾಲ್ಕರಿಂದ ಐದು ಬುಟ್ಟಿ ಹೆಣೆಯುತ್ತಾರೆ. ಕುರುಕ್ಕನ್‌ಕುನ್ನು ತರವಾಡಿನಲ್ಲಿ ನಡೆಯುವ ಕಳಿಯಾಟ ಮಹೋತ್ಸವಕ್ಕೆ ನೂರಕ್ಕೂ ಹೆಚ್ಚಿನ ಬುಟ್ಟಿಗಳ ಅಗತ್ಯವಿದ್ದು, ಇವೆಲ್ಲವನ್ನು ಪಾರಂಪರಿಕವಾಗಿ ನಿರ್ಮಿಸುತ್ತಿರುವವರಿಂದ ತಯಾರಿಸಿ ಬಳಸಿಕೊಳ್ಳುವುದು ವಾಡಿಕೆ. ಜಿಲ್ಲೆಯಲ್ಲಿ ಸಮುದಾಯದ ಐವತ್ತರಷ್ಟು ಕುಟುಂಬಗಳು ಕುಲಕಸುಬು ಬುಟ್ಟಿ ಹೆಣೆಯುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದು, ಪ್ರಸಿದ್ಧ ವಯನಾಟ್ ಕುಲವನ್ ತೆಯ್ಯಂಕೆಟ್ಟು ಸಮಾರಂಭದಲ್ಲಿ ಉಪಯೋಗಕ್ಕೆ ಬೇಕಾಗಿರುವ ಪಾರಂಪರಿಕ ಬುಟ್ಟಿಗಳನ್ನು ಈ ಬಾರಿ ಹೆಣೆದು ನೀಡುವ ಅವಕಾಶ ಕುಮಾರ್ ದಂಪತಿಗೆ ಒದಗಿದೆ. ಕುರುಕನ್‌ಕುನ್ನು ತರವಾಡು ಮನೆಗೆ ಬುಟ್ಟಿ ಹೆಣೆದು ನೀಡಿದ ನಂತರವೇ ಇತರರಿಗೆ ಬುಟ್ಟಿ ಮಾರಾಟ ಮಾಡುವ ಸಂಪ್ರದಾಯವನ್ನು ಇವರು ಮುಂದುವರಿಸಿಕೊಂಡು ಬರುತ್ತಿದ್ದಾರೆ. ವಿದ್ಯಾರ್ಥಿಗಳಾಗಿರುವ ಪ್ರವೀಣ್ ಕುಮಾರ್ ಹಾಗೂ ಪವಿತ್ರಾ ಜತೆ ಪಂಚಾಯಿತಿ ವತಿಯಿಂದ ಲಭಿಸಿದ ಮನೆಯಲ್ಲಿ ವಾಸ್ತವ್ಯ ಹೂಡಿರುವ ಕುಟುಂಬ, ಸಣ್ಣ ಆದಾಯದಲ್ಲಿ ಕಾಲ ಕಳೆಯುತ್ತಿದೆಯಾದರೂ ಪಾರಂಪರಿಕ ಕಸುಬು ಮರೆಯದೆ ಬದುಕುತ್ತಿದೆ.

ಕುಲಕಸುಬಿನಿಂದ ನಮ್ಮ ಜನಾಂಗ ಇಂದು ದೂರ ಉಳಿದಿದೆ. ಕಚ್ಚಾವಸ್ತು ಲಭ್ಯತೆಯಲ್ಲೂ ಕೊರತೆ ಎದುರಾಗಿರುವುದಲ್ಲದೆ, ಪ್ಲಾಸ್ಟಿಕ್ ಉತ್ಪನ್ನಗಳು ಈ ಸ್ಥಾನವನ್ನು ತುಂಬಿಕೊಂಡಿರುವುದರಿಂದ ಬುಟ್ಟಿ ಹೆಣೆಯುವ ಕಾಯಕ ಮರೆಯಾಗುವ ಹಂತ ತಲುಪಿದೆ. ಮನೆಗಳಿಗೆ ತೆರಳಿ ಬುಟ್ಟಿ ಹೆಣೆಯುವ ಕಾಯಕ ಇದೇ ಮೊದಲ ಬಾರಿಗೆ ನಡೆಸಲಾಗುತ್ತಿದೆ. ತರವಾಡುಮನೆಗೆ ಬುಟ್ಟಿ ಪೂರೈಸುವ ಅವಕಾಶ ಲಭಿಸಿರುವುದು ಹೊಸ ಅನುಭವ. ಕುಮಾರ್, ಉಷಾ ತೆಯ್ಯಂಕೆಟ್ಟ್‌ಗೆ ಬುಟ್ಟಿ ಹೆಣೆಯುವವರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net