

ಉಳ್ಳಾಲ: ರೈಲು ಹಳಿಯಿಂದಲೂ ನೀರು, ರಾಷ್ಟ್ರೀಯ ಹೆದ್ದಾರಿಯಿಂದಲೂ ನೀರು. ಮಳೆಗಾಲದಲ್ಲಿ ಬಹುತೇಕ ಮನೆಗಳು ಮುಳುಗಿ ಹೋಗುವುದರಿಂದ ನಿವಾಸಿಗರು ಆತಂಕದಲ್ಲೇ ದಿನಗಳೆಯಬೇಕು. ಸಮಸ್ಯೆ ಯಾರಲ್ಲಿ ಹೇಳಬೇಕು, ಪರಿಹಾರ ಯಾರಲ್ಲಿ ಕೇಳಬೇಕು ಎನ್ನುವುದೇ ಯಕ್ಷಪ್ರಶ್ನೆ! ಇದು ಸೋಮೇಶ್ವರ ಉಚ್ಚಿಲ ಪರಿಸರ ನಿವಾಸಿಗರ ದುಸ್ಥಿತಿ.
ಕೇರಳದಲ್ಲಿ ಚರಂಡಿ ಮತ್ತು ಸರ್ವೀಸ್ ರಸ್ತೆ ನಿರ್ಮಿಸಿದ ಬಳಿಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸಲಾಗುತ್ತದೆ. ಆದರೆ ಇಲ್ಲಿ ರಾ.ಹೆ.ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಟೋಲ್ ಸುಂಕ ವಸೂಲಾತಿ ಆರಂಭಿಸಲಾಗುತ್ತದೆ. ಚರಂಡಿ ನಿರ್ಮಾಣ ಪರಿಕಲ್ಪನೆಯೇ ಇಲ್ಲ. ಸರ್ವೀಸ್ ರಸ್ತೆ ಎನ್ನುವುದು ಬಸ್ ತಂಗುದಾಣದ ಬಳಿ ಮಾತ್ರ ಸೀಮಿತ ಎನಿಸಿದೆ. ಪರಿಣಾಮವಾಗಿ ಮಳೆಗಾಲದಲ್ಲಿ ಭಾರಿ ಪ್ರಮಾಣದ ನೀರು ಎಲ್ಲೆಂದರಲ್ಲಿ ಹರಿದು ರಸ್ತೆ ಬದಿ ಅಂಗಡಿಗಳಿಗೆ ನುಗ್ಗುತ್ತಿದೆ. ಕೆಲವು ಕಡೆಗಳಲ್ಲಿ ನೀರು ಹರಿಯುವ ವ್ಯವಸ್ಥೆಯೇ ಇಲ್ಲದೆ ಕೃತಕ ನೆರೆ ಸೃಷ್ಟಿಯಾಗುತ್ತಿದೆ. ಸೋಮೇಶ್ವರ ಪುರಸಭಾ ವ್ಯಾಪ್ತಿಯ ಉಚ್ಚಿಲದಲ್ಲಿ ಮನೆಗಳಿಗೆ ನೀರು ನುಗ್ಗುವುದರಿಂದ ಮಳೆಗಾಲ ಎಂದರೆ ಭಯಾನಕವಾಗಿದೆ.
ರಾಜಕಾಲುವೆಗೆ ಮೂರು ಕಡೆಗಳಲ್ಲಿ ಅಣೆಕಟ್ಟು ನಿರ್ಮಿಸಲಾಗಿದ್ದು, ಅದರಲ್ಲಿ ಮರ, ತೆಂಗಿನ ಗರಿಗಳು, ಮಣ್ಣು ತುಂಬಿದೆ. ಸಂಕೊಳಿಗೆ ಜಂಕ್ಷನ್ನಿಂದ ರಾ.ಹೆ.ಯಲ್ಲೇ ನೀರು ಹರಿದು ಉಚ್ಚಿಲಕ್ಕೆ ಬರುತ್ತದೆ. ಮತ್ತೊಂದೆಡೆ ರೈಲ್ವೇ ಇಲಾಖೆಯಿಂದ ರೈಲು ಹಳಿ ಪಕ್ಕ ಹಾಕಿದ ಮಣ್ಣು ಕೊಚ್ಚಿಹೋಗಿ ಜನರು ಬಳಸುತ್ತಿದ್ದ ಕಾಲುದಾರಿ ಮತ್ತು ಚರಂಡಿಯೂ ಮುಚ್ಚಲ್ಪಟ್ಟಿದೆ. ಎರಡೂ ಕಡೆಗಳಿಂದ ಏಕಕಾಲಕ್ಕೆ ರಾ.ಹೆ.ಯಲ್ಲಿ ಬರುವ ನೀರು ಮನೆಗಳಿಗೆ ನುಗ್ಗುವುದರಿಂದ ಸುಮಾರು 150ರಷ್ಟು ಮನೆಗಳಲ್ಲಿ ಮಳೆಗಾಲದ ವಾಸ ಸಂಕಷ್ಟವಾಗಿದೆ.
ಈ ಬಾರಿ ಸುರಿದ ಮಳೆಗೆ ನೂರಕ್ಕೂ ಅಧಿಕ ಮನೆಗಳಿಗೆ ಕೆಸರು ಮಿಶ್ರಿತ ನೀರು ನುಗ್ಗಿ ಲಕ್ಷಾಂತರ ಮೌಲ್ಯದ ವಸ್ತು ಹಾನಿಯಾಗಿದೆ. ಈ ಘಟನೆ ತಡರಾತ್ರಿ ಬಳಿಕವೇ ಸಂಭವಿಸಿದ್ದರಿಂದ ನಿವಾಸಿಗರಿಗೆ ನಿದ್ದೆಯಿಲ್ಲ. ಮನೆಗಳಲ್ಲಿ ವಾಸವೇ ದುಃಸ್ವಪ್ನವಾಗಿತ್ತು. ಒಂದೆಡೆ ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಯಾದರೆ ಮತ್ತೊಂದೆಡೆ ಮನೆ ಸ್ವಚ್ಛಗೊಳಿಸುವುದು ಸವಾಲೆನಿಸಿದೆ. ಸರ್ಕಾರದಿಂದ ಸಿಗುವ ಐದು ಸಾವಿರ ಪರಿಹಾರ ಹಣ ಸ್ವಚ್ಛತೆಗೂ ಸಾಕಾಗದ ಪರಿಸ್ಥಿತಿ. ಮಳೆಗೆ ಒಳರಸ್ತೆಗಳೂ ಮುಳುಗಿ ಕೃತಕ ನೆರೆ ಸೃಷ್ಟಿಯಾಗುತ್ತಿದೆ. ರಾ.ಹೆ.ಕಾಮಗಾರಿ ನಡೆದ ಬಳಿಕ ಕಳೆದ 10 ವರ್ಷಗಳಿಂದ ಈ ಸಮಸ್ಯೆ ಇದ್ದು ಜನಪ್ರತಿನಿಧಿಗಳು, ಅಧಿಕಾರಿಗಳ ಬಳಿ ಓಡಾಟಕ್ಕೆ ಸ್ಥಳೀಯರು ಅದೆಷ್ಟೋ ಚಪ್ಪಲಿಗಳನ್ನು ಸವೆಸಿದರೂ ಪ್ರಯೋಜನ ಶೂನ್ಯ.
ಉಚ್ಚಿಲ ಶಾಲೆಗೆ ನಿರಂತರ ರಜೆ
ಮಳೆನೀರಿನ ಸಮಸ್ಯೆ ಉಚ್ಚಿಲ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೂ ನಿರಂತರ ಕಾಡುತ್ತಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಬರುವ ನೀರು ಹರಿಯಲು ಸೂಕ್ತ ವ್ಯವಸ್ಥೆ ಇಲ್ಲದೆ ಶಾಲೆಯೊಳಗೇ ನುಗ್ಗುವುದರಿಂದ ಶೇ.40ರಷ್ಟು ಶಾಲಾ ಕಟ್ಟಡವೇ ಮುಳುಗಿ ಪುಸ್ತಕ, ಕಲಿಕಾ ವಸ್ತುಗಳು ಹಾನಿಯಾಗುತ್ತಿವೆ. ಮಳೆನಿಂತ ಬಳಿಕ ಒಂದೆರಡು ದಿನ ನೀರು ನಿಂತಿರುತ್ತದೆ, ಬಳಿಕ ಶಾಲೆಯೊಳಗೆ ನುಗ್ಗಿದ ಕೆಸರು ಸ್ವಚ್ಛ ಮಾಡಲು ಮತ್ತೆ ಒಂದು ದಿನ ಬೇಕಾಗುತ್ತದೆ. ತರಗತಿ ನಡೆಸಬಹುದಾದರೂ ಮಧ್ಯಾಹ್ನದ ಊಟ ತಯಾರಿ ಸವಾಲಾಗಿರುತ್ತದೆ.
ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆಯಾಗಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ಯಾವೆಲ್ಲಾ ಇಲಾಖೆಗೆ ಪತ್ರ ಬರೆಯಬೇಕೆಂದು ತೀರ್ಮಾನಿಸಿ ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿಗೆ ಸೂಚನೆ ನೀಡಿದ್ದೇವೆ. ಪುಟ್ಟರಾಜು ಡಿ., ಉಳ್ಳಾಲ ತಾಲೂಕು ತಹಸೀಲ್ದಾರ್ ನಯಾಪಟ್ನ, ಉಚ್ಚಿಲಗುಡ್ಡೆ, ಅಜ್ಜಿನಡ್ಕ, ಬಟ್ಟಪ್ಪಾಡಿಯಲ್ಲಿ ನೀರು ಹರಿಯಲು ಚರಂಡಿಯ ವ್ಯವಸ್ಥೆ ಇಲ್ಲದೆ ಅವೈಜ್ಞಾನಿಕ ರಾ.ಹೆ. ನಿರ್ಮಾಣದಿಂದಾಗಿ ಮಳೆ ಬಂದಾಗ ಏಕಾಏಕಿ ನೀರು ನುಗ್ಗುತ್ತಿದೆ, ಮನೆಯಲ್ಲಿರುವ ಸ್ವತ್ತು ಹಾನಿಯಾಗುವ ಜತೆಗೆ ಜನರು ಜೀವಭಯದಿಂದ ದಿನ ಕಳೆಯುವಂತಾಗಿದೆ. ಸಲಾಂ ಉಚ್ಚಿಲ್, ಸಾಮಾಜಿಕ ಹೋರಾಟಗಾರ. ರೈಲ್ವೇ ಇಲಾಖೆ ಹಳಿಪಕ್ಕ ಹಾಕಿದ ಮಣ್ಣು ಕೊಚ್ಚಿಹೋಗಿ ರಸ್ತೆ, ಚರಂಡಿ ಮುಚ್ಚಲ್ಪಟ್ಟಿದೆ. ರಾ.ಹೆ.ಯಲ್ಲಿ ಚರಂಡಿಯೇ ಇಲ್ಲ. ರಾಜಕಾಲುವೆಯಲ್ಲಿ ಮರ, ಹುಲ್ಲು, ಹೂಳು ತುಂಬಿ ಭಾರಿ ಪ್ರಮಾಣದ ನೀರು ಮನೆಗಳಿಗೆ ನುಗ್ಗುತ್ತಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಯು.ಬಿ.ಎಂ. ರಹೀಂ, ಸ್ಥಳೀಯ ನಿವಾಸಿ 31 ವರ್ಷಗಳಿಂದ ಇಲ್ಲಿ ವಾಸವಿದ್ದೇವೆ. ಕಳೆದ 15 ವರ್ಷಗಳಿಂದ ಮಳೆಗಾಲದಲ್ಲಿ ಇಲ್ಲಿ ವಾಸವೇ ಕಷ್ಟವಾಗಿದೆ. ಹೆಚ್ಚಾಗಿ ತಡರಾತ್ರಿಯೇ ಮನೆಗಳಿಗೆ ನೀರು ನುಗ್ಗುತ್ತದೆ. ಈ ಬಾರಿ ನಮ್ಮ ಮನೆಯ ಆಸುಪಾಸಿನ ಮನೆಗಳಿಗೆ ಕೆಸರು ಮಿಶ್ರಿತ ನೀರು ನುಗ್ಗಿ ಎಲ್ಲ ವಸ್ತುಗಳು ಹಾಳಾಗಿ ಮರುದಿನಕ್ಕೆ ಆಹಾರ ಸಾಮಗ್ರಿಗಳೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಮಿತ ರವೀಂದ್ರ ಉಚ್ಚಿಲ, ನಿವೃತ್ತ ಶಿಕ್ಷಕಿ https://www.vijayavani.net/huge-pothole-on-perla-poovanadka-road https://www.vijayavani.net/lack-of-parking-space