

ಪ್ಯಾರಿಸ್: ವಿಶ್ವ ಚಾಂಪಿಯನ್ಷಿಪ್ ಪದಕ ವಿಜೇತೆ ನಿಖತ್ ಜರೀನ್ ಮತ್ತು ಟೋಕಿಯೊ ಗೇಮ್ಸ್ ಕಂಚು ವಿಜೇತೆ ಲವ್ಲಿನಾ ಬೋಗೋರ್ಹೈನ್ ಒಲಿಂಪಿಕ್ಸ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಕಠಿಣ ಡ್ರಾ ಪಡೆದಿದ್ದಾರೆ. ಇದರಿಂದಾಗಿ ಪದಕದ ಕನಸು ನನಸಾಗಿಸಲು ಇವರಿಬ್ಬರು ಕಷ್ಟಕರ ಹಾದಿಯಲ್ಲಿ ಸಾಗಬೇಕಾದ ಸವಾಲು ಎದುರಿಸಿದ್ದಾರೆ. ಪುರುಷರ ವಿಭಾಗದಲ್ಲಿ ನಿಶಾಂತ್ ದೇವ್ ಮತ್ತು ಅಮಿತ್ ಪಾಂಗಲ್ ಸುಲಭ ಡ್ರಾ ಪಡೆದಿದ್ದಾರೆ.
ಒಲಿಂಪಿಕ್ಸ್ನಲ್ಲಿ ಇದುವರೆಗೆ ಭಾರತದ ಮೂವರು ಬಾಕ್ಸರ್ಗಳು ಕಂಚಿನ ಪದಕ ಜಯಿಸಿದ್ದಾರೆ. ಅವರೆಂದರೆ ವಿಜೇಂದರ್ ಸಿಂಗ್ (2008), ಮೇರಿ ಕೋಮ್ (2012) ಮತ್ತು ಲವ್ಲಿನಾ (2021). ಈ ಬಾರಿ ಭಾರತದ 6 ಬಾಕ್ಸರ್ಗಳು ಕಣದಲ್ಲಿದ್ದು, ಪದಕದ ಬಣ್ಣ ಬದಲಾಯಿಸುವ ನಿರೀಕ್ಷೆ ಇದೆ.
ಮಹಿಳೆಯರ 50 ಕೆಜಿ ವಿಭಾಗದಲ್ಲಿ 28 ವರ್ಷದ ಜರೀನ್ ಜರ್ಮನಿಯ ಮ್ಯಾಕ್ಸಿ ಕ್ಲೋಟ್ಜೆರ್ ಎದುರು ಭಾನುವಾರ ಮೊದಲ ಪಂದ್ಯ ಆಡಲಿದ್ದಾರೆ. ಬೆನ್ನಲ್ಲೇ ಏಷ್ಯನ್ ಗೇಮ್ಸ್ ಅಗ್ರ ಶ್ರೇಯಾಂಕಿತೆ ಹಾಗೂ ಹಾಲಿ ಚಾಂಪಿಯನ್ ಚೀನಾದ ವು ಯು ವಿರುದ್ಧ ಆಡುವ ಸವಾಲು ಹೊಂದಿದ್ದಾರೆ. ಈ ಸುತ್ತು ದಾಟಿದರೆ ಏಷ್ಯನ್ ಗೇಮ್ಸ್ ರಜತ ವಿಜೇತೆ ಥಾಯ್ಲೆಂಡ್ನ ಚುತಮತ್ ರಕ್ಸತ್ ಸವಾಲು ಎದುರಾಗಲಿದೆ. ಇವೆರಡು ಸವಾಲು ಗೆದ್ದರೆ ಅವರು ಚಿನ್ನ ಗೆಲ್ಲುವ ೇವರಿಟ್ ಎನಿಸಲಿದ್ದಾರೆ.
ಟೋಕಿಯೊದಲ್ಲಿ 69 ಕೆಜಿ ವಿಭಾಗದಲ್ಲಿ ಕಂಚು ಗೆದ್ದಿದ್ದ ಅಸ್ಸಾಂ ಬಾಕ್ಸರ್ ಲವ್ಲಿನಾ ಈ ಬಾರಿ 75 ಕೆಜಿ ವಿಭಾಗದಲ್ಲಿ ಕಣಕ್ಕಿಳಿಯಲಿದ್ದು, ಮೊದಲ ಸುತ್ತಿನಲ್ಲಿ ನಾರ್ವೆಯ ಸುನ್ನಿವಾ ಹೋಪ್ಸ್ಟಡ್ ವಿರುದ್ಧ ಆಡಲಿದ್ದಾರೆ. ಕ್ವಾರ್ಟರ್ೈನಲ್ನಲ್ಲಿ ಹಾಲಿ ಏಷ್ಯಾಡ್ ಚಾಂಪಿಯನ್, 2 ಬಾರಿಯ ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್ಷಿಪ್ ಪದಕ ವಿಜೇತೆ ಚೀನಾದ ಲಿ ಕ್ವಿಯಾನ್ ವಿರುದ್ಧ ಆಡುವ ಕಠಿಣ ಸವಾಲಿದೆ.
ಏಷ್ಯನ್ ಗೇಮ್ಸ್ ಕಂಚು ವಿಜೇತೆ ಪ್ರೀತಿ ಪನ್ವರ್ (54 ಕೆಜಿ) ಶನಿವಾರವ ಭಾರತದ ಬಾಕ್ಸಿಂಗ್ ಅಭಿಯಾನಕ್ಕೆ ಚಾಲನೆ ನೀಡಲಿದ್ದು, ಮೊದಲ ಸುತ್ತಿನಲ್ಲಿ ವಿಯೇಟ್ನಾಂನ ವೊ ಥಿ ಕಿಮ್ ಅನ್ಹ ವಿರುದ್ಧ ಸೆಣಸಲಿದ್ದಾರೆ. ಜಾಸ್ಮಿನ್ ಲಂಬೋರಿಯಾ (57 ಕೆಜಿ) ಭಾರತೀಯ ಬಾಕ್ಸರ್ಗಳಲ್ಲೇ ಅತ್ಯಂತ ಕಠಿಣ ಡ್ರಾ ಪಡೆದಿದ್ದಾರೆ. ಜಾಸ್ಮಿನ್ಗೆ ಮೊದಲ ಸುತ್ತಿನಲ್ಲೇ ಟೋಕಿಯೊ ಗೇಮ್ಸ್ ರಜತ ವಿಜೇತೆ ಹಾಗೂ ಮಾಜಿ ವಿಶ್ವ ಚಾಂಪಿಯನ್ ಫಿಲಿಪ್ಪಿನ್ಸ್ನ ನೆಸ್ಥಿ ಪೆಟೆಸಿಯೊ ಸವಾಲು ಎದುರಾಗಲಿದೆ.
ಅಮಿತ್, ನಿಶಾಂತ್ಗೆ ಬೈ
ಪುರುಷರ ವಿಭಾಗದಲ್ಲಿ ಅಮಿತ್ ಪಾಂಗಲ್ (51 ಕೆಜಿ) ಮತ್ತು ನಿಶಾಂತ್ ದೇವ್ (71 ಕೆಜಿ) ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದಾರೆ. ಇವರಿಬ್ಬರು ನೇರವಾಗಿ 16ರ ಟ್ಟದಲ್ಲಿ ಕಣಕ್ಕಿಳಿಯಲಿದ್ದಾರೆ. ಅಮಿತ್ಗೆ ಆಫ್ರಿಕನ್ ಗೇಮ್ಸ್ ಚಾಂಪಿಯನ್ ಜಂಬಿಯಾದ ಪ್ಯಾಟ್ರಿಕ್ ಚಿನ್ಯೆಂಬಾ ಮೊದಲ ಸವಾಲಾಗಿದ್ದಾರೆ. ಇವರೆದುರು ಅಮಿತ್ ಕಳೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಗೆದ್ದಿದ್ದರು. ನಿಶಾಂತ್ ಮೊದಲ ಪಂದ್ಯದಲ್ಲಿ ಈಕ್ವೆಡಾರ್ನ ರೋಡ್ರಿಗಸ್ ಟೆನೊರಿಯೊ ವಿರುದ್ಧ ಆಡಲಿದ್ದಾರೆ. ನಿಶಾಂತ್ ಸೆಮೀಸ್ ತನಕ ಭಾರತೀಯ ಬಾಕ್ಸರ್ಗಳಲ್ಲೇ ಸುಲಭ ಡ್ರಾ ಪಡೆದಿದ್ದಾರೆ. ಸೆಮೀಸ್ನಲ್ಲಿ ಅವರಿಗೆ ಅಗ್ರ ಶ್ರೇಯಾಂಕಿತ ಜಪಾನ್ನ ಒಕಜವ ಸವಾಲು ಎದುರಾಗಲಿದೆ.