

ಚಿಕ್ಕಬಳ್ಳಾಪುರ: ನಿರಂತರ ಸುಡು ಬಿಸಿಲಿನ ತಾಪಕ್ಕೆ ತತ್ತರಿಸಿದ್ದ ಜಿಲ್ಲೆಯ ವಿವಿಧೆಡೆ ಶುಕ್ರವಾರ ಮಧ್ಯಾಹ್ನ ಉತ್ತಮ ಮಳೆಯಾಗಿದ್ದು ಮೋಡ ಮುಸುಕಿದ ಹಿನ್ನೆಲೆಯಲ್ಲಿ ತಂಪು ವಾತಾವರಣ ನಿರ್ಮಾಣವಾಗಿತ್ತು.
ಜಿಲ್ಲಾ ಕೇಂದ್ರದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು. ಮತ್ತೆ ಕೆಲವೆಡೆ ಬಿಟ್ಟು ಬಿಟ್ಟು ತುಂತರು ಹನಿಗಳ ಸಿಂಚನವಾಗಿದೆ. ಚದಲಪುರ ಕ್ರಾಸ್, ಅಗಲಗುರ್ಕಿ, ನಂದಿ, ಕಂದವಾರ ಭಾಗಗಳಲ್ಲಿ ಮರಗಳನ್ನು ಬೀಳಿಸುವ ಮಾದರಿಯಲ್ಲಿ ಜೋರು ಗಾಳಿ ಕಂಡು ಬಂತು. ಮಳೆಗೂ ಮೊದಲು ರಾಷ್ಟ್ರೀಯ ಹೆದ್ದಾರಿ 44 ಬೈಪಾಸ್ ರಸ್ತೆಯಲ್ಲಿ ದೊಡ್ಡ ಸುಂಟರಗಾಳಿಗೆ ಧೂಳು, ತ್ಯಾಜ್ಯ ಎದ್ದು ವಾಹನ ಸವಾರರು ಕೆಲ ಕಾಲ ಸಂಚರಿಸಲು ಪರದಾಡುವಂತಾಯಿತು.
ಎಂದಿನಂತೆ ಜೀವನ್ ಆಸ್ಪತ್ರೆ ಮುಂಭಾಗ, ಹಳೇ ಖಾಸಗಿ ಬಸ್ ನಿಲ್ದಾಣ, ಬೆಸ್ಕಾಂ ಕಚೇರಿ, ವಾಪಸಂದ್ರ ಸೇತುವೆ ಸೇರಿದಂತೆ ಕೆಲವೆಡೆ ಜಲಾವೃತಗೊಂಡಿದ್ದು ಜನರು ಸಮಸ್ಯೆ ಅನುಭವಿಸಬೇಕಾಯಿತು.
ಬಿರು ಬೇಸಿಗೆಯಲ್ಲಿ ಆಗಾಗ ಮೋಡ ಮುಸುಕಿದ ವಾತಾವರಣ, ಹನಿಗಳ ಸಿಂಚನದ ಹವಾಮಾನ ವೈಪರೀತ್ಯ ಕಂಡು ಬಂದಿದ್ದು ಮುಂಬರುವ ಮುಂಗಾರು ಮತ್ತು ಹಿಂಗಾರಿನಲ್ಲಿ ಮಳೆ ಪ್ರಮಾಣ ಪರಿಸರ ಮಾಲಿನ್ಯದ ದುಷ್ಪರಿಣಾಮಗಳ ಬಗ್ಗೆ ವಿಚಾರವಾಗಿ ನಾನಾ ಚರ್ಚೆಗಳಾಗುತ್ತಿವೆ.
*ಚರಂಡಿಗಳ ಸ್ವಚ್ಛತೆ ಕಡೆಗಣನೆ
ಬೇಸಿಗೆಯಲ್ಲಿ ಬಹುತೇಕ ಚರಂಡಿಗಳಲ್ಲಿ ತ್ಯಾಜ್ಯ, ಹೂಳು ತುಂಬಿದ್ದು ನಿರೀಕ್ಷೆಗೆ ಅನುಗುಣವಾಗಿ ಸ್ಥಳೀಯ ಆಡಳಿತ ಸಂಸ್ಥೆಗಳು ಸ್ವಚ್ಛತೆಯನ್ನು ಕಾಪಾಡುತ್ತಿಲ್ಲ. ಇದರಿಂದ ಈಗಲೂ ತೊಂದರೆ ಅನುಭವಿಸಬೇಕಾಗಿದೆ. ಸಣ್ಣ ಪ್ರಮಾಣದ ಮಳೆಗೆ ಕೊಳೆಗೇರಿ, ತಗ್ಗು ಪ್ರದೇಶಗಳಲ್ಲಿ ನಾನಾ ಅವಾಂತರಗಳು ಸೃಷ್ಟಿಯಾಗುತ್ತಿವೆ.
*ಜಿಲ್ಲೆಯ ಕೆಲವೆಡೆ ಮಳೆ
ಜಿಲ್ಲೆಯ ಶಿಡ್ಲಘಟ್ಟ, ಗೌರಿಬಿದನೂರು ಸೇರಿದಂತೆ ವಿವಿಧೆಡೆ ಶುಕ್ರವಾರ ಮಳೆ ಸುರಿದಿದೆ. ಬಾಗೇಪಲ್ಲಿ ಮತ್ತು ಗುಡಿಬಂಡೆಯಲ್ಲಿ ಕಡಿಮೆ ಸಮಯ ಬಿಸಿಲು, ಹೆಚ್ಚಿನ ಅವಧಿ ಮೋಡ ಮುಸುಕಿದ ವಾತಾವರಣ ಇತ್ತು. ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದಲೂ ಕನಿಷ್ಠ 22 ಡಿಗ್ರಿ ಸೆಲ್ಸಿಯಷ್ಸ, ಗರಿಷ್ಠ 33 ಡಿಗ್ರಿ ಸೆಲ್ಸಿಯಷ್ಸ ಉಷ್ಣಾಂಶ ಕಂಡು ಬರುತ್ತಿದೆ.