‘ಜೇಮ್ಸ್​’ ಪ್ರೀ-ರಿಲೀಸ್​ ಕಾರ್ಯಕ್ರಮಕ್ಕೆ ಟಾಲಿವುಡ್​ ಸ್ಟಾರ್ ನಟರು ಭಾಗಿ?

Published on
ಬೆಂಗಳೂರು: ಕರುನಾಡ ಪವರ್ ಸ್ಟಾರ್ ನಟ ಪುನೀತ್ ರಾಜ್​ಕುಮಾರ್ ಅವರು ನಿಧರಾದಾಗ, ಅಪ್ಪು ಅವರನ್ನು ಕೊನೆಯ ಬಾರಿ ನೋಡಲು ಸೌತ್ ಮತ್ತು ಉತ್ತರದ ಅನೇಕ ಸಿನಿತಾರೆಯರು ಬೆಂಗಳೂರಿಗೆ ಬಂದು ಅಪ್ಪು ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ನಟ ಪುನೀತ್ ರಾಜ್​ಕುಮಾರ್ ಅವರ ಸಿನಿಮಾಗಳನ್ನು, ಅವರ ಅಭಿಮಾನಿಗಳನ್ನು, ಅಪ್ಪು ವ್ಯಕ್ತಿತ್ವವನ್ನು ಹಾಡಿ ಹೊಗಳಿದರು. ಇದೀಗ, ಅಪ್ಪು ನಟನೆಯ ಕೊನೆಯ ಚಿತ್ರವಾದ ‘ಜೇಮ್ಸ್​’ ಪ್ರೀ-ರಿಲೀಸ್​ ಕಾರ್ಯಕ್ರಮಕ್ಕೆ ಕೂಡಾ ಹಲವು ಸ್ಟಾರ್ ನಟರು ಆಗಮಿಸುವ ಮೂಲಕ ಅಪ್ಪುಗೆ ವಿಶೇಷವಾಗಿ ಗೌರವ, ನಮನ ಸಲ್ಲಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಅಂದಹಾಗೆ, ನಟ ಪುನೀತ್​ ರಾಜ್​ಕುಮಾರ್ ಅಭಿನಯಿಸಿರುವ ಕೊನೆಯ ಸಿನಿಮಾ ‘ಜೇಮ್ಸ್’ ಮೇಲೆ ದೊಡ್ಡ ಮಟ್ಟದ ನಿರೀಕ್ಷೆಗಳು ಇವೆ. ಈ ಚಿತ್ರದ ಮೂಲಕ ಅಪ್ಪು ಅವರನ್ನು ಕೊನೆಯ ಬಾರಿ ಬೆಳ್ಳಿ ತೆರೆಯ ಮೇಲೆ ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಕಾತುರರಾಗಿದ್ದಾರೆ. ಈಗ, ಇದೇ ಚಿತ್ರತಂಡ ಮಾರ್ಚ್ 6 ರಂದು ಬೆಂಗಳೂರಿನ ಹೊಸಪೇಟೆಯಲ್ಲಿ ಒಂದು ಭರ್ಜರಿ ಪ್ರೀ-ರಿಲೀಸ್​ ಇವೆಂಟ್ ನಡೆಸಲಿದೆ. ಹಾಗಾಗಿ, ಈ ಕಾರ್ಯಕ್ರಮಕ್ಕೆ ತೆಲುಗಿನ ಖ್ಯಾತ ನಟ ಹಾಗೂ ಅಪ್ಪು ಅವರ ಆಪ್ತ ಗೆಳೆಯ ಜ್ಯೂ.ಎನ್​ಟಿಆರ್, ತೆಲುಗಿನ ಮೆಗಾ ಸ್ಟಾರ್ ನಟ ಚಿರಂಜೀವಿ ಮತ್ತು ಹಲವು ಸ್ಟಾರ್ ನಟರು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
ಹೌದು, ನಟ ಡಾ. ರಾಜ್​ಕುಮಾರ್ ಅವರ ಕುಟುಂಬಕ್ಕೂ ಮತ್ತು ಟಾಲಿವುಡ್ ಮಂದಿಗೂ ತುಂಬಾನೆ ಒಳ್ಳೆಯ ನಂಟಿತ್ತು. ತೆಲುಗಿನ ಸ್ಟಾರ್​ ನಟರು ಬೆಂಗಳೂರಿಗೆ ಬಂದರೆ ಸಾಕು ಅವರು ರಾಜ್​ಕುಮಾರ್ ಕುಟುಂಬದವರನ್ನು ಭೇಟಿ ಮಾಡದೆ ಹೋಗುತ್ತಿರಲಿಲ್ಲ. ಪುನೀತ್​ ನಿಧನದ ನಂತರ ಈಗ ‘ಜೇಮ್ಸ್’ ಚಿತ್ರಕ್ಕೂ ಸಾಥ್ ನೀಡಲು ಪ್ರೀ-ರಿಲೀಸ್​ ಕಾರ್ಯಕ್ರಮಕ್ಕೆ ಅಲ್ಲಿನ ಸ್ಟಾರ್ ನಟರುಗಳು ಆಗಮಿಸುವ ಮೂಲಕ ಅಪ್ಪು​ ಅವರಿಗೆ ವಿಶೇಷವಾಗಿ ಗೌರವ ತೋರಿಸುತ್ತಿದ್ದಾರೆ ಎಂದರೆ ತಪ್ಪಾಗುವುದಿಲ್ಲ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net