ಮುಂದಿನ ವರ್ಷಕ್ಕೆ ಟೋಕಿಯೊ ಒಲಿಂಪಿಕ್ಸ್; ಜಪಾನ್-ಐಒಸಿ ಜಂಟಿ ನಿರ್ಧಾರವನ್ನು ಸ್ವಾಗತಿಸಿದ ಭಾರತ

Oly 24 march 20
Published on

ನವದೆಹಲಿ: ಕಳೆದ ಕೆಲ ದಿನಗಳ ಅನಿಶ್ಚಿತತೆಯ ಬಳಿಕ ಕೊನೆಗೂ ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಮುಂದಿನ ವರ್ಷಕ್ಕೆ ಮುಂದೂಡಲು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಮತ್ತು ಆತಿಥೇಯ ಜಪಾನ್ ಜಂಟಿಯಾಗಿ ನಿರ್ಧರಿಸಿವೆ. ಕರೊನಾ ವೈರಸ್ ವಿರುದ್ಧ ಇಡೀ ಜಗತ್ತೇ ಹೋರಾಡುತ್ತಿರುವ ಸಮಯದಲ್ಲಿ ನಿರೀಕ್ಷೆಯಂತೆಯೇ ಈ ಮಹತ್ವದ ನಿರ್ಧಾರ ಹೊರಬಿದ್ದಿದೆ. ಮಹಾ ಕ್ರೀಡಾಕೂಟದಲ್ಲಿ ಭಾಗವಹಿಸುವ ಹಲವು ದೇಶಗಳು ಮತ್ತು ಕ್ರೀಡಾಪಟುಗಳ ಒತ್ತಾಸೆಯಂತೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

‘ಒಲಿಂಪಿಕ್ಸ್​ಅನ್ನು ಒಂದು ವರ್ಷದ ಮಟ್ಟಿಗೆ ಮುಂದೂಡುವ ಪ್ರಸ್ತಾಪವನ್ನು ನಾನು ಸಲ್ಲಿಸಿದ್ದೇನೆ. ಐಒಸಿ ಅಧ್ಯಕ್ಷ ಥಾಮಸ್ ಬಾಷ್ ಇದನ್ನು ಶೇ. 100ರಷ್ಟು ಒಪ್ಪಿಕೊಂಡಿದ್ದಾರೆ’ ಎಂದು ಜಪಾನ್ ಪ್ರಧಾನಿ ಶಿಂಜೋ ಅಬೆ ಮಂಗಳವಾರ ತಿಳಿಸಿದ್ದಾರೆ.

ಜುಲೈ 24ರಿಂದ ಆಗಸ್ಟ್ 9ರವರೆಗೆ ಒಲಿಂಪಿಕ್ಸ್ ಸಂಘಟಿಸಲು ಸಂಪೂರ್ಣವಾಗಿ ಸಜ್ಜಾಗಿ ನಿಂತಿದ್ದ ಜಪಾನ್​ಗೆ ಇದು ದೊಡ್ಡ ಹಿನ್ನಡೆಯಾಗಿದೆ. 16 ದಿನಗಳ ಕ್ರೀಡಾಕೂಟದ ಎಲ್ಲ ಕ್ರೀಡಾಂಗಣಗಳು ಈಗಾಗಲೆ ಸಂಪೂರ್ಣ ಸಿದ್ಧವಾಗಿದ್ದರೆ, ಬಹುತೇಕ ಎಲ್ಲ ಕ್ರೀಡಾಸ್ಪರ್ಧೆಗಳ ಟಿಕೆಟ್​ಗಳೂ ಮಾರಾಟವಾಗಿವೆ.

‘ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಸೂಚನೆಯ ಅನ್ವಯ 2020ರ ಒಲಿಂಪಿಕ್ಸ್ ಗೇಮ್್ಸ ಮುಂದೂಡಿಕೆಯಾಗಿದೆ. 2021ರ ಬೇಸಗೆ ಋತುವಿನಲ್ಲೇ ಗೇಮ್್ಸ ಮರುನಿಗದಿಯಾಗಲಿದೆ. ಕ್ರೀಡಾಪಟುಗಳು ಮತ್ತು ಎಲ್ಲರ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಜಪಾನ್ ಮತ್ತು ಐಒಸಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿದೆ. ಜಗತ್ತಿನ ಎಲ್ಲೆಡೆ ಕರೊನಾ ಭೀತಿ ಕಾಡುತ್ತಿರುವುದರಿಂದ ಸದ್ಯ 170 ಕೋಟಿಯಷ್ಟು ಜನರು ಲಾಕ್​ಡೌನ್ ಸ್ಥಿತಿಯಲ್ಲಿದ್ದಾರೆ. ಇದರಿಂದ ಕ್ರೀಡಾ ಚಟುವಟಿಕೆಗಳೇ ಸಂಪೂರ್ಣ ಬಂದ್ ಆಗಿದ್ದು, ಕ್ರೀಡಾಪಟುಗಳ ಒಲಿಂಪಿಕ್ಸ್ ಸಿದ್ಧತೆಗೂ ಭಾರಿ ಹಿನ್ನಡೆಯಾಗಿದೆ. ಹಲವು ಕ್ರೀಡೆಗಳಲ್ಲಿ ಒಲಿಂಪಿಕ್ಸ್ ಅರ್ಹತಾ ಕೂಟಗಳೇ ಮುಂದೂಡಿಕೆಯಾಗಿರುವುದರಿಂದ, ಒಲಿಂಪಿಕ್ಸ್ ಅರ್ಹತೆಯ ಮಾನದಂಡದ ಬಗ್ಗೆಯೇ ಗೊಂದಲ ಮೂಡಿತ್ತು.

ಒಲಿಂಪಿಕ್ಸ್ ಭವಿಷ್ಯ ನಿರ್ಧಾರಕ್ಕೆ 4 ವಾರಗಳ ಕಾಲಾವಕಾಶ ಬೇಕು ಎಂದು ಐಒಸಿ ಭಾನುವಾರವಷ್ಟೇ ಹೇಳಿತ್ತು. ಆದರೆ ಇದಕ್ಕೆ ಕ್ರೀಡಾ ವಲಯದಿಂದ ಭಾರಿ ಟೀಕೆಗಳು ವ್ಯಕ್ತವಾಗಿದ್ದವು. ಕೆನಡ ಮತ್ತು ಆಸ್ಟ್ರೇಲಿಯಾ ದೇಶಗಳು 2020ರಲ್ಲೇ ಒಲಿಂಪಿಕ್ಸ್ ನಡೆಸುವುದಾದರೆ ನಾವು ಭಾಗವಹಿಸುವುದಿಲ್ಲ ಎಂದು ಈಗಾಗಲೆ ಅಧಿಕೃತವಾಗಿ ಘೋಷಿಸಿದ್ದರೆ, ಬ್ರಿಟನ್ ಕೂಡ ಇಂಥದ್ದೇ ಚಿಂತನೆಯಲ್ಲಿತ್ತು. ಅಮೆರಿಕದ ಕ್ರೀಡಾಪಟುಗಳಿಂದಲೂ ಒಲಿಂಪಿಕ್ಸ್ ಮುಂದೂಡಿಕೆಗೆ ಭಾರಿ ಒತ್ತಡ ಬಂದಿತ್ತು. 2020ರ ಯುರೋ ಕಪ್ ಸಹಿತ ಹಲವು ಪ್ರತಿಷ್ಠಿತ ಕ್ರೀಡಾಕೂಟಗಳು ಈಗಾಗಲೆ ಮುಂದೂಡಿಕೆಯಾಗಿದ್ದರಿಂದ ಒಲಿಂಪಿಕ್ಸ್ ಸಂಘಟಕರಿಗೂ ಮುಂದೂಡಿಕೆ ಅನಿವಾರ್ಯವೆನಿಸಿತ್ತು.  

2ನೇ ಬಾರಿ ಹೊಡೆತ

ಈ ಮುನ್ನ 1940ರಲ್ಲಿ ಟೋಕಿಯೊದಲ್ಲೇ ನಿಗದಿಯಾಗಿದ್ದ ಒಲಿಂಪಿಕ್ಸ್ 2ನೇ ಮಹಾಯುದ್ಧದಿಂದಾಗಿ ರದ್ದಾಗಿತ್ತು. ಬಳಿಕ 1960ರಲ್ಲಿ ಜಪಾನ್, ಒಲಿಂಪಿಕ್ಸ್ ಆತಿಥ್ಯ ವಹಿಸಿದ ಏಷ್ಯಾದ ಮೊದಲ ದೇಶ ಎಂಬ ಹೆಗ್ಗಳಿಕೆಯನ್ನು ಕೊನೆಗೂ ಸಂಪಾದಿಸಿತ್ತು.

ಐಒಸಿ ನಿರ್ಧಾರ ಸ್ವಾಗತಿಸಿದ ಐಒಎ

ಟೋಕಿಯೊ ಒಲಿಂಪಿಕ್ಸ್ ಮುಂದೂಡುವ ಐಒಸಿ ನಿರ್ಧಾರವನ್ನು ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) ಸ್ವಾಗತಿಸಿದೆ. ಸರಿಯಾದ ರೀತಿಯಲ್ಲಿ ಅಭ್ಯಾಸ ಸಾಧ್ಯವಾಗದೆ ಚಿಂತೆಯಲ್ಲಿದ್ದ ದೇಶದ ಕ್ರೀಡಾಪಟುಗಳಿಗೂ ಇದೊಂದು ಸಮಾಧಾನಕರ ಸುದ್ದಿ. ಲಾಕ್​ಡೌನ್ ಮುಕ್ತಾಯಗೊಂಡ ಬೆನ್ನಲ್ಲೇ ಕ್ರೀಡಾಪಟುಗಳು, ಕ್ರೀಡಾ ಸಂಸ್ಥೆಗಳು ಮತ್ತು ಪ್ರಾಯೋಜಕರ ಜತೆಗೆ ರ್ಚಚಿಸಲಿದ್ದೇವೆ ಎಂದು ಐಒಎ ಕಾರ್ಯದರ್ಶಿ ರಾಜೀವ್ ಮೆಹ್ತಾ ತಿಳಿಸಿದ್ದಾರೆ. ಭಾರತದ ಇತರ ಕ್ರೀಡಾ ಸಂಸ್ಥೆಗಳೂ ಐಒಎ ನಿರ್ಧಾರವನ್ನು ಸ್ವಾಗತಿಸಿವೆ. ಸದ್ಯ ಸುಮಾರು 80 ಭಾರತೀಯರು ಒಲಿಂಪಿಕ್ಸ್​ಗೆ ಅರ್ಹತೆ ಸಂಪಾದಿಸಿದ್ದಾರೆ. ಅಥ್ಲೆಟಿಕ್ಸ್, ಆರ್ಚರಿ, ಬಾಕ್ಸಿಂಗ್, ಈಕ್ವೆಸ್ಟ್ರಿಯನ್, ಹಾಕಿ, ಶೂಟಿಂಗ್ ಮತ್ತು ಕುಸ್ತಿಯಲ್ಲಿ ಭಾರತ ಸ್ಪರ್ಧಿಸಬೇಕಾಗಿದೆ. ಬ್ಯಾಡ್ಮಿಂಟನ್, ವೇಟ್​ಲಿಫ್ಟಿಂಗ್​ನಲ್ಲಿ ಇನ್ನೂ ಅರ್ಹತೆ ಅಂತಿಮವಾಗಿಲ್ಲ. ಟೋಕಿಯೊ ಗೇಮ್ಸ್​ನಲ್ಲಿ ಒಟ್ಟಾರೆ 120 ಭಾರತೀಯರು ಕಣಕ್ಕಿಳಿಯುವ ನಿರೀಕ್ಷೆ ಇದೆ.

ಜಪಾನ್​ನಲ್ಲೇ ಇರಲಿದೆ ಒಲಿಂಪಿಕ್ಸ್ ಜ್ಯೋತಿ

ಕರೊನಾ ಭೀತಿಯ ನಡುವೆ ಮಾರ್ಚ್ 12ರಂದು ಗ್ರೀಸ್​ನ ಅಥೆನ್ಸ್​ನಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಬೆಳಗಿರುವ ಒಲಿಂಪಿಕ್ಸ್ ಜ್ಯೋತಿ ಮಾರ್ಚ್ 19ರಂದು ಆತಿಥೇಯ ಜಪಾನ್​ಗೆ ಹಸ್ತಾಂತರ ಗೊಂಡಿತ್ತು. ಮಾರ್ಚ್ 20ರಂದು ಜಪಾನ್​ಗೆ ಬಂದಿಳಿದ ಜ್ಯೋತಿಯ ರಿಲೇ ಮಾರ್ಚ್ 26ರಿಂದ ನಡೆಯಬೇಕಾಗಿತ್ತು. ಆದರೆ ಈಗ ಒಲಿಂಪಿಕ್ಸ್ ಮುಂದೂಡಿಕೆಯಾಗಿರುವ ನಡುವೆ ಜ್ಯೋತಿ ಜಪಾನ್​ನಲ್ಲೇ ಇರಲಿದೆ ಎಂದು ಐಒಸಿ ತಿಳಿಸಿದೆ.

ಟೋಕಿಯೊ ಒಲಿಂಪಿಕ್ಸ್

ದೇಶಗಳು-203

ಕ್ರೀಡಾಪಟುಗಳು -11,091

ಕ್ರೀಡೆಗಳು-30

ಸ್ಪರ್ಧಾ ವಿಭಾಗಳು-339

45 ಸಾವಿರ ಕೋಟಿ ರೂ. ನಷ್ಟ!

ಟೋಕಿಯೊ ಒಲಿಂಪಿಕ್ಸ್​ಗಾಗಿ ಜಪಾನ್ 96 ಸಾವಿರ ಕೋಟಿ ರೂ. ವ್ಯಯ ಮಾಡಿದೆ. ಕೆಲ ಲೆಕ್ಕಾ ಚಾರದ ಪ್ರಕಾರ ಇದಕ್ಕಿಂತ ದುಪ್ಪಟ್ಟು ಹೂಡಿಕೆ ಮಾಡಲಾಗಿದೆ ಎನ್ನಲಾಗುತ್ತದೆ. ಸದ್ಯ ಒಲಿಂಪಿಕ್ಸ್ ಮುಂದೂಡಿಕೆಯಾಗಿರುವುದರಿಂದ ಜಪಾನ್ 45 ಸಾವಿರ ಕೋಟಿ ರೂ. ನಷ್ಟವನ್ನು ಎದುರಿಸಬೇಕಾಗಿ ತ್ತದೆ. ಆದರೆ ಇದು ಕಿರು ಅವಧಿಗೆ ಆಗಿರು ತ್ತದೆ. ಮುಂದೆ ಒಲಿಂಪಿಕ್ಸ್ ನಡೆದಾಗ ಈ ನಷ್ಟವನ್ನು ಸರಿ ದೂಗಿಸಿಕೊಳ್ಳುವ ಅವಕಾಶ ಜಪಾನ್​ಗೆ ಇರಲಿದೆ. ಒಲಿಂಪಿಕ್ಸ್ ಪ್ರಾಯೋಜಕರು ಮತ್ತು ಪ್ರಸಾರ ಹಕ್ಕು ಹೊಂದಿರುವವರಿಗೂ ಇದು ನಷ್ಟದ ಸಮಯ.

ಮುಂದೂಡಿಕೆ ಇದೇ ಮೊದಲು

ಆಧುನಿಕ ಒಲಿಂಪಿಕ್ಸ್ 1986ರಿಂದ ನಿಯಮಿತ ವಾಗಿ ಪ್ರತಿ 4 ವರ್ಷಕ್ಕೊಮ್ಮೆ ನಡೆಯುತ್ತ ಬಂದಿದೆ. ಮಹಾಯುದ್ಧದ ಸಮಯದಲ್ಲಿ 3 ಬಾರಿ (1916, 1940, 1944) ಒಲಿಂಪಿಕ್ಸ್ ರದ್ದುಗೊಂಡಿತ್ತು. ಅದು ಬಿಟ್ಟರೆ ಕೆಲವೊಮ್ಮೆ ಕೆಲ ದೇಶಗಳು ಕ್ರೀಡಾಕೂಟಕ್ಕೆ ಬಹಿಷ್ಕಾರ ಹಾಕಿದ್ದು, ಉಗ್ರರ ದಾಳಿಯಾಗಿದ್ದು ಮತ್ತು ಪ್ರತಿಭಟನೆಗಳು ನಡೆದ ದೃಷ್ಟಾಂತಗಳಿವೆ. ಆದರೆ ನಿಯಮಿತ 4 ವರ್ಷಗಳ ಅಂತರದಲ್ಲಿ ನಡೆಯುವ ಒಲಿಂಪಿಕ್ಸ್ ಒಂದು ವರ್ಷದ ಮಟ್ಟಿಗೆ ಮುಂದೂಡಿಕೆಯಾಗಿದ್ದು ಇದೇ ಮೊದಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net