ಒಲಿಂಪಿಕ್ಸ್​ ಆರಂಭಕ್ಕೂ ಮುನ್ನವೇ ಕರೊನಾಘಾತ: ಮೊದಲ ಕೋವಿಡ್​ ಪ್ರಕರಣ ವರದಿ

Olympic
Published on

ಟೋಕಿಯೊ: ಈ ಬಾರಿ ಜಪಾನ್​ನ ಟೊಕಿಯೋದಲ್ಲಿ ನಡೆಯಲಿರುವ ಜಾಗತಿಕ ಕ್ರೀಡಾ ಹಬ್ಬ ಒಲಿಂಪಿಕ್ಸ್​ ಆರಂಭಕ್ಕೂ ಮುನ್ನವೇ ಮಹಾಮಾರಿ ಕರೊನಾ ಆಘಾತವಾಗಿದೆ. ಟೋಕಿಯೊ ಒಲಿಂಪಿಕ್ಸ್​ ಅಥ್ಲೆಟಿ ಗ್ರಾಮದಲ್ಲಿ ಕೋವಿಡ್​-19 ಮೊದಲ ಪ್ರಕರಣ ದಾಖಲಾಗಿರುವುದಾಗಿ ಕ್ರೀಡಾ ಸಂಘಟಕರು ಶನಿವಾರ ತಿಳಿಸಿದ್ದು, ಹೊಸ ಕಳವಳಕ್ಕೆ ಕಾರಣವಾಗಿದೆ.

ಮುಂದಿನ ವಾರ ಅಂದರೆ ಜುಲೈ 23ರಿಂದ ಒಲಿಂಪಿಕ್ಸ್​ ಆರಂಭವಾಗಲಿದ್ದು, ಅದಕ್ಕೂ ಮುನ್ನ ಕರೊನಾ ಪ್ರಕರಣ ಕಾಣಿಸಿಕೊಂಡಿರುವುದು ಆತಂಕಕಾರಿ ಸಂಗತಿಯಾಗಿದೆ. ಒಲಿಂಪಿಕ್ಸ್​ ಗ್ರಾಮದ ಸ್ಕ್ರೀನಿಂಗ್​​ ಟೆಸ್ಟ್​ ವೇಳೆ ಮೊದಲ ಓರ್ವ ವ್ಯಕ್ತಿಯಲ್ಲಿ ಮೊದಲ ಕೋವಿಡ್​ ಕೇಸ್​ ಪತ್ತೆಯಾಗಿದೆ ಎಂದು ಟೋಕಿಯೊ ಸಂಘಟನಾ ಸಮಿತಿಯ ವಕ್ತಾರ ಮಸಾ ಟಕಾಯಾ ಮಾಧ್ಯಮಗೊಷ್ಠಿಯಲ್ಲಿ ತಿಳಿಸಿದ್ದಾರೆ.

ಆದಾಗ್ಯೂ, ಗೌಪ್ಯತೆ ಕಾಳಜಿಯಿಂದಾಗಿ ಯಾವ ದೇಶದ ವ್ಯಕ್ತಿಗೆ ಸೋಂಕು ತಗುಲಿದೆ ಎಂಬ ಮಾಹಿತಿಯನ್ನು ಟಕಾಯಾ ಬಹಿರಂಗಪಡಿಸಿಲ್ಲ.

ಟೋಕಿಯೊ ಒಲಿಂಪಿಕ್ಸ್ 2020ರಲ್ಲೇ ನಡೆಯಬೇಕಿತ್ತು. ಆದರೆ, ಕರೊನಾ ಸಾಂಕ್ರಾಮಿಕದಿಂದಾಗಿ ಒಂದು ವರ್ಷಕ್ಕೆ ಮುಂದೂಡಲಾಗಿತ್ತು. ಹೆಚ್ಚಾಗಿ ಪ್ರೇಕ್ಷಕರು ಇಲ್ಲದೆ ಮತ್ತು ಕಠಿಣ ಕ್ಯಾರಂಟೈನ್ ನಿಯಮಗಳ ಅಡಿಯಲ್ಲಿ ಈ ಬಾರಿ ಒಲಿಂಪಿಕ್ಸ್​ ನಡೆಸಲಾಗುತ್ತಿದೆ. ಜುಲೈ 23ರಿಂದ ಒಲಿಂಪಿಕ್ಸ್​ ಆರಂಭವಾಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net