

ನೋಯ್ಡಾ: ಗೌರ್ ಸಿಟಿ ವ್ಯಾಪ್ತಿಯಲ್ಲಿ ಒಂದೂವರೆ ವರ್ಷದ ಹೆಣ್ಣುಮಗು 25 ಅಡಿ ಆಳದ ಗಟಾರಕ್ಕೆ ಬಿದ್ದಾಗ ತುರ್ತುಸೇವೆ 112ರ ಪೊಲೀಸ್ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಮಗುವನ್ನು ರಕ್ಷಿಸಿದ ಘಟನೆ ಸೋಮವಾರ ನಡೆದಿದೆ.
ಗೌರ್ ಸಿಟಿ ವ್ಯಾಪ್ತಿಯಲ್ಲಿ ಸಂಜೆ 5.30ರ ಹೊತ್ತಿಗೆ ಈ ದುರ್ಘಟನೆ ನಡೆದಿದ್ದು, ಕೂಡಲೇ ಸ್ಥಳೀಯರು 112 ಅಧಿಕಾರಿಗಳಿಗೆ ಕರೆ ಮಾಡಿ ನೆರವು ಕೋರಿದ್ದಾರೆ. ಕೂಡಲೇ ಪೊಲೀಸ್ ರೆಸ್ಪಾನ್ಸ್ ವೆಹಿಕಲ್ ಸ್ಥಳಕ್ಕೆ ಹೋಗಿದ್ದು, ಅದರ ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ ಹೆಣ್ಣು ಮಗುವನ್ನು ಗಟಾರದಿಂದ ಮೇಲೆತ್ತಿದ್ದಾರೆ ಎಂದು ನೋಯ್ಡಾದ ಹೆಚ್ಚುವರಿ ಡಿಸಿಪಿ ರಣ್ವಿಜಯ್ ಸಿಂಗ್ ಹೇಳಿದ್ದಾರೆ.
ಮಗುವನ್ನು ರಕ್ಷಿಸುವ ಕಾರ್ಯಾಚರಣೆಯನ್ನು ರವಿಕುಮಾರ್ ಮತ್ತು ಜುಗೇಂದರ್ ಸಿಂಗ್ ಅವರನ್ನು ಒಳಗೊಂಡ ತಂಡ ನಿರ್ವಹಿಸಿದೆ. ಮಗು ಹೇಗೆ ಗಟಾರಕ್ಕೆ ಬಿದ್ದದ್ದು ಮತ್ತು ಆಕೆಯ ಪಾಲಕರ ಕುರಿತ ಮಾಹಿತಿ ಇನ್ನೂ ಲಭ್ಯವಿಲ್ಲ. ಮಗುವನ್ನು ಭಂಗೇಲ್ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ಅಲ್ಲಿ ಆಕೆಗೆ ಚಿಕಿತ್ಸೆ ಒದಗಿಸಲಾಗಿದೆ. ಸ್ಥಳೀಯ ಸೆಕ್ಟರ್ 49ರ ಪೊಲೀಸ್ ಠಾಣೆಯ ಅಧಿಕಾರಿಗಳು ಈ ಬಗ್ಗೆ ಕಾಳಜಿವಹಿಸಿದ್ದರು ಎಂದು ಸಿಂಗ್ ವಿವರಿಸಿದರು. (ಏಜೆನ್ಸೀಸ್)