ಬೆಂಗಳೂರು: ಜಾತಿ ಜನಗಣತಿ ಎಂದೇ ಬಿಂಬಿತವಾಗಿದ್ದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಶೈಕ್ಷಣಿಕ ದತ್ತಾಂಶಗಳ ವರದಿ ಭವಿಷ್ಯ, ಮರು ಸಮೀಕ್ಷೆಗೆ ಮಹೂರ್ತ ಗುರುವಾರ ನಿಚ್ಚಳವಾಗಲಿದೆ. ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ವಿಶೇಷ ಸಚಿವ ಸಂಪುಟ ಸಭೆಯ ಕಾರ್ಯಸೂಚಿ ಪಟ್ಟಿಯಲ್ಲಿರುವ ಪ್ರಧಾನ ವಿಷಯವಾಗಿದೆ. ತುರ್ತು ಮಹತ್ವದ ವಿಷಯಗಳು ಹೆಚ್ಚುವರಿ ಪಟ್ಟಿಯಲ್ಲಿ ಸೇರುವ ಸಾಧ್ಯತೆಗಳಿವೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಹೊರತುಪಡಿಸಿ ಸಚಿವ ಸಂಪುಟದ ಉಳಿದ ಸದಸ್ಯರು ಹೈಕಮಾಂಡ್ ನಿರ್ದೇಶನ, ವೈರುಧ್ಯದ ಅಂಶಗಳಿಗೆ ಸ್ಪಷ್ಟತೆಯನ್ನು ಕಂಡುಕೊಳ್ಳಲು ಬಯಸಿದ್ದಾರೆ. ಜಾತಿ ಗಣತಿ ವರದಿಗೆ ತಾತ್ವಿಕ ಒಪ್ಪಿಗೆ ನೀಡಿ, ಮರು ಸಮೀಕ್ಷೆಗೆ ಸಂಪುಟ ಸಭೆಯಲ್ಲಿ ನಿರ್ಧರಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದರೆ, ಸ್ವೀಕರಿಸಿದ ವರದಿ ವ್ಯರ್ಥವಾಗದು ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಮಾಧ್ಯಮಗಳಲ್ಲಿ ಪ್ರಕಟ/ಪ್ರಸಾರವಾದ ಸಿಎಂ, ಡಿಸಿಎಂ ಹೇಳಿಕೆಗಳಲ್ಲಿ ವೈರುಧ್ಯವಿದೆ. ತಾತ್ವಿಕ ಒಪ್ಪಿಗೆ ಉದ್ದೇಶ, ಮರು ಸಮೀಕ್ಷೆಯ ಅರ್ಥ, ವರದಿಯಲ್ಲಿನ ಅಂಶಗಳ ಬಳಕೆ ಹೇಗೆ ಎಂಬ ಪ್ರಶ್ನೆಗಳಿಗೆ ಇದೇ ಸಭೆಯಲ್ಲಿ ಸಿಗುವ ನಿರೀಕ್ಷೆ ಸಚಿವರದ್ದಾಗಿದೆ.
ವಿಧಾನ, ರೂಪರೇಷೆ ಅಂತಿಮ: ಹಲವು ವರ್ಗಗಳ ವಿರೋಧದ ದೂರುಗಳು, 10 ವರ್ಷಗಳ ಹಿಂದಿನ ಸಮೀಕ್ಷೆ ದತ್ತಾಂಶಗಳು ಹಳೆಯವು. ತಟಸ್ಥ ತಂಡದಿಂದ ತರಿಸಿಕೊಂಡ ಮಾಹಿತಿ ಪ್ರಕಾರ ಆತುರಪಟ್ಟರೆ ಪಕ್ಷ, ಸರ್ಕಾರದ ಮೇಲೆ ವ್ಯತಿರಿಕ್ತ ಪರಿಣಾಮಬೀರಲಿದೆ ಎಂಬುದು ಹೈಕಮಾಂಡ್ ತಲುಪಿತ್ತು. ಹೀಗಾಗಿ ಸಿಎಂ, ಡಿಸಿಎಂ, ಪಕ್ಷದ ರಾಜ್ಯ ಉಸ್ತುವಾರಿಗಳನ್ನು ಮುಂದೆ ಕೂರಿಸಿಕೊಂಡು ಈ ವರದಿ ಕೈಬಿಟ್ಟು, ಮರು ಸಮೀಕ್ಷೆ ನಡೆಸಬೇಕು ಎಂದು ಸೂಚನೆ ನೀಡಿದೆ. ಇದೇ ವಿಷಯವನ್ನು ಸಂಪುಟ ಸಭೆ ಮುಂದಿಡುವ ಸಿಎಂ, ‘ತಾತ್ವಿಕ ಒಪ್ಪಿಗೆ’ ಶಾಸ್ತ್ರ ಪೂರ್ಣಗೊಳಿಸಲಿದ್ದಾರೆ. ಮರು ಸಮೀಕ್ಷೆ ಜವಾಬ್ದಾರಿ ಯಾರಿಗೆ ಒಪ್ಪಿಸುವುದು, ವಿಧಾನ, ರೂಪರೇಷೆ, ಪ್ರಶ್ನಾವಳಿ ತಯಾರಿ, ತಂತ್ರಜ್ಞಾನ, ತರಬೇತಿ, ಮಾನವ ಸಂಪನ್ಮೂಲ ಬಳಕೆ ಇತ್ಯಾದಿ ವಿಷಯಗಳನ್ನು ರ್ಚಚಿಸಿ ನಿರ್ಣಯ ಕೈಗೊಳ್ಳಲಿದೆ. ಮರು ಸಮೀಕ್ಷೆ ಅವಧಿಯನ್ನು ಸಚಿವ ಸಂಪುಟ ಸಭೆ ವಿವೇಚನೆಗೆ ಹೈಕಮಾಂಡ್ ಬಿಟ್ಟುಕೊಟ್ಟಿದ್ದು, ಸಿಎಂ ಬಹಿರಂಗ ಹೇಳಿಕೆ ಪ್ರಕಾರ 90 ದಿನ ಕಾಲಮಿತಿ ನಿಗದಿಯಾಗಲಿದೆ. ಆದರೆ ‘90 ದಿನಗಳ ಕಾಲಮಿತಿ’ ದಿನಾಂಕ, ತಿಂಗಳು ಯಾವಾಗ ಎನ್ನುವುದು ನಿಶ್ಚಿತವಾಗಬೇಕಿದೆ. ಪ್ರಸಕ್ತ ಶೈಕ್ಷಣಿಕ ವರ್ಷ ಈಗಷ್ಟೇ ಆರಂಭವಾಗಿದ್ದು, ಕೃಷಿ ಚಟುವಟಿಕೆಗಳು ಬಿರುಸಾಗಿವೆ. ವಾಸ್ತವಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಮರು ಸಮೀಕ್ಷೆಗೆ ಸಚಿವ ಸಂಪುಟ ಮುಹೂರ್ತ ಫಿಕ್ಸ್ ಮಾಡಲಿದೆ ಎಂದು ಮೂಲಗಳು ಹೇಳಿವೆ.
ತೆಲಂಗಾಣದೆಡೆ ಕುತೂಹಲ: ತೆಲಂಗಾಣದ ರೇವಂತರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರ, ಪರಿಶಿಷ್ಟ ಜಾತಿ ಮೀಸಲು ವರ್ಗೀಕರಣ ವೇಗವಾಗಿ ಮುಗಿಸಿತು. ಅಷ್ಟೇ ಅಲ್ಲ, ಜಾತಿ ಗಣತಿ ಮಾಡಿ ಶೇ.50ರ ಮೀಸಲಾತಿ ಮಿತಿ ದಾಟದಂತೆ ಮೀಸಲು ಹಂಚಿಕೆ ಮಾಡಿತು. ಅದಕ್ಕಿಂತಲೂ ಮುಖ್ಯವಾಗಿ ಹಿಂದುಳಿದ ವರ್ಗಗಳಲ್ಲಿ ‘ಕೆನೆ ಪದರ’ ನೀತಿಯನ್ನು
ಬೆಣ್ಣೆಯಲ್ಲಿ ಕೂದಲು ತೆಗೆದಷ್ಟು ಸಲೀಸಾಗಿ ಮುಗಿಸಿದೆ. ಇದು, ಸಾಮಾಜಿಕ ನ್ಯಾಯದ ಬಗ್ಗೆ ದೊಡ್ಡ ಧ್ವನಿಯಲ್ಲಿ ಮಾತನಾಡುವ ಹಲವು ಸಚಿವರಲ್ಲಿ ಕುತೂಹಲ ಹುಟ್ಟಿಹಾಕಿದೆ ಎನ್ನಲಾಗುತ್ತಿದೆ.
ಮುಂದಿವೆ 3 ಮಾದರಿಗಳು
1. ಕರ್ನಾಟಕ ಮಾದರಿ
ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಜವಾಬ್ದಾರಿ ಒಪ್ಪಿಸುವುದು
2. ಬಿಹಾರ ಮಾದರಿ
ಇಲಾಖೆ/ಸಂಸ್ಥೆಗಳ ಮೂಲದಿಂದ ದತ್ತಾಂಶ ಸಂಗ್ರಹಿಸಿ ವರದಿ ತಯಾರಿ
3. ತೆಲಂಗಾಣ ಮಾದರಿ
ಯೋಜನಾ ಆಯೋಗದ ಮುಖೇನ ಸಮೀಕ್ಷೆ, ನಿಖರ ದತ್ತಾಂಶ ಸಂಗ್ರಹ
ತಜ್ಞರು ಹೇಳುವುದು?
ಕೃತಕಬುದ್ಧಿಮತ್ತೆ ತಂತ್ರಜ್ಞಾನ, ಮಷಿನ್ ಲರ್ನಿಂಗ್ ಮುಂತಾದ ಅತ್ಯಾಧುನಿಕ ತಂತ್ರಜ್ಞಾನ ಬಳಕೆ, ಮೋನೊ ಎಕ್ಸ್ಪ್ರೆಸ್ನಂತೆ ಶರವೇಗದಲ್ಲಿ ಕೆಲಸ ಮಾಡಿದರೂ ಸಮೀಕ್ಷೆ, ವರದಿ ತಯಾರಿಗೆ ಒಂದು ವರ್ಷ ಬೇಕು ಎಂದು ತಜ್ಞರು ಹೇಳುತ್ತಾರೆ. ಸಮೀಕ್ಷೆ ಎನ್ನುವುದು ಅಂಕಿ-ಸಂಖ್ಯೆ ಲೆಕ್ಕಾಚಾರವಷ್ಟೇ ಅಲ್ಲ. ಮಾನವಶಾಸ್ತ್ರೀಯ, ಕುಲಶಾಸ್ತ್ರೀಯ, ಜನಸಂಖ್ಯಾ ವಿಜ್ಞಾನ, ಸಾಮಾಜಿಕ -ಶೈಕ್ಷಣಿಕ-ಆರ್ಥಿಕ-ರಾಜಕೀಯ ಸಹಿತ ದ್ವಿತೀಯ ಮೂಲದ ಮಾಹಿತಿ ಸಂಗ್ರಹ, ಕ್ರೋಡೀಕರಣ, ವಿಶ್ಲೇಷಣೆ ಮಾಡಬೇಕಾಗುತ್ತದೆ. ಲೋಪದೋಷ, ತಪು್ಪ, ಅಪನಂಬಿಕೆ, ಸಂದೇಹ ಹಾಗೂ ಗೊಂದಲಗಳು ಪುನರಾವರ್ತನೆಯಿಲ್ಲ. ಪ್ರವರ್ಗಗಳ ಬದಲಾವಣೆ, ಹೊಸದಾಗಿ ಸೃಷ್ಟಿಗೂ ಸಂವಿಧಾನಬದ್ಧವಾದ ಗಟ್ಟಿ ನೆಲೆಯೂ ಸಿಗುತ್ತದೆ ಎಂದು ಕಾನೂನು, ಮಾನವಶಾಸ್ತ್ರ ತಜ್ಞರು ಹೇಳುತ್ತಾರೆ.
ರಾಜ್ಯದಲ್ಲಿ ಜಾತಿ ಜನಗಣತಿಯನ್ನು ಮತ್ತೊಮ್ಮೆ ಮಾಡಬೇಕೆಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು, ಧುರೀಣರು ಹೇಳಿದ ಮಾತಿಗೆ ಎಲ್ಲರೂ ಸಹಮತ ವ್ಯಕ್ತಪಡಿಸಿರುವುದು ಅಸಮಾಧಾನಗೊಂಡಿರುವ ಸಮುದಾಯಗಳ ವಾಸ್ತವ ಅಂಕಿ-ಅಂಶ ಹೊರಬರುವ ವಿಶ್ವಾಸ ಮೂಡಿಸಿದೆ. ಹೊಸದಾಗಿ ಸರ್ಕಾರ ನಡೆಸಲಿರುವ ಜಾತಿ ಜನಗಣತಿ ಸಂದರ್ಭದಲ್ಲಿ ಸಮಾಜದ ಬಾಂಧವರು ತಮ್ಮ ಯಾವುದೇ ಒಳಪಂಗಡವಿದ್ದರೂ ವೀರಶೈವ-ಲಿಂಗಾಯತ ಎಂದೇ ಬರೆಸಬೇಕು. ಆ ಮೂಲಕ ಸಮಾಜದ ಒಗ್ಗಟ್ಟು ಮತ್ತು ನೈಜ ಚಿತ್ರಣವನ್ನು ದಾಖಲಿಸಬೇಕು.
| ಬಾಳೆಹೊನ್ನೂರು ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು
ಅಧ್ಯಕ್ಷರಿದ್ದಾರೆ, ಸದಸ್ಯರಿಲ್ಲ !
ರಾಜ್ಯದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಕಳೆದ ಜೂನ್ನಲ್ಲಿ ನೂತನ ಅಧ್ಯಕ್ಷರನ್ನಾಗಿ ಜಿ.ಎಸ್.ಸಂಗ್ರೇಶಿ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಹಿಂಪಡೆದು, ರಾಜ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಿದೆ. ಇದಾಗಿ ಆರು ತಿಂಗಳ ಕಾಲ ಈ ಹುದ್ದೆ ಖಾಲಿಯಿತ್ತು. ಇದೇ ಜನವರಿಯಲ್ಲಿ ಮಾಜಿ ಅಡ್ವೋಕೇಟ್ ಜನರಲ್ ಮಧುಸೂದನ್ ನಾಯಕ್ ಅವರನ್ನು ಸರ್ಕಾರ ನೇಮಿಸಿದೆ. ಆದರೆ ಖಾಲಿಯಿರುವ ಐದು ಸದಸ್ಯ ಸ್ಥಾನಗಳನ್ನು ಭರ್ತಿ ಮಾಡಿಲ್ಲ. ಸದಸ್ಯರಿಲ್ಲದೆ ಅಧ್ಯಕ್ಷರೊಬ್ಬರೇ ಏನೂ ಮಾಡಲಾಗದು. ನೂತನ ಅಧ್ಯಕ್ಷರು ಕಳೆದ ಆರು ತಿಂಗಳಿಂದ ಖಾಲಿ ಕುಳಿತುಕೊಳ್ಳುವಂತಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಸಾಮಾಜಿಕ, ಶೈಕ್ಷಣಿಕ ವರದಿ 10 ವರ್ಷಗಳಷ್ಟು ಹಳೆಯದಾಗಿತ್ತು, ನಂತರ ಸಾಕಷ್ಟು ಬದಲಾವಣೆ ಆಗಿದೆ ಎಂಬುದು ಜನರ ಅಭಿಪ್ರಾಯವಾಗಿತ್ತು. ಇದಕ್ಕೆ ಅನುಗುಣ ವಾಗಿ ನ್ಯೂನತೆಗಳನ್ನು ಸರಿಪಡಿಸುವುದು ಸರ್ಕಾರದ ಕರ್ತವ್ಯವಾಗಿದೆ.
| ಈಶ್ವರ ಖಂಡ್ರೆ ಅರಣ್ಯ ಸಚಿವ
ಗುರುವಾರದ ಸಂಪುಟ ಸಭೆಯಲ್ಲಿ ಜಾತಿ ಗಣತಿ ಬಗ್ಗೆ ವಿಸ್ತಾರವಾಗಿ ಚರ್ಚೆ ಮಾಡುತ್ತೇವೆ. ಹೈಕಮಾಂಡ್ ಮಾತೇ ಫೈನಲ್, ಹೈಕಮಾಂಡ್ ಏನು ಹೇಳಿದೆ ಎಂದು ಸಿಎಂ ನಮ್ಮ ಗಮನಕ್ಕೆ ತರಲಿದ್ದಾರೆ. ಕೆಲಸ ಮಾಡುವ ಟೀಮ್ ಇದೆ, ಮರು ಸಮೀಕ್ಷೆ ಮಾಡಬಹುದು.
| ಶಿವರಾಜ ತಂಗಡಗಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ
ರಾಹುಲ್ಗಾಂಧಿ ಒಲವು !
ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಜಾತಿ ಜನಗಣತಿಗೆ ಒತ್ತಾಸೆ ನೀಡುವ ಜತೆಯಲ್ಲೇ ತೆಲಂಗಾಣ ಮಾದರಿಗೆ ಒಲವು ತೋರಿದ್ದಾರೆ. ಬಹಿರಂಗ ವೇದಿಕೆಗಳಲ್ಲಿ ಅನೇಕ ಬಾರಿ ಇದನ್ನು ಪ್ರಸ್ತಾಪಿಸಿದ್ದಾರೆ. ಕರ್ನಾಟಕದ ಮಾದರಿ ತಮಗೆ ಪಥ್ಯವಾಗಿಲ್ಲವೆಂದು ಕಾಂಗ್ರೆಸ್ ನಾಯಕ ಪರೋಕ್ಷವಾಗಿ ಹೇಳಿದಂತಿದೆ. ರಾಜ್ಯದ ಜಾತಿ ಗಣತಿ ವರದಿ ಹೆಚ್ಚು ಸದ್ದು ಮಾಡಿತು. ಆದರೆ ತೆಲಂಗಾಣ ವರದಿ ಸದ್ದುಗದ್ದಲವಿಲ್ಲದೆ ಅನುಷ್ಠಾನಕ್ಕೆ ಬಂದದ್ದೂ ರಾಹುಲ್ ಮೆಚ್ಚುಗೆ ಕಾರಣವೆಂದು ಮೂಲಗಳು ಹೇಳುತ್ತವೆ.
ದಶಕದ ಹಿಂದೆ ಸಿದ್ದರಾಮಯ್ಯ ಸರ್ಕಾರವಿದ್ದಾಗ ಸಾಮಾಜಿಕ, ಶೈಕ್ಷಣಿಕ ಗಣತಿ ಮಾಡಲಾಗಿದೆ. ಇದಾಗಿ 10 ವರ್ಷವಾಗಿದ್ದು, ಎಸ್ಸಿ, ಎಸ್ಟಿ, ಒಬಿಸಿ ಪಟ್ಟಿಯಲ್ಲಿ ವ್ಯತ್ಯಾಸವಾಗಿದೆ. ಎಲ್ಲ ವ್ಯತ್ಯಾಸ ಸರಿಪಡಿಸಲು ಹೊಸ ಗಣತಿ ಮಾಡಲಾಗುತ್ತಿದೆ. ಹೊಸದಾಗಿ ಎಲ್ಲವೂ ಗಣತಿಯಲ್ಲಿ ಬರಲಿದೆ. ಬಿಟ್ಟು ಹೋದರೆ ಪುನಃ ಸೇರಿಸಬೇಕು ಎಂಬುದು ಉದ್ದೇಶ.
| ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ
ಮರು ಸಮೀಕ್ಷೆ ಕೈಬಿಡಿ, ಕೇಂದ್ರಕ್ಕೆ ಸಹಕರಿಸಿ
ಬೆಂಗಳೂರು: ಜನಗಣತಿ ಜತೆಗೆ ಜಾತಿ ಗಣತಿಗೆ ಕೇಂದ್ರ ಸರ್ಕಾರ ನಿರ್ಧರಿಸಿ, ಕಾಲಮಿತಿ ಗೊತ್ತುಪಡಿಸಿದೆ. ಹೀಗಾಗಿ ರಾಜ್ಯ ಸರ್ಕಾರ ಕೈಗೊಳ್ಳಲು ಉದ್ದೇಶಿತ ಮರು ಸಮೀಕ್ಷೆ ಕೈಬಿಟ್ಟು, ಕೇಂದ್ರ ಸರ್ಕಾರ ಸಹಕರಿಸಬೇಕು ಎನ್ನುವುದು ಪ್ರತಿಪಕ್ಷ ಬಿಜೆಪಿಯ ದೃಢ ನಿಲುವಾಗಿದೆ. ಹಿಂದುಳಿದ ವರ್ಗಗಳ ಆಯೋಗದ ಜಾತಿ ಗಣತಿ ವರದಿ ಅವೈಜ್ಞಾನಿಕ ಎಂಬ ಕಾರಣಕ್ಕೆ ಪ್ರಬಲ ಸಮುದಾಯಗಳು ಮಾತ್ರವಲ್ಲ, ಸಣ್ಣ-ಅತಿಸಣ್ಣ ಜಾತಿಗಳು ಆಕ್ಷೇಪಿಸಿದ್ದವು. ಪ್ರತಿಪಕ್ಷವೂ ಧ್ವನಿಗೂಡಿಸಿತ್ತು. ಜಾತಿಗಣತಿಗೆ ವಿರೋಧವಿಲ್ಲ, ವೈಜ್ಞಾನಿಕವಾಗಿ ನಡೆಸಬೇಕು ಎನ್ನುವುದು ಒತ್ತಾಯವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಈ ವರದಿ ಕೈಬಿಡಬೇಕೆಂಬ ಸೂಚನೆ ನೀಡಿದ್ದು, ರಾಜ್ಯ ಸರ್ಕಾರ ತಲೆಬಾಗಿದೆ. ಹೀಗಾಗಿ ಗುರುವಾರ ನಡೆಯುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಿರುವ ನಿರ್ಧಾರಕ್ಕೆ ಕಾದು ನೋಡಿ, ಮುಂದಿನ ನಡೆ ತೀರ್ವನಿಸಲಾಗುವುದು ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ತಿಳಿಸಿದರು.
ಹೊಸದಾಗಿ ಜಾತಿ ಮರು ಗಣತಿಯು ಹೈಕಮಾಂಡ್ ನಿರ್ಧಾರ. ಉನ್ನತ ಮಟ್ಟದ ಚರ್ಚೆಯಂತೆ ತೀರ್ಮಾನ ಕೈಗೊಳ್ಳಲಾಗಿದೆ. ಹಿಂದೆ ನಡೆದಿರುವ ಹಳೇ ಗಣತಿ ವರದಿಯನ್ನು ತಿರಸ್ಕರಿಸಿಲ್ಲ. ಆದರೆ, ಬದಲಾವಣೆಗೊಂಡ ಈ ಕಾಲಕ್ಕೆ ತಕ್ಕಂತೆ ಹೊಸದಾಗಿ ವರದಿಯನ್ನು ತಯಾರಿಸಲು ಮುಂದಾಗಿದ್ದು ಇದರಲ್ಲಿ ಯಾವುದೇ ಸಮಸ್ಯೆ ಇಲ್ಲ.
| ಸಿದ್ದರಾಮಯ್ಯ ಸಿಎಂ
ಮರು ಸಮೀಕ್ಷೆಗೂ ವಿರೋಧ
ನವದೆಹಲಿ: ಜಾತಿ ಗಣತಿ ನಮ್ಮ ಪಕ್ಷದ ರಾಜಕೀಯ ಅಜೆಂಡಾ. ಇದನ್ನು ಬಿಜೆಪಿಯವರು ಕಾಪಿ ಮಾಡಿದ್ದಾರೆ. ಜಾತಿಗಣತಿ ಮಾಡಿ ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸಬೇಕು ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಮರು ಸಮೀಕ್ಷೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿರುವ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಸರ್ಕಾರ ಈ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿಲ್ಲ. ಈಗಾಗಲೇ ನೀಡಿರುವ ವರದಿಯನ್ನು ನಾವು ಬಳಸಿಕೊಳ್ಳುತ್ತೇವೆ. ಈ ವರದಿಯಲ್ಲಿ ಯಾರ ಅಂಕಿ ಅಂಶಗಳು ಬಿಟ್ಟುಹೋಗಿವೆ ಅವರ ಮಾಹಿತಿಯನ್ನು ಸೇರಿಸಲು ಅವಕಾಶ ನೀಡಲಾಗುವುದು. ನಮ್ಮ ಸರ್ಕಾರದ ಜಾತಿ ಗಣತಿ ವರದಿಗೆ ವಿರೋಧ ಮಾಡಿದವರು ಇವರು. ಈಗ ಜಾತಿ ಮರು ಸಮೀಕ್ಷೆಗೂ ಬಿಜೆಪಿ ವಿರೋಧಿಸುತ್ತಿದೆ ಎಂದರು.
ಸರ್ಕಾರದ ತೀರ್ವನದ ಬಗ್ಗೆ ವೀರಶೈವ, ಒಕ್ಕಲಿಗ ಸೇರಿ ವಿವಿಧ ಸಮಾಜಗಳ ಸ್ವಾಮೀಜಿಗಳು ನನಗೆ ಕರೆ ಮಾಡಿ ನಮ್ಮ ತೀರ್ವನವನ್ನು ಸ್ವಾಗತಿಸಿದ್ದಾರೆ. ಎಲ್ಲ ಸಮಾಜಗಳ ಸ್ವಾಮೀಜಿಗಳು ತಮ್ಮ ಸಮುದಾಯದವರಿಗೆ ತಿಳುವಳಿಕೆ ನೀಡಿ ಈ ಸಮೀಕ್ಷೆಯಲ್ಲಿ ಭಾಗಿಯಾಗುವಂತೆ ಮಾರ್ಗದರ್ಶನ ನೀಡಬೇಕು ಎಂದರು.
ಜಾತಿ ಜನಗಣತಿ ಮರು ಸಮೀಕ್ಷೆಗೆ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡಿದ್ದರೆ, ಕಾಂತರಾಜು-ಹೆಗ್ಡೆ ವರದಿಗೆ ಈವರೆಗೂ ಆಗಿರುವ ವೆಚ್ಚ ಸೇರಿ ಈಗ ಮಾಡುವ ಮರುಸರ್ವೆಯ ಖರ್ಚು ಸೇರಿ ಎಲ್ಲ ಖರ್ಚನ್ನೂ ಎಐಸಿಸಿ/ಕೆಪಿಸಿಸಿ ನಿಧಿಯಿಂದಲೋ ಅಥವಾ ರಾಹುಲ್ ಗಾಂಧಿ ಜೇಬಿನಿಂದಲೋ ಭರಿಸಲಿ.
| ಆರ್.ಅಶೋಕ್ ಪ್ರತಿಪಕ್ಷ ನಾಯಕ
ನೆಮ್ಮದಿಯ ನಿಟ್ಟುಸಿರುಬಿಟ್ಟ ಕೈ
ಬೆಂಗಳೂರು: ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಹತ್ತು ವರ್ಷದ ಹಿಂದೆ ಸಂಗ್ರಹಿಸಿದ್ದ ಸಾಮಾಜಿಕ, ಶೈಕ್ಷಣಿಕ ದತ್ತಾಂಶಗಳ ಆಧಾರದ ವರದಿಗೆ ಕಾಂಗ್ರೆಸ್ ಹೈಕಮಾಂಡ್ ಮಹತ್ವ ನೀಡದೇ ಇರುವ ವಿಚಾರ ರಾಜ್ಯ ಕಾಂಗ್ರೆಸ್ನ ಭಾಗಶಃ ನಾಯಕರಿಗೆ ಸಮಾಧಾನ ತಂದಿದ್ದು ನಿಟ್ಟುಸಿರು ಬಿಟ್ಟಿದ್ದಾರೆ. ದತ್ತಾಂಶದ ಬಗ್ಗೆ ಸಮುದಾಯಗಳ ಆಕ್ಷೇಪ, ಶಿಫಾರಸಿನ ಬಗ್ಗೆ ಪೂರ್ಣ ಸಮ್ಮತಿ ಇಲ್ಲದೇ ಇರುವುದು, ವರದಿ ವೈಜ್ಞಾನಿಕವಾಗಿ ಇಲ್ಲದೇ ಇರುವುದು ಕಾಂಗ್ರೆಸ್ನಲ್ಲಿ ಆಂತರಿಕವಾಗಿ ಚರ್ಚೆಯಾಗುತ್ತಲೇ ಇತ್ತು. ಆದರೆ, ಅದನ್ನು ಬಹಿರಂಗವಾಗಿ ಹೇಳಲಾಗದ ಸ್ಥಿತಿ ಅನೇಕರಲ್ಲಿತ್ತು. ವರದಿಯನ್ನು ಬಹಿರಂಗವಾಗಿ ವಿರೋಧಿಸಿದರೆ ತಮ್ಮ ರಾಜಕೀಯ ಭವಿಷ್ಯಕ್ಕೆ ಅಡ್ಡಿಯಾಗಬಹುದೆಂದು ಹತ್ತು ಹಲವು ಶಾಸಕರಿದ್ದರು. ಸಚಿವರೂ ಆಕ್ಷೇಪಣೆಗೆ ಹಿಂದೇಟು ಹಾಕಿದ್ದರು. ಕೇವಲ ತಮ್ಮ ಸಮುದಾಯದ ಆಕ್ಷೇಪಣೆಯನ್ನು ಸರ್ಕಾರದ ಮಟ್ಟದಲ್ಲಿ, ಪಕ್ಷದ ಮಟ್ಟದಲ್ಲಿ ಪ್ರಸ್ತಾಪಿಸಿದರೆ ಉಳಿದ ಸಮುದಾಯಗಳು ತಮ್ಮಿಂದ ಅಂತರ ಕಾಯ್ದುಕೊಳ್ಳಬಹುದೆಂಬ ಲೆಕ್ಕಾಚಾರದಲ್ಲಿ ಆಡಳಿತ ಪಕ್ಷದ ಕೆಲವು ಶಾಸಕರು ನೇರವಾಗಿ ಪಕ್ಷದ ದೆಹಲಿ ನಾಯಕರ ಬಳಿ ದೂರಿದ್ದರು. ಇದೀಗ ಹೈಕಮಾಂಡ್ ಮಧ್ಯ ಪ್ರವೇಶ ಕಾಂಗ್ರೆಸ್ ಪಾಳಯದ ಅರ್ಧಕ್ಕರ್ಧ ನಾಯಕರಿಗೆ ಸಮಾಧಾನ ತಂದಿದೆ. ಹೊಸ ಸಮೀಕ್ಷೆ ನಡೆದು ಅದರ ಪ್ರಕಾರ ಮುಂದುವರಿಯುವುದು ಒಳ್ಳೆಯ ನಿರ್ಧಾರ ಎಂದೇ ಅಭಿಪ್ರಾಯ ಹೊರಹಾಕುತ್ತಿದ್ದಾರೆ.
ಡಿಸಿಎಂ ಹೇಳಿದ್ದೇನು?
* ಜೈನ, ಲಂಬಾಣಿ, ಬೆಸ್ತ ಸೇರಿ ವಿವಿಧ ಸಮಾಜಗಳ ಮುಖಂಡರು ಭೇಟಿ ಮಾಡಿ ಆತಂಕ ವ್ಯಕ್ತಪಡಿಸಿದ್ದರು.
* ಈ ಹಿಂದೆ ಅವೈಜ್ಞಾನಿಕವಾಗಿ ಸಮೀಕ್ಷೆ ಮಾಡಲಾಗಿತ್ತು. ನಮ್ಮ ಶಾಸಕರೂ ವರದಿ ಕುರಿತು ಅಭಿಪ್ರಾಯ ತಿಳಿಸಿದ್ದರು.
* ಸಮಾಜಗಳಿಗೆ ನ್ಯಾಯ ಒದಗಿಸಬೇಕು, ಗೊಂದಲ ಬಗೆಹರಿಸಲು ಮುಂದಾಗಿದ್ದೇವೆ.
* ಕಳೆದ ಬಾರಿ ಅನೇಕರು ಈ ವಿಚಾರ ವನ್ನು ಗಂಭೀರವಾಗಿ ಪರಿಗಣಿಸದೇ ಸಮಸ್ಯೆ ಹೇಳಿಕೊಳ್ಳಲು ಹಿಂಜರಿದರು.
ತೃತೀಯ ಲಿಂಗಿಗಳಿಂದ ಈ ವಸ್ತುಗಳನ್ನು ತೆಗೆದುಕೊಂಡರೆ ನಿಮ್ಮ ಅದೃಷ್ಟವೇ ಬದಲಾಗುತ್ತದೆಯಂತೆ! Transgender women