ಶರಣರ ತತ್ವ, ಸಿದ್ಧಾಂತಗಳು ಕಳೆಗುಂದುತ್ತಿವೆ

15 sep tnp 02 swamiji
Published on

ತಿ.ನರಸೀಪುರ : ಹೊಸ ಕಾಲದ ಜೀವನ ಶೈಲಿಯಿಂದ ಶರಣರ ತತ್ವ, ಸಿದ್ಧಾಂತಗಳು ಕಳೆಗುಂದುತ್ತಿವೆ ಎಂದು ವಾಟಾಳು ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ತಾಲೂಕಿನ ಸುಜ್ಜಲೂರು ಗ್ರಾಮದಲ್ಲಿ ಶನಿವಾರ ರಾತ್ರಿ ಬಸವ ಬಳಗಗಳು ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಆಯೋಜಿಸಿದ್ದ ರಾಜೇಂದ್ರ ಶ್ರೀಗಳ 110 ನೇ ಜಯಂತಿ, ಮನೆ - ಮನಗಳಿಗೆ ಶರಣ ಸಂದೇಶ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಆಡಂಬರ ಜೀವನಕ್ಕೆ ಹೆಚ್ಚು ಒತ್ತು ನೀಡಿ ಜೀವನ ಶೈಲಿಯನ್ನೇ ಅನೇಕರು ಬದಲಾಯಿಸಿಕೊಂಡಿದ್ದಾರೆ. 12ನೇ ಶತಮಾನದ ಶರಣರ ಪರಂಪರೆ ಮರೆತಿದ್ದಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಹಲವರಿಗೆ ವೈಚಾರಿಕತೆ ಪ್ರಜ್ಞೆ ಇಲ್ಲದಾಗಿದೆ. ಖಿನ್ನತೆಗೆ ಒಳಗಾಗಿ ವಿವಿಧ ಚಟಗಳ ದಾಸರಾಗಿದ್ದಾರೆ. ಇದರಿಂದಾಗಿ ಸ್ನೇಹ, ಸಂಬಂಧಗಳು ಹಾಳಾಗುತತಿವೆ. ಮಾನಸಿಕ ನೆಮ್ಮದಿಯೂ ದೂರವಾಗಿದೆ ಎಂದರು. ಸುತ್ತೂರಿನ ರಾಜೇಂದ್ರ ಶ್ರೀಗಳು ಮತ್ತು ಸಿದ್ದಗಂಗಾ ಶ್ರೀಗಳು ಸಮಾಜಕ್ಕೆ ನೀಡಿದ ಕೊಡುಗೆ ದೊಡ್ಡದು ಎಂದರು. ಸುಪ್ರಭಾತ ಸಮಯದಲ್ಲಿ ಇಷ್ಟಲಿಂಗ ಪೂಜೆ ಕೈಗೊಂಡು ಚೈತನ್ಯ ಶಾಲಿಗಳಾಗಬೇಕು ಎಂದು ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಮುಡುಕನಪುರದ ಶ್ರೀ ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಆಚಾರ, ವಿಚಾರ, ಸಂಸ್ಕಾರ ಮತ್ತು ಸಂಸ್ಕೃತಿಗಳು ಮಾನವ ಜೀವನವನ್ನು ಸಾರ್ಥಕ ಮಾಡುವ ಬುನಾದಿಗಳು. ಲಿಂಗದೀಕ್ಷೆ ಪಡೆದು ಧನ್ಯರಾಗಬೇಕು. ಯಾವುದೇ ಕಾಯಕ ಮಾಡುವ ಮುನ್ನ ನೊಸಲಿಗೆ ವಿಭೂತಿಯನ್ನು ಹಚ್ಚಿ, ಲಿಂಗಧಾರಣೆ ಮಾಡಿ, ಕ್ಷಣಕಾಲ ಲಿಂಗ ಸ್ಮರಣೆ ಮಾಡಬೇಕು. ಅಂತರಂಗದೊಂದಿಗೆ ಬಹಿರಂಗವನ್ನೂ ಶುದ್ಧಿಗೊಳಿಸಿಕೊಂಡು ಚಾರಿತ್ರ್ಯವಂತರಾಗಿ ಬದುಕಬೇಕು ಎಂದರು.

ಯಾವುದೇ ಕಾರ್ಯ ಫಲ ನೀಡಬೇಕಾದರೆ ಅದಕ್ಕೆ ಗುರು-ಹಿರಿಯರ ಕೃಪೆ, ಸತ್ಸಂಗಗಳು ಬೇಕು. ಪೂರ್ವಾಪರ ಚರ್ಚೆಗಳಿಂದ ಸಾಧನೆ ಸುಲಭ ಎಂದರು. ಜೆಎಸ್‌ಎಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರಾಜೇಂದ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುತ್ತೂರು ಶಾಖಾಮಠದ ಶ್ರೀ ಇಮ್ಮಡಿ ಬಸವಲಿಂಗ ಸ್ವಾಮೀಜಿ, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಸಿ.ಎಂ.ಪ್ರಕಾಶ್, ಶ್ರೀ ಬಸವೇಶ್ವರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ. ಸುಗಂಧರಾಜು, ಕೆಇಬಿ ಸಿದ್ದಲಿಂಗಸ್ವಾಮಿ, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಸೋಮಶೇಖರ, ವಕೀಲ ಜ್ಞಾನೇಂದ್ರಮೂರ್ತಿ, ಉಪನ್ಯಾಸಕ ಮೂಗೂರು ಕುಮಾರಸ್ವಾಮಿ ಮತ್ತು ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net