ತಿರುಪತಿ - ತಿರುಮಲ ಮಾರ್ಗದಲ್ಲಿ ಅಪಘಾತ.. ಇಬ್ಬರು ಭಕ್ತರ ಮೃತ್ಯು

tirumala
Published on

ತಿರುಪತಿ: ವಿಶ್ವವಿಖ್ಯಾತ ಧಾರ್ಮಿಕ ಯಾತ್ರಾಸ್ಥಳ ತಿರುಪತಿ- ತಿರುಮಲದ ಎರಡನೇ ಘಾಟ್ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಭಕ್ತರು ಮೃತಪಟ್ಟಿದ್ದಾರೆ.

ಘಾಟ್ ರಸ್ತೆಯ ಜಿಎನ್‌ಸಿ ಅಂತಿಮ ತಿರುವಿನ ಬಳಿ ಬೈಕ್ ಸ್ಕಿಡ್ ಆಗಿ ಆರ್‌ಟಿಸಿ ಬಸ್‌ನ ಕೆಳಗೆ ಬಿದ್ದಿದೆ. ಈ ಅಪಘಾತದಲ್ಲಿ ಇಬ್ಬರು ಭಕ್ತರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ, ಕ್ರೇನ್ ನೆರವಿನಿಂದ ಬಸ್‌ನಡಿ ಸಿಲುಕಿದ್ದ ಮೃತ ದೇಹಗಳನ್ನು ಹೊರತೆಗೆದಿದ್ದಾರೆ. ಮೃತರು ತಮಿಳುನಾಡಿನ ದಂಪತಿ ಎನ್ನಲಾಗಿದೆ. ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.

ಇತ್ತೀಚೆಗೆ ತಿರುಮಲ ಘಾಟ್​ ರಸ್ತೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಕೆಲವು ವಾಹನ ಸವಾರರು ರಸ್ತೆ ನಿಯಮಗಳನ್ನು ಪಾಲಿಸದಿರುವುದು ಟೀಕೆಗೆ ಗುರಿಯಾಗಿದೆ. ಸವಾರರು ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸುತ್ತಾರೆ. ಕೆಲವರು ಸೀಟ್ ಬೆಲ್ಟ್, ಹೆಲ್ಮೆಟ್ ಧರಿಸದೇ ಇರುವುದರಿಂದ ಅಪಘಾತದ ತೀವ್ರತೆ ಹೆಚ್ಚಾಗುತ್ತಿದೆ.

ಯಾತ್ರಾರ್ಥಿಗಳು ತಿರುಮಲವನ್ನು ತಲುಪಲು ಎರಡು ಘಾಟ್ ರಸ್ತೆಗಳಿವೆ. ತಿರುಮಲಕ್ಕೆ ತೆರಳಲು ಎರಡನೇ ಘಾಟ್ ರಸ್ತೆಯನ್ನು ಬಳಸಲಾಗುತ್ತದೆ. ಮೊದಲ ಘಾಟ್ ರಸ್ತೆಯನ್ನು ಕೆಳಗೆ ಬರಲು ಬಳಸಲಾಗುತ್ತದೆ. ರಸ್ತೆ ಅಪಘಾತಗಳ ಹಿನ್ನೆಲೆಯಲ್ಲಿ ಟಿಟಿಡಿ ಭದ್ರತಾ ಸಿಬ್ಬಂದಿ ಹಾಗೂ ತಿರುಮಲ ಸಂಚಾರ ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net