

ತಿರುಪತಿ: ಶ್ರೀವೆಂಕಟೇಶ್ವರ ಸ್ವಾಮಿ ದೇವಾಲಯದ ಮಹಾಪ್ರಸಾದ ಲಡ್ಡು(Tirupati Laddu Row) ತಯಾರಿಕೆಗೆ ಆಂಧ್ರದ ಈ ಹಿಂದೆ ಜಗನ್ ಮುಖ್ಯಮಂತ್ರಿಯಾಗಿದ್ದಾಗ ದನ, ಹಂದಿ ಕೊಬ್ಬು ಮತ್ತು ಮೀನಿನ ಎಣ್ಣೆಯನ್ನು ಸರಬರಾಜು ಮಾಡಿದ ಘಟನೆಯ ಕುರಿತು ನಡೆಯುತ್ತಿರುವ ಬೆಳವಣಿಗೆಗಳಿಗೆ ಭಕ್ತರ ಭಾವನೆಗಳ ವಿರುದ್ಧ ಮಾತನಾಡುತ್ತಿರುವ ನಟ ಪ್ರಕಾಶ್ ರಾಜ್ ಮತ್ತೆ ತನ್ನ ಚಾಳಿ ಮುಂದುವರಿಸಿದ್ದಾರೆ. ಅವರು ಎಕ್ಸ್ (ಟ್ವಿಟ್ಟರ್) ನಲ್ಲಿ ಶುಕ್ರವಾರ ಮತ್ತೊಂದು ಪೋಸ್ಟ್ ಹಾಕಿದ್ದು, ಭಕ್ತರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
'ಜಸ್ಟ್ ಆಸ್ಕಿಂಗ್' ಎನ್ನುತ್ತ ಪ್ರಕಾಶ್ ರಾಜ್ ಪೋಸ್ಟ್‌ಗಳ ಸರಣಿ ಮುಂದುವರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಮತ್ತೊಂದು ಪೋಸ್ಟ್ ಹಾಕಲಾಗಿದೆ. "ನಮಗೆ ಏನು ಬೇಕು.. ಜನರಲ್ಲಿ ಭಾವನೆಗಳನ್ನು ಕೆರಳಿಸಿ ರಾಜಕೀಯ ಲಾಭ ಗಳಿಸುವುದಾ? ಅಥವಾ ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ಆಡಳಿತ ನಡೆಸುವುದಾ? ಅಗತ್ಯವಿದ್ದರೆ ಗಂಭೀರ ಕ್ರಮಗಳೊಂದಿಗೆ ಸಮಸ್ಯೆಯನ್ನು ಶಾಂತವಾಗಿ ಪರಿಹರಿಸಬೇಕಲ್ಲವೇ? ಎಂದು ಪ್ರಶ್ನಿಸಿದ್ದು, ಈ ವ್ಯಕ್ತಿ ಯಾರನ್ನು ಉಲ್ಲೇಖಿಸುತ್ತಿದ್ದಾನೆ? ಯಾಕೆ ಈ ಪೋಸ್ಟ್ಗಳನ್ನು ಹಾಕುತ್ತಿದ್ದಾನೆ? ಎಂದು ನೆಟಿಜನ್‌ಗಳು ಈ ಬಗ್ಗೆ ಏಕವಚನದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಪ್ರಾಯಶ್ಚಿತ್ತ ದೀಕ್ಷೆ ಮಾಡಿದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್, ಪ್ರಕಾಶ್ ರಾಜ್ ಧರ್ಮಸೂಕ್ಷ್ಮ ವಿಷಯಗಳನ್ನು ತಿಳಿದು ಮಾತನಾಡಬೇಕು. ಸನಾತನ ಧರ್ಮದ ವಿರುದ್ಧ ಇಷ್ಟಬಂದಂತೆ ಮಾತನಾಡಿದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.
ಆದರೆ ಸದ್ಯ ವಿದೇಶದಲ್ಲಿದ್ದೇನೆ, ಭಾರತಕ್ಕೆ ಬಂದಾಗ ಪವನ್ ಕಲ್ಯಾಣ್ ಅವರ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ ಎಂದು ಹೇಳಿದ್ದ ಪ್ರಕಾಶ್ ರಾಜ್, ಗುರುವಾರ(ಸೆ.26) ಹಾಕಿರುವ ಪೋಸ್ಟ್ ನಲ್ಲಿ "ಗೆಲ್ಲುವ ಮುನ್ನ ಒಂದು ಅವತಾರ, ಗೆದ್ದ ನಂತರ ಇನ್ನೊಂದು ಅವತಾರ ಎಂದು ಪವನ್ ಅವರನ್ನು ಪ್ರಶ್ನಿಸಿದ್ದು, ಶುಕ್ರವಾರ ಮತ್ತೆ 'ನಮಗೇನು ಬೇಕು' ಎಂದು ಪ್ರಶನಿಸುತ್ತ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಯಾರನ್ನು ಉದ್ದೇಶಿಸಿ ಎಂದು ಅವರು ಹೇಳಲಿಲ್ಲ.