

ತಿರುಪತಿ: ತಿರುಪತಿ-ತಿರುಮಲ ದೇವಸ್ಥಾನದ ನೂತನ ಇಒ ಆಗಿ ಅಧಿಕಾರ ವಹಿಸಿಕೊಂಡಿರುವ ಶ್ಯಾಮಲಾ ರಾವ್, ಭಕ್ತರ ಸಮಸ್ಯೆಗಳತ್ತ ಗಮನ ಹರಿಸುತ್ತಿದ್ದಾರೆ.
ತಿರುಮಲಕ್ಕೆ ಬರುವ ಭಕ್ತರಿಗೆ ಅಂಗಡಿಯವರು ಹೆಚ್ಚಿನ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ದೂರಿನ ಕುರಿತು ಪರಿಶೀಲನೆ ನಡೆಸಿದ ಅವರು, ಎಂಆರ್ಪಿ ಬೆಲೆಗಿಂತ ಹೆಚ್ಚು ಹಣ ಪಡೆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಶ್ರೀನಿವಾಸಮಂಗಾಪುರ ಹಾಗೂ ಮೆಟ್ಟಿಲು ಮಾರ್ಗದಲ್ಲಿ ಅಂಗಡಿಗಳವರು ಹೆಚ್ಚಿನ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಕೆಲ ಭಕ್ತರು ದೂರಿದ್ದಾರೆ. ಟಿಟಿಡಿ ಎಸ್ಟೇಟ್ ಅಧಿಕಾರಿ ಗುಣಭೂಷಣ ರೆಡ್ಡಿ ಅವರು ಜೆಇಒ (ಶಿಕ್ಷಣ, ವೈದ್ಯಕೀಯ) ಗೌತಮಿ ಅವರ ಮೇಲ್ವಿಚಾರಣೆಯಲ್ಲಿ ಮೆಟ್ಟಿಲುಗಳ ಮಾರ್ಗದ ಮೂರು ಅಂಗಡಿಗಳನ್ನು ಪರಿಶೀಲಿಸಿದರು.
ತಿರುಮಲ ಮತ್ತು ತಿರುಪತಿಯಲ್ಲಿ ಟಿಟಿಡಿ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚಿನ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಒ ಶ್ಯಾಮಲಾ ರಾವ್ ತಿಳಿಸಿದರು . ನಿಯಮ ಉಲ್ಲಂಘಿಸಿದ ಮಳಿಗೆ ಸಂಖ್ಯೆ-3ರ ಮಾಲೀಕರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. 25 ಸಾವಿರ ದಂಡ ವಿಧಿಸಲಾಗುವುದು ಎಂದು ಟಿಟಿಡಿ ಪ್ರಕಟಣೆಯಲ್ಲಿ ತಿಳಿಸಿದೆ.
ಹಿರಿಯ ನಾಗರಿಕರು ಅಥವಾ ಅಂಗವಿಕಲರಿಗೆ ಪ್ರತಿದಿನ ಮಧ್ಯಾಹ್ನ 3 ಗಂಟೆಗೆ ಶ್ರೀ ವೆಂಕಟೇಶ್ವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಯಾವುದೇ ಸುಳ್ಳು ಸುದ್ದಿ ಅಥವಾ ವದಂತಿಗಳನ್ನು ನಂಬಬೇಡಿ ಎಂದು ಭಕ್ತರಲ್ಲಿ ಟಿಟಿಡಿ ಮನವಿ ಮಾಡಿದೆ.