ಪ್ರಿಯಕರನ ಪತ್ನಿಯ ನಿಂದನೆಯಿಂದ ಬೇಸತ್ತು ಮಹಿಳೆ ಆತ್ಮಹತ್ಯೆ

suicide hang
Published on

ಮೈಸೂರು: ಪ್ರಿಯಕರನ ಪತ್ನಿಯ ನಿಂದನೆಯಿಂದ ಬೇಸತ್ತು ಮಹಿಳೆಯೊಬ್ಬರು ಆತನ ಮನೆಯ ಎದುರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ನಗರದ ರಾಘವೇಂದ್ರನಗರ ನಿವಾಸಿ ಪ್ರತಿಭಾ(42) ಮೃತರು. ದಟ್ಟಗಳ್ಳಿಯಲ್ಲಿರುವ ಪ್ರಿಯಕರ ಕಿಶೋರ್ ಮನೆಯ ಮುಂಭಾಗ ಈ ಘಟನೆ ನಡೆದಿದೆ. ಪ್ರತಿಭಾ ಅವರು ಕಳೆದ 13 ವರ್ಷಗಳ ಹಿಂದೆ ರಮೇಶ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದರು.

ದಂಪತಿ ನಡುವೆ ಆಗಾಗ್ಗೆ ಗಲಾಟೆ ಆಗುತ್ತಿತ್ತು. ಇದರಿಂದ ಬೇಸತ್ತು ಬೇರೆಯಾಗಿ ಕಳೆದ 8 ವರ್ಷಗಳಿಂದ ಆಕೆ ಮಗನೊಡನೆ ರಾಘವೇಂದ್ರನಗರದಲ್ಲಿ ವಾಸಿಸುತ್ತಿದ್ದರು. ಈ ನಡುವೆ ಕಿಶೋರ್ ಎಂಬಾತನ ಪರಿಚಯವಾಗಿದೆ. ಪ್ರತಿಭಾ ಹಾಗೂ ಕಿಶೋರ್ ಉತ್ತಮ ಸಂಬಂಧ ಹೊಂದಿದ್ದರು. ಈ ವಿಚಾರ ಕಿಶೋರ್ ಪತ್ನಿ ದೀಪು ಅವರಿಗೆ ತಿಳಿದು ಪ್ರತಿಭಾ ಅವರ ಮನೆಗೆ ಬಂದು ಆಕೆಯೊಡನೆ ಗಲಾಟೆ ಮಾಡಿದ್ದಾರೆ.


ಇದರಿಂದ ನೊಂದ ಪ್ರತಿಭಾ ಪುತ್ರ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಮಾತ್ರೆಗಳನ್ನು ನುಂಗಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಈ ಎಲ್ಲ ಘಟನೆಗಳಿಂದ ಮಾನಸಿಕವಾಗಿ ನೊಂದ ಪ್ರತಿಭಾ ಏ.2ರಂದು ಕಿಶೋರ್ ಮನೆಯ ಮುಂದೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಕಿಶೋರ್ ಪತ್ನಿಯೇ ಕಾರಣ ಎಂದು ಮೃತರ ಸೋದರ ಮಾವ ಕುವೆಂಪುನಗರ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net