ಪಠ್ಯದಲ್ಲಿ ಮತ್ತೆ ಟಿಪ್ಪು?; ಸಂಕ್ರಾಂತಿಗೆ ಪರಿಷ್ಕೃತ ಪಠ್ಯಕ್ರಮ ಸಿದ್ಧ

textBooks
Published on

ಎನ್.ಎಲ್.ಶಿವಮಾದು ಬೆಂಗಳೂರು
ರಾಜ್ಯದ ಶಾಲಾ ಪಠ್ಯ ಪರಿಷ್ಕರಣೆ ಕಾರ್ಯ ಅಂತಿಮ ಹಂತಕ್ಕೆ ಬಂದಿದೆ. ಪಠ್ಯ ಪರಿಷ್ಕರಣಾ ಸಮಿತಿಯು ಈ ಬಾರಿ ದೇಶದ ಇತಿಹಾಸ ಮತ್ತು ಸಂಸ್ಕೃತಿಯನ್ನು ತಿಳಿಸುವ ಪ್ರಯತ್ನದ ಜತೆಗೆ ಸಂಪೂರ್ಣವಾಗಿ ಶೈಕ್ಷಣಿಕ ವಿಷಯಗಳಿಗೆ ಒತ್ತು ನೀಡಿದೆ ಎಂಬ ಮಾಹಿತಿ ಇದ್ದು, ಬರುವ ಜನವರಿಯಲ್ಲಿ ವರದಿ ಸಲ್ಲಿಸಲು ಸಿದ್ಧತೆ ನಡೆಸಿದೆ. ಪ್ರತಿ ಬಾರಿಯೂ ಪಠ್ಯಪುಸ್ತಕ ವಿಷಯದಲ್ಲಿ ರಾಜಕೀಯವಾಗಿ ಮೈಲೇಜ್ ತೆಗೆದುಕೊಳ್ಳುವ ವಿಚಾರವಾಗಿ ಸಾಕಷ್ಟು ವಿವಾದಗಳಾಗುತ್ತಿದ್ದವು. ಈ ಹಿಂದಿನ ರೋಹಿತ್ ಚಕ್ರತೀರ್ಥ ಮತ್ತು ಬರಗೂರು ರಾಮಚಂದ್ರಪ್ಪ ಸಮಿತಿಗಳ ವರದಿಯಲ್ಲಿ ಟಿಪ್ಪು ಸುಲ್ತಾನ್ ಮತ್ತು ಇತರೆ ಧರ್ಮ ಕುರಿತ ಪಠ್ಯಗಳು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದವು.

ನಿವೃತ್ತ ಪ್ರಾಧ್ಯಾಪಕ ಡಾ. ಮಂಜುನಾಥ ಜಿ. ಹೆಗಡೆ ನೇತೃತ್ವದ ಶಾಲಾ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯು ಪರಿಷ್ಕರಣೆಗೆ ಸಂಬಂಧಿಸಿದ ಶೇ.80ಕ್ಕೂ ಹೆಚ್ಚಿನ ಕೆಲಸ ಮುಗಿಸಿದೆ. ಮಾಸಾಂತ್ಯಕ್ಕೆ ಸಂಪೂರ್ಣ ಕೆಲಸ ಮುಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಬಾರಿ ವಿವಾದಿತ ವಿಷಯಗಳು, ಜಾತಿ, ಧರ್ವಧಾರಿತ ವಿಷಯಗಳಿಗೆ ಒತ್ತು ನೀಡದೆ ಆಯಾ ಕಾಲಘಟ್ಟಕ್ಕೆ ಸಂಬಂಧಿಸಿದ ವಿಷಯಗಳನ್ನು ವಾಸ್ತವವಾಗಿ ತಿಳಿಸಲಾಗುತ್ತಿದೆ. ಇತಿಹಾಸವನ್ನು ತಿಳಿಸುವ ವೇಳೆ ಮೊಘಲ್, ಔರಂಗಜೇಬ್, ಟಿಪು್ಪ, ವೇದ, ಉಪನಿಷತ್ತು... ಹೀಗೆ ಆಯಾ ಕಾಲಘಟ್ಟಕ್ಕೆ ಯಾವುದು ಪ್ರಮುಖವೋ ಅದನ್ನು ತಿಳಿಸಲು ಸಮಿತಿ ಹೆಚ್ಚು ಒತ್ತು ಕೊಟ್ಟಿದೆ ಎಂದು ಮೂಲಗಳು ತಿಳಿಸಿವೆ.

ವ್ಯವಸ್ಥೆ ಸರಿಪಡಿಸುವ ಕೆಲಸ: ಇದು ಕೇವಲ ಪರಿಷ್ಕರಣೆಯಾಗಿರುವುದರಿಂದ ದೊಡ್ಡಮಟ್ಟದ ಬದಲಾವಣೆ ಮಾಡಲು ಸಾಧ್ಯವಿಲ್ಲ. ಯಾವುದನ್ನೂ ಮರೆಮಾಚುವ ಅಥವಾ ತಿರುಚುವ ಕೆಲಸ ಮಾಡಿಲ್ಲ. ಇರುವುದರಲ್ಲಿ ವ್ಯವಸ್ಥೆಯನ್ನು ಸರಿಯಾದ ರೀತಿಯಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಉದಾಹರಣೆಗೆ ಪ್ರಸ್ತುತ ದಿನಗಳಲ್ಲಿ ಕಾರ್ಯಾಂಗ, ನ್ಯಾಯಾಂಗ ಕಲಿಸಿದ ಬಳಿಕ ಭಾರತದ ಸಂವಿಧಾನ ಹೇಳಿಕೊಡಲಾಗುತ್ತಿದೆ. ಮೊದಲು ಸಂವಿಧಾನ ಹೇಳಿಕೊಟ್ಟು ನಂತರ ಕಾರ್ಯಾಂಗ ತಿಳಿಸಿಕೊಡುವ ಕೆಲಸವನ್ನು ನೂತನ ಸಮಿತಿಯು ಮಾಡಲಿದೆ.

ಮಕ್ಕಳಿಗೆ ಬೇಕಿಲ್ಲದ್ದು ಹೊರಕ್ಕೆ: ಯಾವುದೋ ವಿಚಾರ, ಸಿದ್ಧಾಂತದ ಪಠ್ಯವನ್ನು ತೆಗೆದು ಮತ್ತೊಂದನ್ನು ಸೇರ್ಪಡೆ ಮಾಡುತ್ತಿಲ್ಲ ಎಂದು ಗೊತ್ತಾಗಿದೆ. ಸಂಪೂರ್ಣವಾಗಿ ಶೈಕ್ಷಣಿಕ ವಿಷಯಗಳದ್ದಾಗಿದ್ದು, ಮಕ್ಕಳ ವಯಸ್ಸಿಗೆ ಅನುಗುಣವಾಗಿ ತುಂಬಾ ಕಷ್ಟಕರವಾದ ವಚನಗಳು, ತತ್ವ ಪದಗಳು, ತತ್ವ, ಆದರ್ಶಗಳನ್ನು ಕೈಬಿಟ್ಟಿದೆ ಎಂದು ತಿಳಿದುಬಂದಿದೆ. ತಪ್ಪಾಗಿರುವುದು ಹಾಗೂ ತಿಳಿಯದಿರುವುದನ್ನು ಕಲಿಸಿ ಒದ್ದಾಡುವ ಬದಲಾಗಿ, ಮಕ್ಕಳಿಗೆ ಅರ್ಥವಾಗುವ ವಿಷಯಗಳನ್ನು ವಯಸ್ಸಿಗೆ ಅನುಗುಣವಾಗಿ ವೈಜ್ಞಾನಿಕವಾಗಿ ಅವಶ್ಯವಿರುವಷ್ಟೇ ವಿಷಯಗಳನ್ನು ತಿಳಿಸಿಕೊಡುವ ಪ್ರಯತ್ನವನ್ನು ಸಮಿತಿ ಮಾಡುತ್ತಿದೆ.

ಮೊಘಲರು, ಟಿಪ್ಪು ಇದ್ದಾಗ ವೇದ-ಉಪನಿಷತ್ತು ಇರಲೇಬೇಕು: ಮಕ್ಕಳಿಗೆ ಇತಿಹಾಸವನ್ನು ತಿಳಿಸುವಾಗ ಸರಿಯಾದ ರೀತಿಯಲ್ಲಿ ತಿಳಿಸಬೇಕು. ಟಿಪು್ಪ ಸುಲ್ತಾನ್, ಮೊಘಲ್ ಸಾಮ್ರಾಜ್ಯ, ಔರಂಗಜೇಬ್ ಅವರನ್ನು ತಿಳಿಸಿದಾಗ ದೇಶದ ಜ್ಞಾನವಾಗಿರುವ ವೇದ-ಉಪನಿಷತ್ತುಗಳನ್ನು ಕೂಡ ತಿಳಿಸಬೇಕಾಗುತ್ತದೆ. ಯಾವ ಕಾಲಘಟ್ಟದಲ್ಲಿ ಯಾರ್ಯಾರು ರಾಜ್ಯ/ದೇಶವನ್ನು ಆಳಿದ್ದರು ಎಂಬುದನ್ನು ತಿಳಿಸಲೇಬೇಕು. ಮತಾಂತರ ಮಾಡಿದ್ದರೆ, ಕ್ರೂರಿಯಾಗಿದ್ದರೆ ಅದನ್ನು ಕೂಡ ಹೇಳಲೇಬೇಕು. ಯಾರೊಬ್ಬರನ್ನು ನಾಯಕ/ಖಳನಾಯಕನನ್ನಾಗಿ ಮಾಡಬಾರದು. ಇಂದು ಇತಿಹಾಸವನ್ನು ತಿಳಿದುಕೊಳ್ಳಲು ಹಲವು ಮಾರ್ಗಗಳಿವೆ. ಆದ್ದರಿಂದ ಹಿಂದಿನವರು ಮಾಡಿದ ತಪು್ಪಗಳನ್ನು ನಾವು ಮಾಡಲು ಸಾಧ್ಯವಿಲ್ಲ. ಸಿದ್ಧಾಂತ ಹೇರುವುದಕ್ಕಾಗಿ ತಪು್ಪಗಳನ್ನು ಮುಚ್ಚಿಟ್ಟುಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಸಮಿತಿ ಸದಸ್ಯರೊಬ್ಬರು ತಿಳಿಸಿದ್ದಾರೆ.

ಸೆಪ್ಟಂಬರ್​ನಲ್ಲಿ ಸಮಿತಿ ರಚಿಸಿದ್ದ ಸರ್ಕಾರ: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ನಡೆದಿದ್ದ ಮತ್ತು 2023-24ನೇ ಸಾಲಿನಲ್ಲಿ ಮಕ್ಕಳು ವ್ಯಾಸಂಗ ಮಾಡುತ್ತಿರುವ ಪಠ್ಯವನ್ನು ಪರಿಷ್ಕರಣೆ ಮಾಡುವ ಉದ್ದೇಶದಿಂದ ಸೆಪ್ಟಂಬರ್​ನಲ್ಲಿ ಡಾ. ಮಂಜುನಾಥ ಜಿ. ಹೆಗಡೆ ನೇತೃತ್ವದಲ್ಲಿ 37 ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net