ಮತ್ತೊಂದು ಭೀಕರ ಅಪಘಾತ, ಜಲ್ಲಿ ತುಂಬಿದ್ದ ಟಿಪ್ಪರ್​ ಪಲ್ಟಿ: 2 ಕಾರು, 1 ಬೈಕ್ ಮೇಲೆ ಮಗುಚಿ ಬಿದ್ದು ಆರು ಮಂದಿ ಸಾವು..

Accident
Published on

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿ, ಆರು ಮಂದಿ ಸಾವಿಗೀಡಾಗಿದ್ದಾರೆ. ಆ ಪೈಕಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜಲ್ಲಿ ತುಂಬಿದ್ದ ಟಿಪ್ಪರ್​ ಲಾರಿಯೊಂದು ಪಲ್ಟಿಯಾಗಿ 2 ಕಾರು, 1 ಬೈಕ್​ ಮೇಲೆ ಮಗುಚಿ ಬಿದ್ದು ಈ ಅಪಘಾತ ಸಂಭವಿಸಿದೆ.

ಕೆಂಗೇರಿಯಿಂದ ಬಿಡದಿ ಮಾರ್ಗ ಮಧ್ಯೆ ಬರುವ ಕುಂಬಳಗೋಡು ಸಮೀಪದ ಕಣಿಮಿಣಿಕೆ ಬಳಿ ಈ ಅಪಘಾತ ಸಂಭವಿಸಿದೆ. ಒಂದು ಕಾರಿನಲ್ಲಿದ್ದ ನಾಲ್ವರು, ಇನ್ನೊಂದು ಕಾರಿನಲ್ಲಿದ್ದ ಒಬ್ಬರು ಹಾಗೂ ಬೈಕ್​ನಲ್ಲಿದ್ದ ಇನ್ನೊಬ್ಬರು ಸೇರಿ ಒಟ್ಟು ಆರು ಮಂದಿ ಮೃತಪಟ್ಟಿದ್ದಾರೆ.

ಕೆಎ 02 ಎಂಎಂ 7749 ನಂಬರಿನ ಕಾರಿನಲ್ಲಿದ್ದ ನಿಖಿತಾ ರಾಣಿ (29), ವೀಣಮ್ಮ(42), ಇಂದ್ರಕುಮಾರ್ (14), ಕೀರ್ತಿಕುಮಾರ್ (40) ಮೃತಪಟ್ಟಿದ್ದಾರೆ. ಈ ನಾಲ್ವರೂ ಮಾಗಡಿ ಮೂಲದವರು. ಕೆಎ 05 ಎಂಜೆ 9924 ನಂಬರಿನ ಕಾರಿನಲ್ಲಿದ್ದ, ಟೊಯೊಟಾ ಕಂಪನಿಯ ನೌಕರ ಟಿ.ಜೆ. ಶಿವಪ್ರಕಾಶ್ ಸಾವಿಗೀಡಾಗಿದ್ದಾರೆ. ಇನ್ನು ಬೈಕ್​ನಲ್ಲಿದ್ದ ಜಿತಿನ್​ ಬಿ. ಜಾರ್ಜ್​ ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಸ್ಥಳದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ವೇಗವಾಗಿ ಬಂದ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅಪಘಾತದಿಂದಾಗಿ ಇಲ್ಲಿ ಭಾರಿ ಟ್ರಾಫಿಕ್ ಜಾಮ್​ ಆಗಿದ್ದು, ಕುಂಬಳಗೋಡು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಅಗತ್ಯ ಕ್ರಮಕೈಗೊಂಡಿದ್ದಾರೆ. ಅಪಘಾತಕ್ಕೆ ಕಾರಣವಾಗಿರುವ ಟಿಪ್ಪರ್ ಲಾರಿಯನ್ನು ಟೋ ಮಾಡಿ ತೆರವುಗೊಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net