

ಬೆಂಗಳೂರು: ಮೂರು ವರ್ಷಗಳ ಹಿಂದೆ ಪ್ರೇಮ್ ನಿರ್ದೇಶನದ 'ದಿ ವಿಲನ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ತಿಲಕ್, ಈಗ 'ವರ್ಣಾತರಂಗ' ಚಿತ್ರದ ಮೂಲಕ ವಾಪಸ್ಸಾಗಿದ್ದಾರೆ. ಈ ಚಿತ್ರದ ಮುಹೂರ್ತ ಇತ್ತೀಚೆಗಷ್ಟೇ ಬನಶಂಕರಿಯ ಶ್ರೀ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿದೆ. 'ದಿಯಾ' ಚಿತ್ರದ ನಿರ್ಮಾಪಕರಾದ ಕೃಷ್ಣ ಚೈತನ್ಯ ಕ್ಲಾಪ್ ಮಾಡುವ ಮೂಲಕ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆಗೆ ರಾಘಣ್ಣ ದಾಖಲು, ಸದ್ಯ ಆರೋಗ್ಯ ಹೇಗಿದೆ?
ಈ ಚಿತ್ರವನ್ನು ತೀರ್ಥೇಶ್ ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಕುರಿತು ಮಾತನಾಡುವ ಅವರು, ''ವರ್ಣತರಂಗ' ಎಂದರೆ ಬಣ್ಣಗಳ ಅಲೆಗಳು ಎಂಬ ಅರ್ಥ ಬರುತ್ತದೆ. ಪ್ರತಿಯೊಬ್ಬ ಮನುಷ್ಯನಲ್ಲಿಯೂ ಒಂದೊಂದು ರೀತಿಯ ವರ್ಣಗಳು ಇರುತ್ತದೆ. ಅವನ ಆಲೋಚನೆ ಮನಸ್ಥಿತಿ ಎಲ್ಲವೂ ಒಳಗೊಂಡಿರುತ್ತದೆ. ಹಾಗಾಗಿಯೇ ಈ ಶೀರ್ಷಿಕೆ ನಮ್ಮ ಚಿತ್ರಕ್ಕೆ ಹೋಲುತ್ತದೆ. ಚಿತ್ರಕ್ಕೆ 'ಎ ಲಾಸ್ಟ್ ಫೇಸ್' ಎಂಬ ಅಡಿಬರಹ ಇದೆ. ಇದೊಂದು ಕ್ರೈಂ, ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಸಬ್ಜೆಕ್ಟ್ ಚಿತ್ರ' ಎಂದು ವಿವರ ಕೊಡುತ್ತಾರೆ.
ಈ ಚಿತ್ರದ ಇನ್ನೊಂದು ವಿಶೇಷತೆ ಎಂದರೆ, 1865ರ ಕಾಲಘಟ್ಟದ ಎಳೆಯು ಕೊಡ ಕಾಣಸಿಗಲಿದೆಯಂತೆ. 'ಬ್ರಿಟಿಷರ ವಿರುದ್ಧ ಗುರೂಜಿಯೊಬ್ಬರು ಹೋರಾಡುವ ಅಂಶ ಚಿತ್ರದ ಹೈಲೈಟ್ ಆಗಲಿದೆ. ನಾಲ್ಕು ಹಂತದಲ್ಲಿ ಚಿತ್ರೀಕರಣ ಮಾಡಲು ನಿರ್ಧರಿಸಿದ್ದು, ಸದ್ಯ ಕಂಠೀರವ ಸ್ಟುಡಿಯೋದಲ್ಲಿ ಮೊದಲ ಹಂತದ ಚಿತ್ರೀಕರಣ ಆರಂಭಿಸಲಿದೇವೆ. ನಾನು ಮೂಲತಃ ತ್ರಿಡಿ ಅನಿಮೇಟರ್ ಹಾಗೂ ಗ್ರಾಫಿಕ್ ಡಿಸೈನರ್ ಆಗಿರುವದರಿಂದ ಇದಕ್ಕಾಗಿ ಸಿ.ಜಿ. ವರ್ಕ್ ಹಾಗೂ ಎಫೆಕ್ಟ್ ಕೆಲಸಗಳು ಮಾಡುತ್ತಿದ್ದೇವೆ. ಚಿತ್ರದಲ್ಲಿ ಸುಮಾರು 20% ರಷ್ಟು ಗ್ರಾಫಿಕ್ ಅಂಶವು ಕಾಣುತ್ತದೆ' ಎನ್ನುತ್ತಾರೆ ತೀರ್ಥೇಶ್.
ತಮ್ಮ ಪಾತ್ರದ ಬಗ್ಗೆ ವಿವರಿಸುವ ತಿಲಕ್, 'ನಾನು ಈ ಚಿತ್ರದಲ್ಲಿ ಇನ್ವೆಸ್ಟಿಗೇಷನ್ ಆಫೀಸರ್ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಪೊಲೀಸ್ ಅಧಿಕಾರಿ ಎಂದರೆ ಯೂನಿಫಾರ್ಮ್ ಇರುವುದಿಲ್ಲ. ಇಲ್ಲಿ ನಾನು ಅಂಡರ್ಕವರ್ ಕಾಪ್ ಆಗಿ ಅಭಿನಯಿಸುತ್ತಿದ್ದೇನೆ. ನಿರ್ದೇಶಕರು ಲಾಕ್ಡೌನ್ ಸಮಯದಲ್ಲಿ ಈ ಕಥೆ ಹೇಳಿದರು. ಕಥೆ ಬಹಳ ಇಷ್ಟವಾಯಿತು. ಇದು ಕ್ರೈo ಹಾಗೂ ಸಸ್ಪೆನ್ಸ್ ಸುತ್ತ ನಡೆಯುವ ಕಥೆ. ಹೊಸ ತಂಡವಾದರೂ ಚೆನ್ನಾಗಿ ಪ್ಲಾನ್ ಮಾಡಿಕೊಂಡು, ಚಿತ್ರ ಮಾಡುತ್ತಿದ್ದಾರೆ' ಎಂದರು.
ಚಿತ್ರದಲ್ಲಿ ತಿಲಕ್ ಜತೆಗೆ ವರ್ಧನ್ ಮತ್ತು ಮೇಘನಾ ಸಹ ಪ್ರಮುಪ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಶಿವಕುಮಾರ್ ನಿರ್ಮಿಸುತ್ತಿದ್ದು, ರಮೇಶ್ ರಾಜ್ ಛಾಯಾಗ್ರಹಣ ಮಾಡಿದರೆ, ವಿಜಯ್ ಯಾರ್ಡ್ಲಿ ಸಂಗೀತ ಸಂಯೋಜಿಸುತ್ತಿದ್ದಾರೆ.