

ಅಯೋಧ್ಯೆ: ಇಂದು ಅಯೋಧ್ಯೆ ರಾಮಮಂದಿರದಲ್ಲಿ ನಡೆಯಲಿರುವ ರಾಮಲಲ್ಲಾ ಪ್ರತಿಷ್ಠಾ ಸಮಾರಂಭಕ್ಕೆ ಇದೀಗ ಅಂತಿಮ ಕ್ಷಣಗಣನೆ ಆರಂಭಗೊಂಡಿದ್ದು, ರಾಮ ಸಂಭ್ರಮಕ್ಕೆ ಜೈಶ್ರೀರಾಮ್ ಎಂಬ ಘೋಷಣೆ ಮೂಲಕ ದೇವಾಲಯವನ್ನು ಪ್ರವೇಶಿಸುತ್ತಿರುವ ಭಕ್ತಾಧಿಗಳು, ಬೆಳ್ಳಂಬೆಳಗ್ಗೆಯೇ ದೇಗುಲದ ಮುಂದೆ ಭಕ್ತಿ ಪೂರ್ವಕ ನಮನ ಸಲ್ಲಿಸಿದ್ದಾರೆ.
ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿರುವ ದೇವಾಲಯದ ಟ್ರಸ್ಟ್ ಹಾಗೂ ಉತ್ತರಪದೇಶ ಸರ್ಕಾರ, ರಾಮಲಲ್ಲಾ ದರ್ಶನ ಪಡೆಯಲು ದೇಶದ ನಾನಾ ಭಾಗಗಳಿಂದ ಬರುತ್ತಿರುವ ಭಕ್ತರಿಗೆ ವಿಶೇಷ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದು, ಭಕ್ತರ ಪ್ರವೇಶಕ್ಕೆ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ಅನುಸರಿಸುತ್ತಿದೆ. ದೇಗುಲದೊಳಗೆ ಬರುವ ಪ್ರತಿ ಭಕ್ತರು ತಾವು ಪಡೆದಿರುವ ಪಾಸ್ ಅನ್ನು ಮುಖ್ಯದ್ವಾರದಲ್ಲಿ ಪ್ರದರ್ಶಿಸಬೇಕು ಎಂಬುದು ಮೂಲ ನಿಯಮ.
ಪಾಸ್ನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಆದ ಬಳಿಕ ದೇವಾಲಯದ ಒಳಗೆ ಪ್ರವೇಶವನ್ನು ಅನುಮತಿಸಲಾಗುತ್ತದೆ. ಪ್ರಾಣ ಪ್ರತಿಷ್ಠೆಯ ಸಮಾರಂಭದ ಬೆನ್ನಲ್ಲೇ ಅಯೋಧ್ಯೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದ್ದು, ಹನುಮಾನ್ ಘಡಿಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ,(ಏಜೆನ್ಸೀಸ್).