More

  ಹುಲಿ ಉಗುರು ಪ್ರಕರಣ: ಪ್ರಭಾವಿಗಳ ಬಂಧನ ಯಾವಾಗ? ಜಾಲತಾಣದಲ್ಲಿ ಹೊತ್ತಿಕೊಂಡ ಆಕ್ರೋಶದ ಕಿಚ್ಚು

  ಬೆಂಗಳೂರು: ನಿಜವಾದ ಹುಲಿ ಉಗುರು ಧರಿಸಿದ ಆರೋಪದ ಮೇಲೆ ಬಿಗ್​ಬಾಸ್​ ಮನೆಯಿಂದ ಸ್ಪರ್ಧಿ ವರ್ತೂರ್​ ಸಂತೋಷ್​ರನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಾಗಿನಿಂದ ರಾಜ್ಯದಲ್ಲಿ ಹುಲಿ ಉಗುರು ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ವೈಲ್ಡ್​ ಲೈಫ್ ಪ್ರೊಟೆಕ್ಷನ್ ಆಕ್ಟ್ ಅಡಿ ಬಂಧನವಾಗಿರುವ ಸಂತೋಷ್​ಗೆ 14 ದಿನಗಳ ನ್ಯಾಯಾಂಗ ಬಂಧನ ಸಹ ವಿಧಿಸಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಬಹಳಷ್ಟು ಚರ್ಚೆಯಾಗುತ್ತಿದೆ. ಇದರ ನಡುವೆ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್​, ನಟ ದರ್ಶನ್​, ಧನಂಜಯ ಗುರೂಜಿ, ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ ಮತ್ತು ಉಪೇಂದ್ರ ಬಳಿಯೂ ಹುಲಿ ಉಗುರು ಇರುವ ಬಗ್ಗೆ ಮಾಹಿತಿ ಹೊರಬಿದ್ದಿದ್ದು ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ ಬಹಳ ಜೋರಾಗಿ ನಡೆಯುತ್ತಿದೆ.

  ಬಿಗ್​ಬಾಸ್​ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸ್ಪರ್ಧಿಯೊಬ್ಬರನ್ನು ಬಿಗ್​ಬಾಸ್​ ಮನೆಯಿಂದಲೇ ಬಂಧಿಸಲಾಗಿದೆ. ಬಂಧನವೇನೋ ಸರಿ ಆದರೆ, ವರ್ತೂರ್​ ಸಂತೋಷ್​ಗೆ ಒಂದು ನ್ಯಾಯ ಮತ್ತು ಸೆಲೆಬ್ರಿಟಿಗಳಿಗೆ ಒಂದು ನ್ಯಾಯಾನಾ ಎಂಬ ಪ್ರಶ್ನೆ ಇದೀಗ ಜಾಲತಾಣದಲ್ಲಿ ಸುನಾಮಿಯಂತೆ ಎದ್ದಿದೆ. ಹಳೆಯ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡು ಇವರ ಮೇಲೆ ಯಾವಾಗ ಕ್ರಮ ಕೈಗೊಳ್ಳುತ್ತಿರಾ ಎಂದು ನೆಟ್ಟಿಗರು ಅರಣ್ಯ ಇಲಾಖೆ ಅಧಿಕಾರಿಗಳು ಪ್ರಶ್ನೆ ಮಾಡುತ್ತಿದ್ದಾರೆ.

  ಜಗ್ಗೇಶ್​ರನ್ನು ಯಾವಾಗ ಜೈಲಿಗೆ ಹಾಕ್ತೀರಾ?
  ಈ ಹಿಂದೆ ಮಾಧ್ಯಮ ಸಂದರ್ಶನವೊಂದರಲ್ಲಿ ನಟ ಜಗ್ಗೇಶ್​ ಅವರು ಹುಲಿ ಉಗುರು ಇರುವ ಲಾಕೆಟ್​ ಅನ್ನು ಕ್ಯಾಮೆರಾ ಮುಂದೆಯೇ ಹೊರ ತೆಗೆದು 20ನೇ ಹುಟ್ಟುಹಬ್ಬಕ್ಕೆ ನಮ್ಮ ತಾಯಿ ಮಾಡಿಸಿಕೊಟ್ಟರು. ಇದು ನಿಜವಾದ ಹುಲಿ ಉಗುರು. ನಾನು ಹುಲಿ ಇದ್ದಂಗೆ ಇದ್ದೀನಿ ಅಂತ ಈ ಹುಲಿ ಉಗುರು ಲಾಕೆಟ್​ ಮಾಡಿಸಿಕೊಟ್ಟರು. ಇಂದಿಗೂ ಅದನ್ನು ಜೋಪಾನವಾಗಿ ಇಟ್ಟುಕೊಂಡಿದ್ದೇನೆ ಎಂದು ನೇರವಾಗಿಯೇ ಹೇಳಿದ್ದರು. ಇದೀಗ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡುತ್ತಿರುವ ನೆಟ್ಟಿಗರು, ನಮ್ಮ ಜಗ್ಗೇಶ್​ ಅವರನ್ನು ಯಾವಾಗ ಜೈಲಿಗೆ ಕಳುಹಿಸುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.

  ದರ್ಶನ್​, ರಾಕ್​ಲೈನ್​ ಮೇಲೆ ಕ್ರಮ ಯಾಕಿಲ್ಲ?
  ವರ್ತೂರ್​ ಸಂತೋಷ್​ ಮೇಲೆ ಕಾನೂನು ಕ್ರಮ ಜರುಗಿಸಿದಷ್ಟು ವೇಗವಾಗಿ ದರ್ಶನ್​, ಜಗ್ಗೇಶ್​, ರಾಕ್​ಲೈನ್​ ವೆಂಕಟೇಶ್​ ಮೇಲೆ ಏಕಿಲ್ಲ? ವಿನಯ್​ ಗುರೂಜಿ ಅವರು ಹುಲಿ ಚರ್ಮದ ಮೇಲೆ ಕುಳಿತಿದ್ದರು ಎಂಬ ಆರೋಪವೂ ಇದೆ. ಅವರ ಮೇಲೆ ಕ್ರಮ ಯಾಕೆ ತೆಗೆದುಕೊಳ್ಳುತ್ತಿಲ್ಲ. ನಿಮ್ಮ ಅಧಿಕಾರದ ದರ್ಪ ಸಾಮಾನ್ಯ ಜನರ ಮೇಲೆ ಮಾತ್ರಾನಾ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೆ, ದರ್ಶನ್​, ರಾಕ್​ಲೈನ್​ ಅವರ ಫೋಟೋಗಳನ್ನು ಶೇರ್​ ಮಾಡಿ ಧ್ವನಿ ಏರಿಸಿದ್ದಾರೆ.

  ಟಿಪ್ಪು ಜಯಂತಿ, ಸಲ್ಮಾನ್​ ಖಾನ್​ ಹೆಸರು ಪ್ರಸ್ತಾಪ
  ಇನ್ನು ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಟಿಪ್ಪು ಸುಲ್ತಾನ್​ ಜಯಂತಿಯನ್ನು ಈ ವಿವಾದಕ್ಕೆ ಎಳೆದು ತಂದಿದ್ದಾರೆ. ಹುಲಿಯನ್ನು ಕೊಂದನ ಜಯಂತಿಯನ್ನು ಮಾಡುತ್ತೀರಿ ಆದರೆ ಹುಲಿಯ ಉಗುರನ್ನು ಕೊರಳಿಗೆ ಹಾಕಿಕೊಂಡರೆ ಬಂಧನ ಮಾಡುತ್ತೀರಿ ಅದು ಹೇಗೆ ಎಂಬುದನ್ನು ಸ್ವಲ್ಪ ಬಿಡಿಸಿ ಹೇಳುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಸಲ್ಮಾನ್ ಖಾನ್ ಅವರ ಕೃಷ್ಣಮೃಗ ಕೊಂದ ಪ್ರಕರಣವನ್ನು ನೆನಪಿಸಿರುವ ನೆಟ್ಟಿಗರು, ಕೃಷ್ಣಮೃಗ ಕೊಂದು ತಿಂದಂತಹ ವ್ಯಕ್ತಿ ಬಿಗ್​ಬಾಸ್ ರಿಯಾಲಿಟಿ ಶೋ ನಡೆಸಿಕೊಡುತ್ತಾರೆ. ಆದರೆ, ಒಬ್ಬ ಹಿಂದುಳಿದ ವರ್ಗದಿಂದ ಬಂದಂತಹ ಪ್ರತಿಭೆಯನ್ನು ಮೊಳಕೆಯಲ್ಲಿ ಹೊಸಕಿ ಹಾಕೋ ಪ್ರಯತ್ನ ಮಾಡುತ್ತಾರೆ ಇದು ದುರಾದೃಷ್ಟಕರ ಎಂದು ಅಸಮಾಧಾನ ಹೊರಹಾಕಿದ್ದಾರೆ.

  ಆಕ್ರೋಶದ ಬೆನ್ನಲ್ಲೇ ಎಚ್ಚೆತ್ತ ಅರಣ್ಯಾಧಿಕಾರಿಗಳು
  ಸಾಮಾಜಿಕ ಜಾಲತಾಣದಲ್ಲಿ ಜನ ಸಾಮಾನ್ಯರ ಆಕ್ರೋಶ ಭುಗಿಲೆದ್ದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅರಣ್ಯಾಧಿಕಾರಿಗಳು ಇಂದು ನಟರಾದ ದರ್ಶನ್​ ಹಾಗೂ ಜಗ್ಗೇಶ್ ಮತ್ತು ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ ಮನೆಯ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ವಿನಯ್​ ಗುರೂಜಿ ಅವರ ಗೌರಿಗದ್ದೆ ಆಶ್ರಮಕ್ಕೆ ಭೇಟಿ ನೀಡಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ದರ್ಶನ್​ ಅವರ ರಾಜರಾಜೇಶ್ವರಿ ನಗರದ ನಿವಾಸ ಮತ್ತು ಜಗ್ಗೇಶ್​ ಅವರ ಮಲ್ಲೇಶ್ವರಂ ನಿವಾಸ ಹಾಗೂ ರಾಕ್​ಲೈನ್​ ಅವರು ಮಹಾಲಕ್ಷ್ಮೀ ಲೇಔಟ್​ ನಿವಾಸದಲ್ಲಿ ಅರಣ್ಯಾಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ. ಆದರೆ, ಈಗಾಗಲೇ ಅವರುಗಳು ಹೆಸರು ಪ್ರಸ್ತಾವಾಗಿ ತುಂಬಾ ಸಮಯ ಆಗಿರುವುದರಿಂದ ಅವರುಗಳು ಈಗಾಗಲೇ ಎಚ್ಚೆತ್ತುಕೊಂಡಿರುತ್ತಾರೆ ಎಂಬ ಅಭಿಪ್ರಾಯವೂ ನೆಟ್ಟಿಗರಲ್ಲಿದೆ.

  ಒತ್ತಡದಲ್ಲಿ ಸಿಲುಕಿದ್ರಾ ಅರಣ್ಯಾಧಿಕಾರಿಗಳು?
  ವರ್ತೂರ್​ ಸಂತೋಷ್​ ಬಂಧನದ ಬಳಿಕ ಅರಣ್ಯಾಧಿಕಾರಿಗಳು ಒತ್ತಡಕ್ಕೆ ಸಿಲುಕಿದ್ರಾ ಎಂಬ ಚರ್ಚೆಗಳು ಸಹ ಶುರುವಾಗಿದೆ. ಏಕೆಂದರೆ, ಸಾಮಾಜಿಕ ಜಾಲತಾಣದಲ್ಲಿ ಘಟಾನುಘಟಿ ನಾಯಕರು ಹುಲಿ ಉಗುರು ಧರಿಸಿರುವ ಫೋಟೋ ಮತ್ತು ವಿಡಿಯೋಗಳನ್ನು ಶೇರ್​ ಮಾಡಿಕೊಂಡು, ಇವರ ವಿರುದ್ಧ ಯಾವಾಗ ಕ್ರಮ ತೆಗೆದುಕೊಳ್ಳುತ್ತೀರಾ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ, ವರ್ತೂರ್​ ಸಂತೋಷ್​ರನ್ನು ಸುಲಭವಾಗಿ ಬಂಧಿಸಿದ ರೀತಿ ಪ್ರಭಾವಿ ಸೆಲೆಬ್ರಿಟಿಗಳನ್ನು ವಶಕ್ಕೆ ಪಡೆಯಲು ಸಾಧ್ಯವಿಲ್ಲ. ಇದರಿಂದ ಜನರ ದೃಷ್ಟಿಯಲ್ಲಿ ಅಧಿಕಾರಿಗಳ ವಿರುದ್ಧ ಕೆಟ್ಟ ಅಭಿಪ್ರಾಯ ಮೂಡುವ ಆತಂಕ ಎರದುರಾಗಿದೆ.

  ವರ್ತೂರ್​ ಸಂತೋಷ್​ ವಿರುದ್ಧವೂ ಟೀಕೆ
  ಒಂದು ವರ್ಗ ವರ್ತೂರ್​ ಸಂತೋಷ್​ಗೆ ಬೆನ್ನಿಗೆ ನಿಂತಿದ್ದರೆ, ಇನ್ನೊಂದು ವರ್ಗ ವರ್ತೂರ್​ ಸಂತೋಷ್​ ಅವರನ್ನು ಟೀಕಿಸುತ್ತಿದ್ದಾರೆ. ಅದಕ್ಕೆ ಕಾರಣ ಅವರ ಹಳೆಯ ವಿಡಿಯೋವೊಂದು ವೈರಲ್​ ಆಗಿತ್ತು. ಅದರಲ್ಲಿ ಸಂತೋಷ ಏನು ಹೇಳಿದ್ದರು ಅಂದರೆ, ಎಲ್ಲರು ಅವರಪ್ಪನ ದುಡ್ಡಿಲ್ಲಿ ಮಜಾ ಮಾಡುತ್ತಾನೆ ಅಂತಾರೆ. ಹೌದು ನಾನು ನಮ್ಮಪ್ಪನ ದುಡ್ಡಲ್ಲಿ ಮಜಾ ಮಾಡುತ್ತೇನೆ. ನಮ್ಮಪ್ಪನಿಗೆ ಹುಟ್ಟಿದರೆ ಅವರು ಮಜಾ ಮಾಡಲಿ ಎಂದಿದ್ದರು. ಇದೀಗ ಆ ವಿಡಿಯೋವನ್ನು ಶೇರ್​ ಮಾಡಿಕೊಂಡು ದುಡ್ಡು ನಿಮ್ಮ ಅಪ್ಪಂದೆ ಆದರೆ, ಹುಲಿ ಉಗುರು ನಿಮ್ಮ ಅಪ್ಪನದಲ್ಲ ಮತ್ತು ಕಾನೂನಿನ ಮುಂದೆ ಯಾರಪ್ಪನ ಆಟವೂ ನಡೆಯಲ್ಲ ಎಂದು ಹಳೇ ವಿಡಿಯೋ ವೈರಲ್​ ಆಗುತ್ತಿದ್ದಾರೆ.

  ವನ್ಯಜೀವಿ ಕಾಯ್ದೆ ಏನು ಹೇಳುತ್ತದೆ?
  ವನ್ಯಜೀವಿಗಳಿಗೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಕಾನೂನಿನ ಪ್ರಕಾರ ಅಕ್ರಮ. ಅಕ್ರಮವಾಗಿ ಹೊಂದಿದ್ದಲ್ಲಿ, ಆರೋಪ ಸಾಬೀತಾದರೆ, ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ. ವರ್ತೂರ್​ ಸಂತೋಷ್​ ಪ್ರಕರಣದಲ್ಲೂ ಇದೇ ನಿಯಮ ಪಾಲನೆಯಾಗಲಿದೆ. ಒಂದು ವೇಳೆ ವರ್ತೂರ್​ ಬಳಿ ಇರುವುದು ನಿಜವಾದ ಹುಲಿ ಉಗುರು ಎಂಬುದು ನ್ಯಾಯಾಲಯದಲ್ಲಿ ಸಾಬೀತಾಗಿದ್ದಲ್ಲಿ, ಮೂರರಿಂದ ಏಳು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅಡಿಯಲ್ಲಿ ಸಂತೋಷ್ ಅವರ ಬಂಧನ ಆಗಿದೆ. ಆರೋಪ ಸಾಬೀತಾದರೆ 3ರಿಂದ 7 ವರ್ಷಗಳವರೆಗೆ ಶಿಕ್ಷೆ ಆಗುತ್ತದೆ. 10,000 ರಿಂದ 25,000ದವರೆಗೆ ದಂಡ ವಿಧಿಸುವ ಸಾಧ್ಯತೆ ಇದೆ.

  ಹುಲಿ ಉಗುರಿನ ಪ್ರಕರಣ: ಬಿದನಗೆರೆಯ ಶನಿಮಹಾತ್ಮ ದೇವಾಲಯದ ಧನಂಜಯ ಗುರೂಜಿಗೆ ಎದುರಾಯ್ತು ಸಂಕಷ್ಟ

  ಹುಲಿ ಉಗುರು ಪ್ರಕರಣ: ನಟ ದರ್ಶನ್​, ವಿನಯ್​ ಗುರೂಜಿ ವಿರುದ್ಧ ದೂರು ದಾಖಲು

  ಹುಲಿ ಉಗುರಿನ ಪ್ರಕರಣ: ಬಿದನಗೆರೆಯ ಶನಿಮಹಾತ್ಮ ದೇವಾಲಯದ ಧನಂಜಯ ಗುರೂಜಿಗೆ ಎದುರಾಯ್ತು ಸಂಕಷ್ಟ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts