ಹುಲಿ ಉಗುರು ಕೇಸ್​ನಲ್ಲಿ ಕೆಲವರ ಬಂಧನ: ಸಚಿವೆಯ ಪುತ್ರ, ಅಳಿಯನ ಮೇಲೆ ಕ್ರಮ ಯಾಕಿಲ್ಲ ಎಂದು ನೆಟ್ಟಿಗರ ಆಕ್ರೋಶ

Huli uguru
Published on

ಬೆಂಗಳೂರು: ಹುಲಿ ಉಗುರು ಪೆಂಡೆಂಟ್​ ಧರಿಸಿದ ಆರೋಪದ ಮೇಲೆ ಬಿಗ್​ಬಾಸ್​ ಸ್ಪರ್ಧಿ ವರ್ತೂರ್​ ಸಂತೋಷ್ ಅವರನ್ನು ಬಂಧಿಸಿದ ಬೆನ್ನಲ್ಲೇ ರಾಜ್ಯದಲ್ಲಿ ಹುಲಿ ಉಗುರು ಪ್ರಕರಣ ಭಾರೀ ಸದ್ದು ಮಾಡುತ್ತಿದ್ದು, ಸಾಲು ಸಾಲು ಬಂಧನವಾಗುತ್ತಿರುವ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಜನಾಕ್ರೋಶವೂ ವ್ಯಕ್ತವಾಗುತ್ತಿದೆ.

ಹುಲಿ ಉಗುರು ಧರಿಸಿದ ಆರೋಪದಲ್ಲಿ ಚಿಕ್ಕಮಗಳೂರಿನಲ್ಲಿ ಇಬ್ಬರು ಅರ್ಚಕರನ್ನು ಅರಣ್ಯ ಇಲಾಖೆ ಬಂಧನ ಮಾಡಿದೆ. ಬಂಧಿತ ಅರ್ಚಕರನ್ನು ಕೃಷ್ಣಾನಂದ ಹೊಳ್ಳ, ನಾಗೇಂದ್ರ ಜೋಯಿಸ ಎಂದು ಗುರುತಿಸಲಾಗಿದೆ. ಅಲ್ಲದೆ, ಅನೇಕರಿಗೆ ಈಗಾಗಲೇ ಬೆದರಿಕೆ ಸಹ ಉಂಟಾಗಿದ್ದು, ತಮ್ಮ ಬಳಿ ಇರುವ ಹುಲಿ ಉಗುರನ್ನು ಮರೆ ಮಾಚಲು ಯತ್ನಿಸುತ್ತಿದ್ದಾರೆ. ಇದರ ನಡುವೆ ಅರಣ್ಯಾಧಿಕಾರಿಗಳ ಕ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಲಾಗುತ್ತಿದೆ.

ಅರ್ಚಕರು ಸೇರಿದಂತೆ ಸಾಮಾನ್ಯ ಜನರ ಮೇಲೆ ಕ್ರಮ ಕೈಗೊಳ್ಳುತ್ತಿರುವ ಅರಣ್ಯಾಧಿಕಾರಿಗಳು, ಪ್ರಭಾವಿಗಳ ಮೇಲೆ ಅಷ್ಟೇ ವೇಗವಾಗಿ ಏಕೆ ಕ್ರಮ ಜರುಗಿಸುತ್ತಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಅವರ ಪುತ್ರ ಮತ್ತು ಅಳಿಯ ಇಬ್ಬರ ಕೊರಳಲ್ಲೂ ಹುಲಿ ಉಗುರು ಇದ್ದು, ನೆಟ್ಟಿಗರು ಫೋಟೋಗಳನ್ನು ಶೇರ್​ ಮಾಡಿಕೊಂಡು ಇವರ ಮೇಲೆ ಕ್ರಮ ಯಾಕಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಹುಲಿ ಉಗುರು ಧರಿಸಿದ್ದ ಆರೋಪದ ಮೇಲೆ ಖಾಂಡ್ಯ ಮಾರ್ಕಾಂಡೇಶ್ವರ ದೇವಾಲಯದ ಅರ್ಚಕರನ್ನು ಬಂಧಿಸುವ ಕಾಂಗ್ರೆಸ್​ ಸರ್ಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಅವರ ಅಳಿಯ ಮತ್ತು ಪುತ್ರರನ್ನು ಯಾಕೆ ಅರಣ್ಯ ಇಲಾಖೆ ಬಂಧಿಸುವುದಿಲ್ಲ ಎಂದು ಫೇಸ್​ಬುಕ್​ನಲ್ಲಿ ಆದರ್ಶ್​ ರೂಗಿಮತ್​ ಎಂಬುವರು ಪ್ರಶ್ನೆ ಮಾಡಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿ ಮೇಲೂ ದೂರು

ಚಿಕ್ಕಮಗಳೂರಿನ ಉಪ ವಲಯ ಅರಣ್ಯಾಧಿಕಾರಿ ಮೇಲೂ ದೂರು ದಾಖಲಾಗಿದೆ. ಹುಲಿ ಉಗುರು ಧರಿಸಿದ್ದಾರೆ, ವನ್ಯ ಜೀವಿ ಕಾಯ್ದೆಯಲ್ಲಿ ಪ್ರಕರಣ ದಾಖಲಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಕಳಸದ ಡಿ.ಆರ್.ಎಫ್.ಓ. ದರ್ಶನ್ ವಿರುದ್ದ ದೂರು ದಾಖಲಾಗಿದೆ. ಅರೆನೂರು ಗ್ರಾಮದ ಸುಪ್ರೀತ್, ಅಬ್ದುಲ್ ಎಂಬುವವರು ಆಲ್ದೂರು ವಲಯ ಅರಣ್ಯಾಧಿಕಾರಿಗೆ ದೂರು ನೀಡಿದ್ದಾರೆ.

ನಾಮಕಾವಸ್ತೆ ವಿಚಾರಣೆ

ಸಂತೋಷ್​ ಬಂಧನದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹುಲಿ ಉಗುರು ಧರಿಸಿದ ಸೆಲೆಬ್ರಿಟಿಗಳ ಫೋಟೋ ವೈರಲ್ ಆಗಿ ಆಕ್ರೋಶ ವ್ಯಕ್ತವಾದ ಬಳಿಕ ಅರಣ್ಯಾಧಿಕಾರಿಗಳು ಸೆಲೆಬ್ರಿಟಿಗಳ ಮನೆಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನೆಡೆಸಿದ್ದಾರೆ. ಆದರೆ, ಅಧಿಕಾರಿಗಳ ಕ್ರಮದ ಬಗ್ಗೆ ನೆಟ್ಟಿಗರು ಅಸಮಾಧಾನ ಹೊರಹಾಕಿದ್ದಾರೆ. ಅಧಿಕಾರಿಗಳ ದಾಳಿ ಕೇವಲ ಕಣ್ಣೊರೆಸುವ ತಂತ್ರವಷ್ಟೇ, ಸೆಲೆಬ್ರಿಟಿಗಳಿಗೆ ನೋಟಿಸ್​​ ನೀಡಿದ್ದು, ಅವರಿಗೆ ವಿಚಾರಣೆಗೆ ಯಾವುದೇ ಗಡುವು ನೀಡದೇ ಅವರು ಯಾವಾಗ ಬೇಕಾದರೂ ಬರಲು ಅರಣ್ಯ ಇಲಾಖೆ ಅಧಿಕಾರಿಗಳು ಸಮಯ ನೀಡಿದ್ದಾರೆ. ಇದ್ಯಾವ ನ್ಯಾಯ ಎಂಬ ಚರ್ಚೆ ಜೋರಾಗಿದೆ. ಅರಣ್ಯಾಧಿಕಾರಿಗಳ ನಡೆ ಅನುಮಾನ ಮೂಡಿಸಿದ್ದು, ಈ ಪ್ರಕರಣ ಹೇಗೆ ಅಂತ್ಯವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net