ಟಿ-20 ವಿಶ್ವಕಪ್​ನ ಇಂಡೋ - ಪಾಕ್ ಪಂದ್ಯದ ಟಿಕೆಟ್ ಸೋಲ್ಡ್​ ಔಟ್; ಸೇಡು ತೀರಿಸುವ ತವಕದಲ್ಲಿ ಭಾರತ

Ind Pak
Published on

ನವದೆಹಲಿ: ಸಾಂಪ್ರದಾಯಿಕ ಎದುರಾಳಿ ಭಾರತ - ಪಾಕಿಸ್ತಾನ ತಂಡಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ಕ್ರಿಕೆಟ್ ವಿಶ್ವಕಪ್​ನಲ್ಲಿ ಮತ್ತೆ ಎದುರಾಗುತ್ತಿವೆ. ಮುಂದಿನ ತಿಂಗಳು ಅ.23 ರಂದು ಮೆಲ್ಬೋರ್ನ್​ ಅಂಗಳದಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯದ ಎಲ್ಲಾ ಟಿಕೆಟ್​ಗಳು ಒಂದು ತಿಂಗಳ ಮುಂಚಿತವಾಗಿಯೇ ಸೋಲ್ಡ್​ ಔಟ್ ಆಗಿದೆ ಎಂದು ಐಸಿಸಿ ತಿಳಿಸಿದೆ.

ಭಾರತ - ಪಾಕಿಸ್ತಾನ ಪಂದ್ಯ 5 ಲಕ್ಷ ಟಿಕೆಟ್​ಗಳು ಬುಕ್​ ಆಗಿದ್ದು, ಪಂದ್ಯ ವೀಕ್ಷಿಸಲು ವಿವಿಧ ದೇಶದ ಅಭಿಮಾನಿಗಳು ಖಾತರದಿಂದ ಕಾಯುತ್ತಿದ್ದಾರೆ. ಸದ್ಯ ಮೆಲ್ಬೋರ್ನ್​ ಅಂಗಳದ ಮೀಸಲು ಸೀಟುಗಳು ಕೂಡ ಬುಕ್ ಆಗಿದೆ. ಹೀಗಾಗಿ ಪಂದ್ಯಾಟದ ದಿನ ಅಧಿಕೃತವಾಗಿ ಟಿಕೆಟನ್ನು ಮರು ಮಾರಾಟ ಮಾಡುವ ಅವಕಾಶ ಪ್ರಾರಂಭಿಸಲಾಗುವುದು. ಅಭಿಮಾನಿಗಳು ಮುಖಬೆಲೆಯಲ್ಲಿ ನೇರವಾಗಿ ಟಕೆಟ್​​ಗಳನ್ನು ವಿನಿಮಯ ಮಾಡಿಕೊಳ್ಳಬಹುದು ಎಂದು ಐಸಿಸಿ ಹೇಳಿದೆ.

ಇತ್ತೀಚೆಗೆಷ್ಟೇ ಮುಕ್ತಾಯವಾಗಿದ್ದ ಏಷ್ಯಾಕಪ್​ನಲ್ಲಿ ಎರಡು ಬಾರಿ ಭಾರತ - ಪಾಕಿಸ್ತಾನ ತಂಡಗಳು ಎದುರಾಗಿದ್ದವು. ಮೊದಲ ಪಂದ್ಯದಲ್ಲಿ ಭಾರತ 5 ವಿಕೆಟ್​ಗಳಿಂದ ಗೆದ್ದುಕೊಂಡಿತ್ತು. ಆದರೆ ಎರಡನೇ ಪಂದ್ಯದಲ್ಲಿ ಸೋಲನ್ನು ಕಂಡಿತ್ತು. ಇದೀಗ ಮತ್ತೆ ಒಂದು ತಿಂಗಳ ಅಂತರದಲ್ಲಿ ಭಾರತ - ಪಾಕಿಸ್ತಾನ ತಂಡ ಎದುರಾಗುತ್ತಿದೆ.

ಮೊದಲ ಟಿ-20 ವಿಶ್ವಕಪ್ ಫೈನಲ್​ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಜಯಭೇರಿ
2007ರಲ್ಲಿ ನಡೆದ ಮೊದಲ ಟಿ-20 ವಿಶ್ವಕಪ್​ ಫೈನಲ್​ನಲ್ಲಿ ಭಾರತ - ಪಾಕಿಸ್ತಾನ ತಂಡ ಮುಖಾಮುಖಿಯಾಗಿತ್ತು. ಮೊದಲು ಬ್ಯಾಟ್ ಮಾಡಿದ ಭಾರತ ತಂಡ 158 ರನ್​ಗಳ ಗುರಿಯನ್ನು ಪಾಕಿಸ್ತಾನಕ್ಕೆ ನೀಡಿತ್ತು. ಉತ್ತಮವಾಗಿ ಆಡುತ್ತಿದ್ದ ಪಾಕಿಸ್ತಾನ ತಂಡವೇ ಮೊದಲ ಟಿ-20 ವಿಶ್ವಕಪ್​ ಗೆಲ್ಲುತ್ತದೆ ಎಂದು ಎಲ್ಲರೂ ನಿರ್ಧರಿಸಿದ್ದರು. ಆದರೆ ಕ್ರಿಕೆಟ್ ಅಂಗಳದಲ್ಲಿ ಆಗಿದ್ದೇ ಬೇರೆ. ಕೊನೆಯ ಹಂತದವರೆಗೂ ಕುತೂಹಲಕರವಾಗಿ ಸಾಗಿದ ಫೈನಲ್​ ಪಂದ್ಯದಲ್ಲಿ ಭಾರತ ರೋಚಕ ಜಯ ಸಾಧಿಸಿತು. ಈ ಮೂಲಕ ಮೊದಲ ಟಿ-20 ವಿಶ್ವಕಪ್​ನ್ನು ಗೆದ್ದುಕೊಂಡು ಭಾರತ ತಂಡ ಇತಿಹಾಸ ದಾಖಲಿಸಿತು.

ಸೇಡು ತೀರಿಸಿಕೊಳ್ಳುವ ತವಕದಲ್ಲಿ ಭಾರತ
ವಿಶ್ವಕಪ್ ಇತಿಹಾಸದಲ್ಲಿ ಭಾರತದ ತಂಡ ಒಮ್ಮೆಯೂ ಪಾಕಿಸ್ತಾನ ವಿರುದ್ಧ ಸೋಲದ ದಾಖಲೆ ಮಾಡಿತ್ತು. ಆದರೆ ಈ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಕಳೆದ ವರ್ಷದ ಟಿ-20 ವಿಶ್ವಕಪ್​ನಲ್ಲಿ ಪಾಕಿಸ್ತಾನ ತಂಡಕ್ಕೆ ಸಾಧ್ಯವಾಗಿತ್ತು. ದುಬೈನಲ್ಲಿ ನಡೆದ 2021ರ ಟಿ-20 ವಿಶ್ವಕಪ್​ನಲ್ಲಿ ಭಾರತ - ಪಾಕಿಸ್ತಾನ ಮತ್ತೆ ಎದುರಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ 7 ವಿಕೆಟ್ ಕಳೆದುಕೊಂಡು 151 ರನ್ ಕಲೆ ಹಾಕಿತ್ತು. ಈ ಮೊತ್ತವನ್ನು ಬೆನ್ನು ಹತ್ತಿದ ಪಾಕಿಸ್ತಾನ ತಂಡ ಯಾವುದೇ ವಿಕೆಟ್ ಕಳೆದುಕೊಳ್ಳದೆ 10 ವಿಕೆಟ್​ಗಳ ಜಯ ದಾಖಲಿಸಿತ್ತು. ಈ ಮೂಲಕ ಮೊದಲ ಬಾರಿಗೆ ವಿಶ್ವಕಪ್​ನಲ್ಲಿ ಭಾರತವನ್ನು ಬಾಬರ್ ಅಝಮ್ ನಾಯಕತ್ವದ ಪಾಕಿಸ್ತಾನ ತಂಡ ಸೋಲಿಸಿತ್ತು.

ಇದೀಗ ಮತ್ತೆ ಟಿ-20 ವಿಶ್ವಕಪ್​ನಲ್ಲಿ ಭಾರತ - ಪಾಕಿಸ್ತಾನ ಎದುರಾಗುತ್ತಿದೆ. ಕಳೆದ ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಳ್ಳಲು ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಮತ್ತೆ ರೆಡಿಯಾಗಿದೆ. ಹಿಗಾಗಿ ಅ. 23 ರಂದು ಮೆಲ್ಬೋರ್ನ್​ ಅಂಗಳದಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದತ್ತ ಕ್ರಿಕೆಟ್ ಪ್ರೇಮಿಗಳು ಚಿತ್ತ ಹರಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net