ಏಪ್ರಿಲ್​ 15ರಿಂದ ಪ್ರಯಾಣಕ್ಕೆ ವಿಮಾನ ಯಾನ ಸಂಸ್ಥೆಗಳಿಂದ ಟಿಕೆಟ್​ ಬುಕಿಂಗ್​ ಶುರು

PIA Flight
Published on

ನವದೆಹಲಿ: ಲಾಕ್​ಡೌನ್​ ಅವಧಿ ಪೂರ್ಣಗೊಂಡ ನಂತರ ರೈಲು ಹಾಗೂ ವಿಮಾನಗಳ ಸಂಚಾರ ಮತ್ತೆ ಆರಂಭವಾಗಲಿದೆ.

ಸದ್ಯ ಏಪ್ರಿಲ್​ 14ರವರೆಗೆ ದೇಶಾದ್ಯಂತ ಲಾಕ್​ಡೌನ್​ ಘೋಷಿಸಲಾಗಿದೆ. ಈ ಅವಧಿಯನ್ನು ಮುಂದುವರಿಸಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರದ ಸ್ಪಷ್ಟ ಭರವಸೆ ಕಾರಣದಿಂದಾಗಿ ವಿಮಾನ ಯಾನ ಸಂಸ್ಥೆಗಳು ಬುಕಿಂಗ್​ ಆರಂಭಿಸಿವೆ. ಈ ಬಗ್ಗೆ ಪ್ರಯಾಣಿಕರು ಸಂಸ್ಥೆಯಿಂದ ಅಗತ್ಯ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ಕೆಲ ವಿಮಾನ ಯಾನ ಸಂಸ್ಥೆಗಳು ಬುಕಿಂಗ್​ ಶುರುವಾಗಿದೆ ಎಂದು ವೆಬ್​ಸೈಟ್​ನಲ್ಲಿ ಪ್ರಕಟಿಸಿವೆ. ಸ್ಪೈಸ್​ ಜೆಟ್​, ಇಂಡಿಗೋ, ಗೋ ಏರ್​ ಮೊದಲಾದ ಸಂಸ್ಥೆಗಳು ಏಪ್ರಿಲ್​ 15 ರ ಬಳಿಕ ದೇಶೀಯ ಯಾನಕ್ಕೆ ಬುಕಿಂಗ್​ ಲಭ್ಯವಿದೆ ಎಂದು ಘೋಷಿಸಿವೆ. ಆದರೆ, ಈ ಕುರಿತು ಅಧಿಕೃತ ಪ್ರಕಟನೆಯನ್ನು ಈವರೆಗೂ ಹೊರಡಿಸಿಲ್ಲ. ಹೀಗಾಗಿ ಪ್ರಯಾಣಿಕರಲ್ಲಿ ಬುಕಿಂಗ್​ ಮಾಡಬೇಕೋ ಬೇಡವೋ ಎಂಬ ಗೊಂದಲ ಮುಂದುವರಿಯಲು ಕಾರಣವಾಗಿದೆ.

ರೈಲ್ವೆ ಮುಂಗಡ ಕಾದಿರಿಸುವಿಕೆ ನಿಲ್ಲಿಸಿಲ್ಲ

ಟಿಕೆಟ್​ ಮುಂಗಡ ಕಾದಿರಿಸುವಿಕೆಯನ್ನು ರದ್ದು ಪಡಿಸಿಲ್ಲ ಎಂದು ಭಾರತೀಯ ರೈಲ್ವೆ ತಿಳಿಸಿದೆ. 120 ದಿನ ಮುಂಚಿತವಾಗಿ ಟಿಕೆಟ್​ ಕಾದಿರಿಸುವ ವ್ಯವಸ್ಥೆ ಹಿಂದಿನಂತೆ ಈಗಲೂ ಮುಂದುವರಿದಿದೆ. ಲಾಕ್​ಡೌನ್​ ಅವಧಿ ಹೊರತುಪಡಿಸಿ ಉಳಿದ ಅವಧೀಗೆ ಈಗಲೂ ಕಾದಿರಿಸಬಹುದು ಎಂದು ರೈಲ್ವೆ ಸಚಿವಾಲಯ ಸ್ಪಷ್ಟಪಡಿಸಿದೆ.

ಏಪ್ರಿಲ್​ 15 ಹಾಗೂ ಅದರ ನಂತರದ ಅವಧಿಗೆ ಮೊದಲಿನಿಂದಲೇ ಮುಂಗಡ ಟಿಕೆಟ್​ ಕಾದಿರಿಸಲಾಗಿದೆ. ಆದ್ದರಿಂದ ಯಾರಾದರೂ ಈ ಟಿಕೆಟ್​ ರದ್ದು ಪಡಿಸುವುದಾದಲ್ಲಿ ಅವರಿಗೆ ಜೂನ್​ 21ರವರೆಗೆ ಅವಕಾಶ ನೀಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net