ಟಿಕೆಟ್ ಬುಕಿಂಗ್ ಹೆಚ್ಚುವರಿ ಕೇಂದ್ರ : ಸುಬ್ರಹ್ಮಣ್ಯ ಬಸ್ ನಿಲ್ದಾಣದಲ್ಲಿ ಬೇಡಿಕೆ : ಭಕ್ತರಿಗೆ ಸರತಿ ಸಾಲಿನಲ್ಲಿ ಕಾಯುವ ಸಂಕಷ್ಟ

New Project (23)
Published on

ರತ್ನಾಕರ ಸುಬ್ರಹ್ಮಣ್ಯ

ಕುಕ್ಕೆ ಸುಬ್ರಹ್ಮಣ್ಯದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುವುದರಿಂದ ದಟ್ಟಣೆ ನಿವಾರಣೆಗಾಗಿ ಹೆಚ್ಚುವರಿ ಟಿಕೆಟ್ ಬುಕಿಂಗ್(ಮುಂಗಡ ಟಿಕೆಟ್ ಬುಕಿಂಗ್) ಕೇಂದ್ರ ಆರಂಭಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.

ಸುಬ್ರಹ್ಮಣ್ಯದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಕೆಳಗಿನ ನಿಲ್ದಾಣದಲ್ಲಿ ಸಂಸ್ಥೆಯ ಒಂದು ಟಿಕೆಟ್ ಬುಕಿಂಗ್ ಕೇಂದ್ರವಿದ್ದು, ಇಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಲಾಗುತ್ತಿದೆ. ಕುಕ್ಕೆಗೆ ದಿನನಿತ್ಯ ಸಾವಿರಾರು ಸಂಖ್ಯೆಯ ಭಕ್ತರು ಬಸ್ ಮೂಲಕ ದೂರದ ಊರುಗಳಿಂದ ಆಗಮಿಸುತ್ತಿದ್ದಾರೆ. ಅವರಿಗೆ ಈ ಒಂದು ಕೌಂಟರ್‌ನಿಂದ ಮುಂಗಡ ಟಿಕೆಟ್ ಪಡೆಯುವುದು ತ್ರಾಸದಾಯಕವಾಗಿದೆ. ಶಕ್ತಿ ಯೋಜನೆ ಬಳಿಕ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಹೆಚ್ಚಳಗೊಂಡಿದೆ. ಟಿಕೆಟ್ ಬುಕ್ಕಿಂಗ್ ಸಮಯದಲ್ಲಿ ಇಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗುತ್ತಿದ್ದು, ಕಾಯುವ ಸ್ಥಿತಿ ನಿರ್ಮಾಣಗೊಂಡಿದೆ. ಸರತಿ ಸಾಲಿನಲ್ಲಿ ಕಾದು ನಿಂತು ಟಿಕೆಟ್ ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ.

ಕೌಂಟರ್ ಬಳಿ ದಟ್ಟಣೆ: ರಜಾ ದಿನ, ವಿಶೇಷ ದಿನಗಳಲ್ಲಿ ಅಧಿಕ ಸಂಖ್ಯೆಯ ಭಕ್ತರು ಕುಕ್ಕೆಗೆ ಆಗಮಿಸುತ್ತಾರೆ. ಈ ವೇಳೆ ಟಿಕೆಟ್ ಬುಕ್ಕಿಂಗ್ ಕೌಂಟರ್ ಬಳಿ ಪ್ರಯಾಣಿಕರ ದಟ್ಟಣೆ ಉಂಟಾಗುತ್ತದೆ. ಇದರಿಂದ ಪ್ರಯಾಣಿಕರು ತುಂಬಾ ಹೊತ್ತು ಸಾಲುಗಟ್ಟಿ ನಿಲ್ಲಬೇಕಾಗುತ್ತದೆ. ಶಕ್ತಿ ಯೋಜನೆಯಿಂದಾಗಿ ಮಹಿಳಾ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಒಂದೇ ಕುಟುಂಬದವರು ಒಟ್ಟಿಗೆ ಟಿಕೆಟ್ ಬುಕ್ಕಿಂಗ್‌ಗೆ ಬಂದರೂ ಪ್ರತ್ಯೇಕವಾಗಿ ಟಿಕೆಟ್ ಪ್ರಿಂಟ್ ಕೊಡಬೇಕಾಗುತ್ತದೆ. ಇದು ಸಮಯ ತೆಗೆದುಕೊಳ್ಳುತ್ತದೆ ಎನ್ನುತ್ತಾರೆ ಪ್ರಯಾಣಿಕರು.

ಇನ್ನೊಂದು ಕೊಠಡಿಯಲ್ಲಿ ವ್ಯವಸ್ಥೆಗೆ ಒತ್ತಾಯ

ಸುಬ್ರಹ್ಮಣ್ಯ ಬಸ್ ನಿಲ್ದಾಣದ ಟಿಕೆಟ್ ಬುಕ್ಕಿಂಗ್ ಕೌಂಟರ್ ಬಳಿ ಇನ್ನೊಂದು ಕೊಠಡಿ ಖಾಲಿ ಇದ್ದು, ಇಲ್ಲಿ ಹೆಚ್ಚುವರಿ ಟಿಕೆಟ್ ಬುಕ್ಕಿಂಗ್ ಕೇಂದ್ರ ಆರಂಭಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ. ಇದರಿಂದ ಪ್ರಯಾಣಿಕರಿಗೆ ಶೀಘ್ರ ಸೇವೆ ಒದಗಿಸಲು ಸಾಧ್ಯವಾಗಲಿದೆ. ಇಲ್ಲದಿದ್ದರೆ ಅಧಿಕ ಸಮಯ ಟಿಕೆಟ್‌ಗಾಗಿ ಸಾಲುಗಟ್ಟಿ ನಿಂತುಕೊಳ್ಳಬೇಕಾಗುತ್ತದೆ ಎಂಬ ಅಸಮಾಧಾನ ವ್ಯಕ್ತವಾಗಿದೆ.

ಸಿಬ್ಬಂದಿ ಕೊರತೆ?

ಕೆಎಸ್‌ಆರ್‌ಟಿಸಿ ಟಿಕೆಟ್ ಬುಕ್ಕಿಂಗ್ ಕೇಂದ್ರಕ್ಕೆ ಕೆಎಸ್‌ಆರ್‌ಟಿಸಿ ಸಂಚಾರ ನಿಯಂತ್ರಕರೇ ಟಿಕೆಟ್ ಬುಕ್ಕಿಂಗ್ ಮಾಡುತ್ತಾರೆ. ಇಲ್ಲಿ ಪ್ರತ್ಯೇಕ ಸಿಬ್ಬಂದಿ ಇಲ್ಲದ ಕಾರಣ ಸಂಚಾರ ನಿಯಂತ್ರಕರೇ ಪ್ರಯಾಣಿಕರ ಅನುಕೂಲತೆಗೆ ಸಂಚಾರ ನಿಯಂತ್ರಣ ಕರ್ತವ್ಯದೊಂದಿಗೆ ಟಿಕೆಟ್ ಬುಕ್ಕಿಂಗ್ ಕಾರ್ಯವನ್ನೂ ನಿರ್ವಹಿಸುತ್ತಿದ್ದಾರೆ. ಇರುವ ಟಿಕೆಟ್ ಬುಕ್ಕಿಂಗ್ ಕೌಂಟರ್‌ನಲ್ಲಿ ಕರ್ತವ್ಯಕ್ಕೆ ಸಿಬ್ಬಂದಿ ಕೊರತೆಯಿಂದ ಕೆಲವೊಮ್ಮೆ ಕೌಂಟರ್ ಕೂಡ ಮುಚ್ಚಿರುತ್ತದೆ ಎಂದು ಭಕ್ತರು ದೂರಿದ್ದಾರೆ. ಆದ್ದರಿಂದ ಇಲ್ಲಿಗೆ ಹೆಚ್ಚುವರಿ ಸಿಬ್ಬಂದಿ, ಹೆಚ್ಚುವರಿ ಕೌಂಟರ್ ತೆರೆಯಲು ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ಬಸ್ ನಿಲ್ದಾಣದಲ್ಲಿ ಟಿಕೆಟ್ ಬುಕ್ಕಿಂಗ್‌ಗೆ ಹೆಚ್ಚುವರಿ ಕೌಂಟರ್ ತೆರೆಯಬೇಕೆಂಬ ಬಗ್ಗೆ ಮನವಿ ಬಂದಲ್ಲಿ ಈ ಬಗ್ಗೆ ನಾವು ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿ, ಪೂರಕ ಕ್ರಮ ಕೈಗೊಳ್ಳುತ್ತೇವೆ. ಹರೀಶ್, ಸುಳ್ಯ ಕೆಎಸ್‌ಆರ್‌ಟಿಸಿ ಘಟಕದ ಸಂಚಾರ ನಿಯಂತ್ರಕ ಸುಬ್ರಹ್ಮಣ್ಯದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಟಿಕೆಟ್ ಬುಕ್ಕಿಂಗ್‌ಗಾಗಿ ಪ್ರಯಾಣಿಕರು ಸಾಲುಗಟ್ಟಿ ನಿಂತಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net