

ಪ್ರಾದೇಶಿಕ ಭಾಷೆಗಳ ಪೈಕಿ ತುಳುವಿನಲ್ಲಿ ಈಗ ಚಲನಚಿತ್ರಗಳ ಸುಗ್ಗಿ. ಒಂದರ ಹಿಂದೆ ಒಂದು ಹೊಸ ಚಿತ್ರ ಬಿಡುಗಡೆಗೊಳ್ಳುತ್ತಿವೆ. ವರ್ಷ ಪೂರ್ಣಗೊಳ್ಳಲು ನಾಲ್ಕು ತಿಂಗಳು ಇರುವ ಈ ಹೊತ್ತಿನಲ್ಲಿಯೇ ಒಂಬತ್ತು ಚಿತ್ರಗಳು ಬಿಡುಗಡೆ ಕಂಡಿವೆ. ಆರು ಚಿತ್ರಗಳ ಮುಹೂರ್ತಕ್ಕೆ ಸಿದ್ಧತೆ ನಡೆದಿದೆ.
ನವೀನ್ ಡಿ.ಪಡೀಲ್, ಅರವಿಂದ ಬೋಳಾರ್, ದೀಪಕ್ ರೈ ಪಾಣಾಜೆ ಮುಂತಾದ ಕಾಮಿಡಿ ದಿಗ್ಗಜರು ಇರುವ ‘ಅನರ್‌ಕಲಿ’ ಯಶಸ್ವೀ ಪ್ರದರ್ಶನ ಕಾಣುತ್ತಿವೆ. ಕಡಿಮೆ ಬಜೆಟ್‌ನ ‘ಧರ್ಮದೈವ’ ಚಿತ್ರ ಹಿಟ್ ಆಗಿದೆ. ‘ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್’ ಚಿತ್ರ ತಂಡದ ಬಹುಕೋಟಿ ರೂ.ವೆಚ್ಚದ ‘ಮಿಡ್ಲ್ ಕ್ಲಾಸ್ ಫ್ಯಾಮಿಲಿ’ ಬಿಡುಗಡೆಗೆ ಮೊದಲೇ ಒಳ್ಳೆಯ ಹವಾ ಸೃಷ್ಟಿಸಿದೆ. ತುಳು ಚಿತ್ರಗಳು ನಾಟಕ ರೀತಿಯಲ್ಲಿವೆ ಎನ್ನುವ ಆರೋಪಗಳು ಒಂದು ಕಾಲದಲ್ಲಿತ್ತು. ಆದರೆ ಇಂದು ಬಿಡುಗಡೆಯಾಗುತ್ತಿರುವ ಬಹುತೇಕ ಚಿತ್ರಗಳು ವೃತ್ತಿಪರತೆ ಕಾಯ್ದುಕೊಂಡಿವೆ. ಅನೇಕ ಚಿತ್ರಗಳು ತಾಂತ್ರಿಕವಾಗಿಯೂ ಶ್ರೀಮಂತವಾಗಿವೆ.
ತುಳು ಚಿತ್ರ ನಿರ್ಮಿಸಿ ಗೆದ್ದವರಿಗಿಂತ ಕಳೆದುಕೊಂಡವರೇ ಅಧಿಕ. ವ್ಯವಹಾರ ಜ್ಞಾನವಿಲ್ಲದಿರುವುದು, ಕುಟುಂಬ ಸದಸ್ಯರನ್ನು ಮಿಂಚಿಸಲು ಹೊರಡುವುದು, ನಿರ್ಮಾಪಕ ಎನ್ನುವ ಹೆಸರಿನಲ್ಲಿ ಖ್ಯಾತಿ ಪಡೆಯುವ ಹುಚ್ಚು, ವೃತ್ತಿಪರತೆಯ ಕೊರತೆ ಸಹಿತ ವಿವಿಧ ಕಾರಣಗಳಿಂದ ಚಿತ್ರ ನಿರ್ಮಾಣಕ್ಕೆ ಹೊರಟವರು ಸೋಲು ಕಂಡದ್ದೇ ಅಧಿಕ.
ತುಳು ಚಿತ್ರಗಳ ಮಾರುಕಟ್ಟೆಗೆ ಮಿತಿ ಇದೆ. ದುಬಾರಿ ವೆಚ್ಚದ ತುಳು ಚಿತ್ರಗಳನ್ನು ಗೆಲ್ಲಿಸುವುದು ಸುಲಭವಿಲ್ಲ. ಹಲವು ಉತ್ತಮ ಚಿತ್ರಗಳು ಸರಿಯಾದ ಪ್ರಚಾರ ಪಡೆಯದೆ ಸೋತಿವೆ. ಆದರೆ ಕೆಲವರು ದುಬಾರಿ ವೆಚ್ಚದಲ್ಲಿ ನಿರ್ಮಿಸಿಯೂ ಇಡೀ ಚಿತ್ರ ತಂಡ ಜತೆ ನಿಂತು ನಿರ್ಮಾಪಕರನ್ನು ಗೆಲ್ಲಿಸಿಕೊಟ್ಟ ನಿದರ್ಶನಗಳು ಇವೆ. ನಾಲ್ವರು ಅಥವಾ ಐವರು ತಲಾ 10 ಲಕ್ಷ ರೂ.ಹೂಡಿಕೆ ಮಾಡಿ ಒಟ್ಟು 40 ಅಥವಾ 50 ಲಕ್ಷ ರೂ.ವೆಚ್ಚದಲ್ಲಿ ಒಳ್ಳೆಯ ಚಿತ್ರ ನಿರ್ಮಿಸಬಹುದು. ಇಂತಹ ಸಂದರ್ಭದಲ್ಲಿ ನಷ್ಟದ ಸಾಧ್ಯತೆಗಳು ಕಡಿಮೆ ಎನ್ನುತ್ತಾರೆ ಚಿತ್ರ ನಿರ್ಮಾಪಕ ಕಿಶೋರ್ ಡಿ.ಶೆಟ್ಟಿ.
---- ----
ತುಳು ಚಿತ್ರಗಳ ಮೇಲೆ ಹೂಡಿಕೆಗೆ ಒಂದು ಮಿತಿ ಅಗತ್ಯ. ಹೆಚ್ಚು ಹೂಡಿಕೆ ಮಾಡಿಯೂ ಯಶಸ್ವಿಯಾದವರು ಇದ್ದಾರೆ. ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್‌ನಂತಹ ಚಿತ್ರ ತಂಡದವರು ನಿರ್ಮಾಣ ಬಳಿಕವೂ ನಿರ್ಮಾಪಕರ ಜತೆ ನಿಂತು ಚಿತ್ರ ಗೆಲ್ಲಿಸಲು ಪ್ರಯತ್ನಿಸುತ್ತಾರೆ. ಇದು ಒಳ್ಳೆಯ ಬೆಳವಣಿಗೆ. ತುಳು ಚಿತ್ರಗಳಲ್ಲಿ ಕಥೆಗೆ ಪ್ರಾಮುಖ್ಯ ನೀಡುವ ಚಿತ್ರಗಳು ಬರಬೇಕು. ಅಂತಹ ಸಂದರ್ಭಕ್ಕಾಗಿ ಕಾಯುತ್ತಿದ್ದೇನೆ.