ತುಳು ಸಂಸ್ಕೃತಿಗೆ ಪವಿತ್ರ ಸ್ಥಾನ ತುಳುವೆರೆ ಬಿಸು ಪರ್ಬ ಸಂಭ್ರಮದಲ್ಲಿ ಹರಿಕೃಷ್ಣ ಪುನರೂರು

mng--16 april Bisu parba
Published on

ಮಂಗಳೂರು: ತುಳು ಸಂಸ್ಕೃತಿ, ಆಚರಣೆಗಳಿಗೆ ಪವಿತ್ರವಾದ ಸ್ಥಾನ ಇದೆ. ತುಳು ಕೂಟ ಭಾಷೆ, ಸಂಸ್ಕೃತಿ ಉಳಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಕ.ಸಾ.ಪ. ದ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.


ಶ್ರೀ ಕ್ಷೇತ್ರ ಮಂಗಳಾದೇವಿಯಲ್ಲಿ ತುಳುಕೂಟ ಕುಡ್ಲ ಸಂಸ್ಥೆ ಭಾನುವಾರ ನಡೆಸಿದ ತುಳುವೆರೆ ಬಿಸು ಪರ್ಬ ಸಂಭ್ರಮ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು.


ತುಳು ಕೂಟದ ಅಧ್ಯಕ್ಷ ಮರೋಳಿ ಬಿ.ದಾಮೋದರ ನಿಸರ್ಗ ಅಧ್ಯಕ್ಷತೆ ವಹಿಸಿದ್ದರು. ಕೃಷಿ - ಸಂಸ್ಕೃತಿ ನಮ್ಮ ತುಳುವರ ಜೀವನ ಪದ್ಧತಿಯನ್ನು ವಿವರಿಸುತ್ತದೆ. ಇಂದು ಪ್ರಕೃತಿಯಿಂದ ನಾವು ಬೆಳೆದು ಸಂಗ್ರಹಿಸಿದ ಹೊಸ ಫಲ ವಸ್ತುಗಳನ್ನು ಮನೆಗೆ ಸಂಭ್ರಮದಿಂದ ತಂದು ಕಣಿ ಇಟ್ಟು ಬೆಳಿಗ್ಗೆ ಬೇಗ ಎದ್ದು ಕಣಿ ದರ್ಶಿಸಿ ಹೊಸ ವಸ್ತ್ರ ತೊಟ್ಟು ಸಂಭ್ರಮಿಸಿ ಸಿಹಿ ಹಂಚಿ ತಿನ್ನುವ ಕಾಲ ಎಂದರು.


ಸ್ಥಳೀಯ ವಾರ್ತಾವಾಚಕಿ ಡಾ.ಪ್ರಿಯಾ ಹರೀಶ್ ಬಿಸು ಪರ್ಬದ ಮಹತ್ವ ಹಾಗೂ ಆಚರಣೆ ವಿಷಯದಲ್ಲಿ ಮಾತನಾಡಿದರು. ಆಚರಣೆಗಳ ಮೂಲಕ ಮುಂದಿನ ಪೀಳಿಗೆಗೆ ತಲುಪಿಸಲು ಸಾಧ್ಯ ಎಂದರು.


ದೇವಳದ ಮೊಕ್ತೇಸರರಾದ ಹರೀಶ್ ಐತಾಳ್ ಉದ್ಘಾಟಿಸಿದರು. ಬೈಕಂಪಾಡಿಯ ರೋಟರಿ ಕ್ಲಬ್‌ನ ಅಧ್ಯಕ್ಷ ಸುಧಾಕರ ಕುಲಾಲ್, ಸಾಹಿತಿ ಡಾ.ವಸಂತ ಕುಮಾರ್ ಪೆರ್ಲ ಮುಖ್ಯ ಅತಿಥಿಗಳಾಗಿ ಶುಭಕೋರಿದರು.


ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಪ್ರಾಯೋಜಕತ್ವದ ರತ್ನವರ್ಮ ಹೆಗ್ಗಡೆ ಪ್ರಶಸ್ತಿ 24ನ್ನು ಉಪಾಧ್ಯಕ್ಷ ಪೆಲತ್ತಡಿ ಪದ್ಮನಾಭ ಕೋಟ್ಯಾನ್ ಪ್ರದಾನಗೈದರು. ವಕೀಲ ಶಶಿರಾಜ್ ರಾವ್ ಕಾವೂರು, ನವೀನ ಪಡ್ರೆ, ಆನಂದ ಕುಂದರ್ ಎಲ್ಲೂರು ಅವರಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಪ್ರಶಸ್ತಿ ನೀಡಲಾಯಿತು.


ಪ್ರಶಸ್ತಿ ವಿಜೇತರ ಪರಿಚಯವನ್ನು ಚಂದ್ರಶೇಖರ ಸುವರ್ಣ, ಭಾಸ್ಕರ ಕುಲಾಲ್ ಬರ್ಕೆ ಹಾಗೂ ಹೇಮಾ ಡಿ. ನಿಸರ್ಗ ವಾಚಿಸಿದರು. ರಮೇಶ್ ಕುಲಾಲ್ ಬಾಯಾರು, ವಿಶ್ವನಾಥ ಪೂಜಾರಿ ಸೋಣಳಿಕೆ , ಪಿ.ಎ. ಪೂಜಾರಿ ಮತ್ತು ಸದಸ್ಯರು ಉಪಸ್ಥಿತರಿದ್ದರು.

ಪ್ರ.ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಜೆ.ವಿ.ಶೆಟ್ಟಿ. ಸ್ವಾಗತಿಸಿದರು. ನಾರಾಯಣ ಬಿ.ಡಿ. ವಂದಿಸಿದರು. ಪ್ರಶಸ್ತಿ ಪ್ರದಾನದ ಬಳಿಕ ವಿದ್ವಾನ್ ಸುರೇಶ್ ಅತ್ತಾವರ್ ಚಕ್ರಪಾಣಿ ನೃತ್ಯತಂಡದವರಿಂದ ಬಿಸು ನೃತ್ಯ ವೈಭವೊ ಎಂಬ ತುಳು ಸಂಸ್ಕೃತಿಯನ್ನು ಸಾರುವ ನೃತ್ಯವೈಭವ ನಡೆಯಿತು. ಕಲಾವಿದ ತೋನ್ಸೆ ಪುಷ್ಕಳ ಕುಮಾರ್ ಕಲಾವಿದರನ್ನು ಪರಿಚಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net