More

    ಕಮಲ್​ಹಾಸನ್​ ಅಭಿನಯದ ‘ಇಂಡಿಯನ್​-2’ ಸಿನಿಮಾ ಚಿತ್ರೀಕರಣದ ವೇಳೆ ದುರಂತ; ಕ್ರೇನ್​ ಬಿದ್ದು ಮೂರು ಮಂದಿ ಸ್ಥಳದಲ್ಲೇ ಸಾವು

    ಚೆನ್ನೈ: ಇಲ್ಲಿನ ಇವಿಪಿ ಫಿಲ್ಮ್​ ಸಿಟಿಯಲ್ಲಿ ಇಂಡಿಯನ್​-2 ಚಲನಚಿತ್ರ ಚಿತ್ರೀಕರಣದ ವೇಳೆ ಕ್ರೇನ್​ ಬಿದ್ದು ಮೂರು ಮಂದಿ ಮೃತಪಟ್ಟಿದ್ದು, 9 ಜನರು ಗಾಯಗೊಂಡಿದ್ದಾರೆ.

    ಇಂಡಿಯನ್​-2 ಚಿತ್ರವನ್ನು ಶಂಕರ್​ ನಿರ್ದೇಶನ ಮಾಡುತ್ತಿದ್ದಾರೆ. ಇದರಲ್ಲಿ ಕಮಲ್​ ಹಾಸನ್​ ಹಾಗೂ ಕಾಜಲ್​ ಅಗರ್​ವಾಲ್​ ಅಭಿನಯಿಸುತ್ತಿದ್ದಾರೆ.

    ಇವಿಪಿ ಫಿಲ್ಮ್​ ಸಿಟಿಯಲ್ಲಿ ಚಿತ್ರೀಕರಣಕ್ಕಾಗಿ ಸಿದ್ಧತೆ ನಡೆಸಲಾಗುತ್ತಿತ್ತು. ಸೆಟ್​ಗಳನ್ನು ಹಾಕಲಾಗುತ್ತಿತ್ತು. ಈ ವೇಳೆ ಕ್ರೇನ್​ ಕೆಲಸ ಮಾಡುತ್ತಿದ್ದವರ ಮೇಲೆಯೇ ಬಿದ್ದಿದೆ. ಮೂರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ 9 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಮಲ್​ ಹಾಸನ್​ ಕೂಡ ಸ್ಥಳದಲ್ಲೇ ಇದ್ದರು. ಅದೃಷ್ಟವಶಾತ್​ ಅವರು ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

    ನಿರ್ದೇಶಕ ಶಂಕರ್​ ಅವರೂ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹಲವು ಸಾಮಾಜಿಕ ಜಾಲತಾಣಗಳಲ್ಲಿ ಹೇಳಲಾಗಿತ್ತು. ಆದರೆ ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ದೃಢಪಟ್ಟಿದೆ.

    ನಟ ಕಮಲ್​ಹಾಸನ್​ ಅವರು ಸಂತಾಪ ವ್ಯಕ್ತಪಡಿಸಿ ಟ್ವೀಟ್​ ಮಾಡಿದ್ದಾರೆ. ನನ್ನ ಸಿನಿಮಾ ವೃತ್ತಿ ಜೀವನದಲ್ಲಿಯೇ ನೋಡಿದ ಅತ್ಯಂತ ಭಯಾನಕ ದುರ್ಘಟನೆ ಇದು. ನಾನು ನನ್ನ ಮೂವರು ಸಹೋದ್ಯೋಗಿಗಳನ್ನು ಕಳೆದುಕೊಂಡಿದ್ದೇನೆ. ಇವರೆಲ್ಲರ ಪ್ರೀತಿಪಾತ್ರರಿಗೆ ಉಂಟಾಗಿರುವ ದುಃಖದ ಎದುರು ನನ್ನ ನೋವು ಏನೂ ಅಲ್ಲ. ಅವರೆಲ್ಲರಿಗೂ ನೋವು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದಿದ್ದಾರೆ.

    ಆಹಾರ ಸರಬರಾಜು ಮಾಡುತ್ತಿದ್ದ ಮಧು, ಚಂದ್ರನ್​ ಮತ್ತು ಅಸಿಸ್ಟಂಟ್​ ಡೈರೆಕ್ಟರ್​ ಕೃಷ್ಣಾ ಮೃತರಾಗಿದ್ದಾರೆ. ಶೂಟಿಂಗ್​ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು, ಅವಶೇಷಗಳನ್ನೆಲ್ಲ ತೆರವುಗೊಳಿಸುತ್ತಿದ್ದಾರೆ.
    ಪೊಲೀಸ್​ ಹಿರಿಯ ಅಧಿಕಾರಿಗಳೂ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    1996ರಲ್ಲಿ ತೆರೆಕಂಡಿದ್ದ ಶಂಕರ್​ ನಿರ್ದೇಶನದ ತಮಿಳು ಸಿನಿಮಾ ‘ಇಂಡಿಯನ್​’ ಹಿಟ್​ ಆಗಿತ್ತು. ಈಗ ಅದರ ಎರಡನೇ ಭಾಗವನ್ನು ಮಾಡಲು ಶಂಕರ್ ಮುಂದಾಗಿದ್ದರು. ಕಳೆದ ವರ್ಷವೇ ಅಧಿಕೃತವಾಗಿ ಶುರುವಾಗಿದ್ದ ಸಿನಿಮಾ ಶೂಟಿಂಗ್​ ಬರುಬರುತ್ತ ನಿಧಾನವಾಯಿತು. ತುಂಬ ಕಾಲದ ವಿಳಂಬದ ನಂತರ ಮತ್ತೆ ಫೆಬ್ರವರಿಯಿಂದ ಚಿತ್ರೀಕರಣ ಪ್ರಾರಂಭಿಸಲಾಗಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts