

ಗದಗ: ಗುಡುಗು-ಸಿಡಿಲು ಬರುವಾಗ ಮರದ ಕೆಳಗೆ ನಿಲ್ಲಬೇಡಿ ಎಂದು ಹಿರಿಯರು ಆಗಾಗ ಎಚ್ಚರಿಸುವುದು ಹೊಸದೇನಲ್ಲ. ಆದರೆ ಅದನ್ನು ಮರೆತೋ ಅಥವಾ ಗೊತ್ತಿಲ್ಲದೆಯೋ ಮರದ ಕೆಳಗೆ ನಿಂತಿದ್ದ ಮೂವರು ಸಿಡಿಲು ಬಡಿದು ಮರಣಕ್ಕೀಡಾಗಿದ್ದಾರೆ. ಈ ಮೂವರು ಮರಣ ಹೊಂದಿರುವುದಲ್ಲದೆ ಇನ್ನಿಬ್ಬರಿಗೆ ಗಾಯಗಳಾಗಿವೆ.
ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಹೊರವಲಯದಲ್ಲಿ ಈ ದುರಂತ ನಡೆದಿದೆ. ಕುಮಾರ್ ಮಾದರ (24), ಶರಣಪ್ಪ ಅಡವಿ (35) ಮತ್ತು ಮಾರುತಿ (48) ಎಂಬವರು ಮೃತಪಟ್ಟಿದ್ದಾರೆ.
ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವಂತೆ ರಾಜ್ಯದ ಹಲವೆಡೆ ಗುಡುಗು-ಸಿಡಿಲಿನೊಂದಿಗೆ ಧಾರಾಕಾರ ಮಳೆಯಾಗುತ್ತಿದ್ದು, ಗದಗದಲ್ಲೂ ಭಾರಿ ಮಳೆಯಾಗುತ್ತಿದೆ. ಈ ಸಂದರ್ಭದಲ್ಲಿ ಮಳೆಯಿಂದ ತಪ್ಪಿಸಿಕೊಳ್ಳಲು ಇವರು ಮರದ ಕೆಳಗೆ ಹೋಗಿ ಆಶ್ರಯ ಪಡೆದಿದ್ದರು. ಆದರೆ ಅದೇ ವೇಳೆಗೆ ಬಂದಪ್ಪಳಿಸಿದ ಸಿಡಿಲಿಗೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಿರಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.