

ವಿಜಯಪುರ: ನಗರದ ಕೇಂದ್ರ ಬಸ್ಸ್ಟ್ಯಾಂಡ್ನಲ್ಲಿ ನಿಂತಿದ್ದ ಯುವತಿಯೊಬ್ಬಳನ್ನು ಅತ್ಯಾಚಾರ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಜನವರಿ 17ರಂದು ಈ ಘಟನೆ ನಡೆದಿದೆ. ಈ ಬಗ್ಗೆ ವಿಜಯಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಯುತ್ತಿದೆ.
ಜನವರಿ 17 ರಂದು ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಿಂತಿದ್ದ ಯುವತಿಯನ್ನು, ಪುಸಲಾಯಿಸಿದ ಮೂವರು ಯುವಕರು ಅಲ್ಲಿಂದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆಕೆಯನ್ನು ಹೆದರಿಸಿ ಓರ್ವ ಯುವಕ ಅತ್ಯಾಚಾರ ಮಾಡಿದ್ದಾನೆ. ಬಳಿಕ ಯುವತಿಯನ್ನು ಅಲ್ಲೇ ಬಿಟ್ಟು ಸ್ಥಳದಿಂದ ಕಾಮುಕರು ಪರಾರಿಯಾಗಿದ್ದಾರೆ.
ಜನವರಿ 18ರಂದು ಬೆಳಗ್ಗೆ ಸ್ಥಳೀಯರು ನಿರ್ಜನ ಪ್ರದೇಶದಲ್ಲಿ ಯುವತಿ ನರಳಾಡುತ್ತಿರುವುದನ್ನು ಕಂಡಿದ್ದಾರೆ. ಕೂಡಲೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ವಿಜಯಪುರ ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿಗಳು ಬಂದು ವಿಚಾರಿಸಿದ್ದಾರೆ. ನಂತರ ಸಂತ್ರಸ್ತೆಗೆ ಚಿಕಿತ್ಸೆ ಕೊಡಿಸಿ, ಸರ್ಕಾರಿ ಸ್ವಾಮ್ಯದ ಸ್ವಾಧಾರ ಕೇಂದ್ರದಲ್ಲಿ ರಕ್ಷಣೆ ನೀಡಿದ್ದಾರೆ.
ಸಂತ್ರಸ್ತ ಯುವತಿ ಪೊಲೀಸರಲ್ಲಿ ತನ್ನ ಮೇಲೆ ಅತ್ಯಚಾರ ನಡೆದಿರುವ ಬಗ್ಗೆ ಹೇಳಿಕೊಂಡಿದ್ದಾಳೆ. ತನ್ನನ್ನು ಪುಸಲಾಯಿಸಿ ಓರ್ವ ಅತ್ಯಾಚಾರ ಮಾಡಿದ್ದು, ಇನ್ನಿಬ್ಬರು ಆತನಿಗೆ ಸಹಾಯ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾಳೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂರು ಜನ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಈ ಘಟನೆ ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಂತ್ರಸ್ತ ಯುವತಿ ಮಾನಸಿಕ ಅಸ್ವಸ್ಥಳಂತೆ ಕಂಡು ಬಂದಿದೆ ಎಂದು ವರದಿಯಾಗಿದೆ.