ಪ್ರತಿಭೆಗೆ ಹೊಳಪು ನೀಡಲು ಮನೆಯಿಂದ ಹೊರಬನ್ನಿ

Thrivarna Lead
Published on

ಮಕ್ಕಳಿಗೆ ಪ್ರಾಂಶುಪಾಲ ಗಣೇಶ ಶೆಟ್ಟಿ ಕಿವಿಮಾತು

ಮಣಿಪಾಲದಲ್ಲಿ ನಮ್ಮೂರು ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ

ವಿಜಯವಾಣಿ ಸುದ್ದಿಜಾಲ ಉಡುಪಿ

Thrivarna 2
ಇಂದಿನ ಬಹುತೇಕ ಎಲ್ಲ ಮಕ್ಕಳೂ ಸಹ ಮೊಬೈಲ್​ನೊಂದಿಗೆ ಮನೆಯಲ್ಲಿಯೇ ಕಾಲ ಕಳೆಯುತ್ತಾರೆ. ಮನೆಯಿಂದ ಹೊರ ಬರುತ್ತಿಲ್ಲ. ತಮ್ಮೊಳಗಿರುವ ಪ್ರತಿಭೆಗೆ ಹೊಳಪು ನೀಡುತ್ತಿಲ್ಲ. ಮೊಬೈಲ್​ನಿಂದ, ಮನೆಯಿಂದ ಹೊರ ಬಂದು ಜಗತ್ತನ್ನು ನೋಡಿ. ಹೆತ್ತವರಿಗೆ, ಕಲಿಸಿದ ಗುರುಗಳಿಗೆ ಗೌರವ-ಪ್ರೀತಿ ತೋರಿ. ಸಣ್ಣಪುಟ್ಟ ಕಷ್ಟ ಬಂದರೆ ಸಹಿಸಿಕೊಳ್ಳುವ ಗುಣ ಬೆಳೆಸಿಕೊಂಡು ನಕಾರಾತ್ಮಕ ಮನೋಭಾವವನ್ನು ತ್ಯಜಿಸಬೇಕು ಎಂದು ಮಕ್ಕಳಿಗೆ ಮಣಿಪಾಲ ಜ್ಞಾನಸುಧಾ ಪಿಯು ಕಾಲೇಜಿನ ಪ್ರಾಂಶುಪಾಲ ಗಣೇಶ ಶೆಟ್ಟಿ ಕಿವಿಮಾತು ಹೇಳಿದರು.

ಉಡುಪಿಯ ಮಣಿಪಾಲದಲ್ಲಿರುವ ತ್ರಿವರ್ಣ ಆರ್ಟ್​ ಗ್ಯಾಲರಿಯಲ್ಲಿ ತ್ರಿವರ್ಣ ಆರ್ಟ್​ ಕ್ಲಾಸ್​ನ 7ರಿಂದ 18 ವರ್ಷದೊಳಗಿನ 32 ವಿದ್ಯಾರ್ಥಿಗಳು ಚಿತ್ರಿಸಿರುವ ನಮ್ಮೂರು ಮೂರು ದಿನದ ಚಿತ್ರಕಲಾ ಪ್ರದರ್ಶನಕ್ಕೆ ಸೆಪ್ಟೆಂಬರ್​ 5ರಂದು ಬೆಳಗ್ಗೆ ಚಾಲನೆ ನೀಡಿ ಮಾತನಾಡಿದರು.

ದೇಶಾಭಿಮಾನ ಅಗತ್ಯ

ಮಣಿಪಾಲದ ರೋಟರಿ ಕ್ಲಬ್​ ಅಧ್ಯಕ್ಷೆ ಶಶಿಕಲಾ ರಾಜವರ್ಮ ಮಾತನಾಡಿ ನಮ್ಮ ಊರು, ರಾಜ್ಯ, ದೇಶದ ಕುರಿತು ಅಭಿಮಾನ ಇರಬೇಕು. ಇಂದಿನ ಮಕ್ಕಳಲ್ಲಿ ಅಭಿವ್ಯಕ್ತಿ ಜ್ಞಾನದ ಕೊರತೆಯಿದೆ. ಹೀಗಾಗಿ ಭಾವನೆಗಳನ್ನು ಬಿತ್ತರಿಸಲು ಚಿತ್ರಕಲೆ ಅತ್ಯಂತ ಸೂಕ್ತ ಕ್ಷೇತ್ರವಾಗಿದೆ. ಪರಿಸರ, ಪಾಲಕರು ಹಾಗೂ ಗುರು- ಹಿರಿಯರನ್ನು ಗೌರವಿಸುವ, ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು.

ಕಲೆಯಿಂದ ವ್ಯಕ್ತಿತ್ವ

Thrivarna 3
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಕಿರಣ ಮಂಜನಬೈಲು ಅವರು ಆನ್​ಲೈನ್​ ಕಲಾವಿದ್ಯಾರ್ಥಿಗಳನ್ನು ಗೌರವಿಸಿ ಮಾತನಾಡಿ, ಕಲೆ, ಸಂಸ್ಕೃತಿ, ಸಾಹಿತ್ಯದ ಕುರಿತು ಮಕ್ಕಳಿಗೆ ಅಭಿರುಚಿ ಇರಬೇಕು. ಕಲೆಯಿಂದ ವ್ಯಕ್ತಿತ್ವ ಪ್ರಜ್ವಲಿಸುತ್ತದೆ. ಕಲೆಗೆ ಸಾರ್ವತ್ರಿಕ ದಾಖಲೆಯಾಗಿ ನಿಲ್ಲುವ ಶಕ್ತಿಯೂ ಇದೆ. ತಾವು ರಚಿಸುವ ಚಿತ್ರಗಳು ಸಮಾಜದ ಸ್ವಾಸ್ಥ್ಯ ಹದಗೆಡಿಸುವಂತೆ ಇರಬಾರದು. ಸಮಸ್ತ ಸಮಾಜವೇ ಪ್ರೀತಿಸುವಂತೆ ಚಿತ್ರ ರಚಿಸಬೇಕು ಎಂದು ಸಲಹೆ ನೀಡಿದರು.

ಕಲಾ ವಿದ್ಯಾರ್ಥಿನಿಯರಾದ ದೇವಾಂಗನಾ, ಹರ್ಷಿಣಿ, ಸುದೀಕ್ಷಾ ಪ್ರಾರ್ಥಿಸಿದರು. ಕಲಾ ವಿದ್ಯಾರ್ಥಿನಿ ಗ್ರೀಷ್ಮಾ ಸ್ವಾಗತಿಸಿದರು. ಕಲಾವಿದ್ಯಾರ್ಥಿನಿ ಸಂಜನಾ ಕಾಮತ ವಂದಿಸಿದರು. ಸೌಮ್ಯಾ ಎಂ. ನಾಯಕ ಕಾರ್ಯಕ್ರಮ ನಿರೂಪಿಸಿದರು.

ಭಾನುವಾರದವರೆಗೆ ವೀಕ್ಷಣೆಗೆ ಅವಕಾಶ

Harish Saaga 2
Thrivarna 4
ತ್ರಿವರ್ಣ ಕಲಾಕೇಂದ್ರದ ಮಾರ್ಗದರ್ಶಕ ಹರೀಶ ಸಾಗಾ ಮಾತನಾಡಿ, ಕಲಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು ಹಾಗೂ ಸಮಾಜ ಅವರನ್ನು ಗುರುತಿಸುವಂತಾಗಲು ಕಲಾ ಪ್ರದರ್ಶನ ಆಯೋಜಿಸಿದ್ದೇವೆ. ಮಕ್ಕಳಿಗೆ ತಮ್ಮ ಊರಿನ ವಿಶೇಷ, ಆಚರಣೆ, ಸಂಸ್ಕೃತಿಯ ಅರಿವು ಮೂಡಿಸಲು ನಮ್ಮೂರು ಎಂಬ ಥೀಮ್​ ನೀಡಲಾಗಿದೆ. 32 ಕಲಿಕಾ ವಿದ್ಯಾರ್ಥಿಗಳು ರಚಿಸಿರುವ ಚಿತ್ರಗಳಿದ್ದು, ಭಾನುವಾರದವರೆಗೆ (ಸೆ.7) ಬೆಳಗ್ಗೆ 10ರಿಂದ ಸಂಜೆ 7:30ರ ವರಗೆ ಪ್ರದರ್ಶನ ವೀಕ್ಷಣೆಗೆ ಮುಕ್ತ ಅವಕಾಶವಿದೆ ಎಂದರು.

ತಮ್ಮಲ್ಲಿರುವ ಪ್ರತಿಭೆಯನ್ನು ವರ್ಣಗಳಲ್ಲಿ ಪ್ರದರ್ಶಿಸಿದ ಮಕ್ಕಳಿಗೆ, ಪ್ರಭಾವಿಸಿದ ಕಲಾ ಗುರು ಹರೀಶ ಸಾಗಾ ಅವರ ಶ್ರಮಕ್ಕೆ ಶರಣು. ಕಲೆಯ ಮೂಲಕ ನಮ್ಮೂರಿನ ಕುರಿತು ಅಭಿಮಾನ ಬೆಳೆಸಿಕೊಂಡ ಮಕ್ಕಳಿಗೂ ಕೃತಜ್ಞತೆ. ನಮ್ಮೂರಷ್ಟೇ ಅಲ್ಲ, ಇಡೀ ವಿಶ್ವವೇ ನಮ್ಮೂರು ಎಂಬ ಭಾವನೆ ಬೆಳೆಸಿಕೊಳ್ಳಬೇಕು. | ವಿದುಷಿ ಪಾವನಾ ಆಚಾರ್ಯ. ನಿರ್ದೇಶಕಿ, ಕಲಾ ಸ್ಪಂದನ, ಮಣಿಪಾಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net