

ಕಾರ್ಕಳ: ಮೊಬೈಲಿಗೆ ಎಸ್‌ಎಂಎಸ್ ಮೂಲಕ ಒಟಿಪಿ ಕಳುಹಿಸಿ ಖಾತೆಯಿಂದ ಸಾವಿರಾರು ರೂ. ಎಗರಿಸಿ ವಂಚನೆಗೈದಿರುವ ಘಟನೆ ಕಾರ್ಕಳ ತಾಲೂಕಿನ ದುರ್ಗ ಗ್ರಾಮದಲ್ಲಿ ವರದಿಯಾಗಿದೆ. ತೆಳ್ಳಾರು ನಿವಾಸಿ ಸುರಕ್ಷಾ ಹಣ ಕಳೆದುಕೊಂಡ ಮಹಿಳೆ. ಸುರಕ್ಷಾ ಅವರ ಮೊಬೈಲ್‌ಗೆ ಡಿ.29ರಂದು ಒಟಿಪಿ ಬಂದಿದ್ದು, ನಂತರ ಅಪರಿಚಿತ ನಂಬರ್‌ನಿಂದ ಕರೆಯೂ ಬಂದಿತ್ತು. ಸುರಕ್ಷಾ ಕರೆ ಸ್ವೀಕರಿಸಿದಾಗ ಅತ್ತ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಅವರು ಕರೆ ಕಟ್ ಮಾಡಿದ್ದರು. ಸ್ವಲ್ಪ ಸಮಯದ ಬಳಿಕ ಅವರ ಮೊಬೈಲ್‌ಗೆ ಅವರ ಕೆನರಾ ಬ್ಯಾಂಕ್ ತೆಳ್ಳಾರು ಬ್ರಾಂಚ್‌ನಲ್ಲಿ ಹೊಂದಿರುವ ಬ್ಯಾಂಕ್ ಖಾತೆಯಿಂದ 67,000 ರೂ. ಕಡಿತಗೊಂಡ ಬಗ್ಗೆ ಸಂದೇಶ ಬಂದಿದ್ದು, ಬಳಿಕ ಮಧ್ಯಾಹ್ನ ಮತ್ತೆ ಖಾತೆಯಿಂದ 500ರೂ. ಕಡಿತಗೊಂಡ ಬಗ್ಗೆ ಸಂದೇಶ ಬಂದಿದ್ದು ಸೈಬರ್ ವಂಚಕರು ಒಟ್ಟು 67,500 ರೂ. ವರ್ಗಾಯಿಸಿಕೊಂಡಿದ್ದಾರೆ ಎಂದು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.