

ಬೆಳಗಾವಿ: ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಖಂಡಿಸಿ ಕರ್ನಾಟಕ ವಾಣಿಜ್ಯೋದ್ಯಮಿಗಳ ಒಕ್ಕೂಟ ನೀಡಿರುವ ಬಂದ್ಗೆ ಬೆಳಗಾವಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೈಗಾರಿಕೆಗಳನ್ನು ಬಂದ್ ಮಾಡಿ ಸಾವಿರಾರು ಕೈಗಾರಿಕೋದ್ಯಮಿಗಳು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಬೆಳಗ್ಗೆ ಇಲ್ಲಿನ ಧರ್ಮವೀರ ಸಂಭಾಜಿ ವೃತ್ತದಿಂದ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಕೈಗಾರಿಕೋದ್ಯಮಿಗಳು ಬೃಹತ್ ಪ್ರತಿಭಟನಾ ರ್ಯಾಲಿ ಆರಂಭಿಸಿದರು. ಲಿಂಗರಾಜ ರಸ್ತೆ, ಚನ್ನಮ್ಮ ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೂ ರ್ಯಾಲಿ ನಡೆಯಿತು. ಇದೇ ವೇಳೆ ಎಲೆಕ್ಟ್ರಿಕಲ್ ಬೈಕ್ ನ್ನು ಹೆಗಲ ಮೇಲೆ ಹೊತ್ತುಕೊಂಡ ಪ್ರತಿಭಟನಾಕಾರರು ವಿದ್ಯುತ್ ದರ ಏರಿಸಿದ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು. ವಿದ್ಯುತ್ ದರ ಇಳಿಸುವಂತೆ ಆಗ್ರಹಿಸಿ ಬಾಯಿ ಬಾಯಿ ಬಡಿದುಕೊಂಡು ಆಗ್ರಹಿಸಿದರು. ಕೆಲ ಕಾಲ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ಕರ್ನಾಟಕ ಸರ್ಕಾರದ ದೆಹಲಿಯ ಮಾಜಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ ಮಾತನಾಡಿ, ರಾಜ್ಯ ಸರ್ಕಾರ ರಾಜ್ಯದ ಜನರು ಮತ್ತು ಕೈಗಾರಿಕೋದ್ಯಮಿಗಳಿಗೆ ಶಾಕ್ ಕೊಟ್ಟಿದ್ದಾರೆ. ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಮೊಂಡುತನದ ಹೇಳಿಕೆ ಕೊಡುವುದನ್ನು ಬಿಡಬೇಕು.
ತಕ್ಷಣವೇ ವಿದ್ಯುತ್ ದರ ಇಳಿಸಬೇಕೆಂದು ಆಗ್ರಹಿಸಿದರು.
ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಹೇಮೇಂದ್ರ ಪೋರವಾಲ್ ಮಾತನಾಡಿ, ದೊಡ್ಡ ಮಟ್ಟದಲ್ಲಿ ವಿದ್ಯುತ್ ದರ ಏರಿಸುವುದರಿಂದ ಕೈಗಾರಿಕೆಗಳನ್ನು ನಡೆಸಲು ಸಾಧ್ಯವೇ ಇಲ್ಲ. ಮೊನ್ನೆ ಹೆಸ್ಕಾಂ ಎಂಡಿ ಅವರ ಜತೆಗಿನ ಸಭೆಯಲ್ಲೂ ನಮ್ಮ ಸಮಸ್ಯೆ ಹೇಳಿಕೊಂಡಿದ್ದೇವೆ. 27 ಚೇಂಬರ್ ಆಫ್ ಕಾಮರ್ಸ್ ಗಳು ಬರುವ ಮೂರು ದಿನದಲ್ಲಿ ಸಭೆ ಮಾಡಿ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸುತ್ತೇವೆ ಎಂದರು.
ಪ್ರತಿಭಟನೆಯಲ್ಲಿ ಉದ್ಯಮಿಗಳಾದ ಮಹಾದೇವ ಚೌಗುಲೆ, ಆನಂದ ದೇಸಾಯಿ, ಪ್ರಭಾಕರ ನಾಗರಮುನ್ನೋಳಿ, ಸಂದೀಪ ಬಾಗೇವಾಡಿ, ಸ್ವಪ್ನೀಲ್ ಶಹಾ, ಸಚಿನ ಸಬ್ನೀಸ್, ರಾಮ ಭಂಡಾರಿ, ಶರದ ಪಾಟೀಲ ಇತರರಿದ್ದರು