ಮಹಿಳೆಯರೇ, ಗಮನಿಸಿ! ಬೆನ್ನು ಬಲಗೊಳಿಸುತ್ತದೆ, ಬೊಜ್ಜು ಕರಗಿಸುತ್ತದೆ, ಈ ಯೋಗಾಸನ

1149588
Published on

ಬಲಹೀನ ಬೆನ್ನು ಬಲಿಷ್ಠವಾಗಲು ಉತ್ತಮ ಆಸನವೆಂದರೆ 'ಪರಿಪೂರ್ಣ ನವಾಸನ'. ದೋಣಿಯ ಆಕಾರವನ್ನು ಹೋಲುವ ಭಂಗಿಯಾದ ಕಾರಣಕ್ಕೆ ಇದನ್ನು ನೌಕಾಸನ ಎಂದೂ ಕರೆಯಲಾಗುತ್ತದೆ. ಇದು ಹೊಟ್ಟೆಯ ಭಾಗದ ಬೊಜ್ಜು ಕರಗಿಸಲೂ ಉತ್ತಮ ಆಸನವಾಗಿದೆ.

ಪ್ರಯೋಜನ : ಬೆನ್ನಿಗೆ ಶಕ್ತಿ ಬರುತ್ತದೆ. ಹೊಟ್ಟೆ ಮತ್ತು ಸೊಂಟದ ಭಾಗ ಬಲಗೊಳ್ಳುತ್ತದೆ. ಜೀರ್ಣಾಂಗ ವ್ಯವಸ್ಥೆ ಉತ್ತಮಗೊಳ್ಳುತ್ತದೆ. ಹೊಟ್ಟೆ ಮತ್ತು ಸೊಂಟದ ಬೊಜ್ಜು ಕರಗುತ್ತದೆ.

ಅಭ್ಯಾಸ ಕ್ರಮ : ಮ್ಯಾಟಿನ ಮೇಲೆ ಕಾಲು ಚಾಚಿಕೊಂಡು ದಂಡಾಸನದಲ್ಲಿ ಕುಳಿತುಕೊಳ್ಳಬೇಕು. ಎರಡೂ ಕೈಗಳ ಸಹಾಯ ತೆಗೆದುಕೊಳ್ಳುತ್ತಾ, ಉಸಿರಿನ ಗತಿಯೊಂದಿಗೆ ಶಿಸ್ತುಬದ್ಧವಾಗಿ ಕಾಲುಗಳನ್ನು ಮೇಲಕ್ಕೆ ಏರಿಸಿ ನೇರವಾಗಿಸಬೇಕು. ಕಾಲುಗಳು ತಲೆಯ ಮಟ್ಟಕ್ಕಿಂತ ಮೇಲಿರಬೇಕು. ಕೈಗಳನ್ನು ಮುಂದಕ್ಕೆ ಚಾಚಿ, ಇಡೀ ದೇಹವನ್ನು ಪೃಷ್ಠದ ಮೇಲೆ ಸಮತೋಲನವಾಗಿರಿಸಿ, ಸ್ವಲ್ಪ ಹೊತ್ತು ಸಹಜ ಉಸಿರಾಟ ನಡೆಸಬೇಕು. ನಂತರ ಉಸಿರನ್ನು ಬಿಡುತ್ತಾ ವಿಶ್ರಮಿಸಬೇಕು.

ಉಬ್ಬಸ, ಅತಿಸಾರ ಅಥವಾ ಹೃದಯ ಸಮಸ್ಯೆ ಇರುವವರು ಈ ಆಸನವನ್ನು ಮಾಡಬಾರದು. ಹೊಟ್ಟೆಗೆ ಇತ್ತೀಚೆಗೆ ಶಸ್ತ್ರಚಿಕಿತ್ಸೆಯಾಗಿರುವವರು ಮಾಡಬಾರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net