ಭಾರತ ಟೆಸ್ಟ್​ ತಂಡಕ್ಕೆ ವಾಷಿಂಗ್ಟನ್​ ಸುಂದರ್​ ದಿಢೀರ್​ ಸೇರ್ಪಡೆಯ ಹಿಂದಿದೆ ಈ ವಿಶೇಷ ಕಾರಣ...!

web wash
Published on

ಪುಣೆ: ಆರ್​. ಅಶ್ವಿನ್​, ರವೀಂದ್ರ ಜಡೇಜಾ, ಕುಲದೀಪ್​ ಯಾದವ್​ ಜತೆಗೆ ಅಕ್ಷರ್​ ಪಟೇಲ್​ ಮತ್ತೋರ್ವ ಸ್ಪಿನ್ನರ್​ ಆಗಿ ಭಾರತ ತಂಡದಲ್ಲಿದ್ದರೂ, ಕೊನೇ 2 ಟೆಸ್ಟ್​ಗಳಿಗೆ 16ನೇ ಆಟಗಾರನಾಗಿ ಸ್ಪಿನ್​ ಬೌಲಿಂಗ್​ ಆಲ್ರೌಂಡರ್​ ವಾಷಿಂಗ್ಟನ್​ ಸುಂದರ್​ ಸೇರ್ಪಡೆ ಕುತೂಹಲ ಕೆರಳಿಸಿದೆ.

ಬೆಂಗಳೂರಿನಲ್ಲಿ ಕಿವೀಸ್​ ಎಡಗೈ ಬ್ಯಾಟರ್​ಗಳಾದ ಡೆವೊನ್​ ಕಾನ್​ವೇ ಮತ್ತು ರಚಿನ್​ ರವೀಂದ್ರ ಅವರೇ ಭಾರತವನ್ನು ಹೆಚ್ಚಾಗಿ ಕಾಡಿದ್ದರು. ಹೀಗಾಗಿ ಅವರಿಗೆ ನಿಯಂತ್ರಣ ಹೇರಲು ಅಶ್ವಿನ್​ ಜತೆಗೆ 2ನೇ ಆಫ್​​ ಸ್ಪಿನ್ನರ್​ ಆಗಿ ವಾಷಿಂಗ್ಟನ್​ ಸುಂದರ್​ಗೆ ಬುಲಾವ್​ ನೀಡಲಾಗಿದೆ ಎನ್ನಲಾಗುತ್ತಿದೆ. ತಂಡದಲ್ಲಿರುವ ಇತರ ಮೂವರು (ಜಡೇಜಾ, ಅಕ್ಷರ್​, ಕುಲದೀಪ್​) ಎಡಗೈ ಸ್ಪಿನ್ನರ್​ಗಳಾಗಿದ್ದಾರೆ.

ಇನ್ನೊಂದು ವರದಿಯ ಪ್ರಕಾರ ವಾಷಿಂಗ್ಟನ್​ ಭಾರತ ತಂಡದಲ್ಲಿ ಅಗ್ರ ಸರದಿಯ ಬ್ಯಾಟರ್​ ಆಗಿ ಕಣಕ್ಕಿಳಿಯಲಿದ್ದಾರೆ. ದೆಹಲಿ ವಿರುದ್ಧದ ರಣಜಿ ಪಂದ್ಯದಲ್ಲಿ ತಮಿಳುನಾಡು ಪರ 152 ರನ್​ ಸಿಡಿಸಿರುವ ವಾಷಿಂಗ್ಟನ್​ ಸದ್ಯ ಭರ್ಜರಿ ಬ್ಯಾಟಿಂಗ್​ ಫಾಮ್​ರ್ನಲ್ಲಿದ್ದಾರೆ. ಇದಲ್ಲದೆ ಭಾರತ ತಂಡದ ಇತರ ಪ್ರಮುಖ ಬ್ಯಾಟರ್​ಗಳು ಅರೆಕಾಲಿಕ ಬೌಲರ್​ಗಳಾಗಿಯೂ ಬೌಲಿಂಗ್​ ಮಾಡದಿರುವ ಕಾರಣ ವಾಷಿಂಗ್ಟನ್​ರನ್ನು ಅಗತ್ಯಬಿದ್ದರೆ ಬೌಲಿಂಗ್​ಗೂ ಬಳಸಿಕೊಳ್ಳಲಾಗುತ್ತದೆ ಎನ್ನಲಾಗಿದೆ.

ಸಿರಾಜ್​ ಜಾಗಕ್ಕೆ ಆಕಾಶ್​ದೀಪ್​?
ಬೆಂಗಳೂರಿನಲ್ಲಿ ಪ್ರವಾಸಿ ಕಿವೀಸ್​ ವೇಗಿಗಳ ಅಬ್ಬರದ ನಡುವೆ ಭಾರತದ ವೇಗಿ ಮೊಹಮದ್​ ಸಿರಾಜ್​ ಕೇವಲ 2 ವಿಕೆಟ್​ ಕಿತ್ತು ನಿರಾಸೆ ಮೂಡಿಸಿದ್ದರು. ಇದಲ್ಲದೆ ತವರಿನಲ್ಲಿ ಆಡಿರುವ ಕಳೆದ 13 ಟೆಸ್ಟ್​ಗಳಲ್ಲಿ ಸಿರಾಜ್​ 19 ವಿಕೆಟ್​ ಮಾತ್ರ ಕಬಳಿಸಿದ್ದಾರೆ. ಇದರಿಂದಾಗಿ ಪುಣೆ ಟೆಸ್ಟ್​ನಿಂದ ಸಿರಾಜ್​ ಹೊರಬೀಳುವ ಸಾಧ್ಯತೆ ಇದೆ. ಸಿರಾಜ್​ ಬದಲಿಗೆ ಮತ್ತೋರ್ವ ವೇಗಿ ಆಕಾಶ್​ದೀಪ್​ರನ್ನು ಆಡಿಸಲು ಭಾರತ ಆಸಕ್ತಿ ತೋರಿದೆ. 30 ವರ್ಷದ ಸಿರಾಜ್​ ಇದುವರೆಗೆ ಆಡಿರುವ 30 ಟೆಸ್ಟ್​ಗಳಲ್ಲಿ 80 ವಿಕೆಟ್​ ಕಬಳಿಸಿದ್ದು, ಈ ಪೈಕಿ 61 ವಿಕೆಟ್​ಗಳು ವಿದೇಶದಲ್ಲಿ ಆಡಿದ 17 ಟೆಸ್ಟ್​ಗಳಲ್ಲೇ ಲಭಿಸಿವೆ. ಹೆಚ್ಚಿನ ಬೌನ್ಸ್​ ಹೊಂದಿರುವ ಆಸ್ಟ್ರೆಲಿಯಾ, ದ. ಆಫ್ರಿಕಾದ ಪಿಚ್​ಗಳಲ್ಲಷ್ಟೇ ಸಿರಾಜ್​ ಪರಿಣಾಮಕಾರಿ ಎನಿಸಬಲ್ಲರು ಎನ್ನಲಾಗಿದೆ. ಹೀಗಾಗಿ ಹಾಲಿ ಸರಣಿಯಲ್ಲಿ ಹೊರಗುಳಿದರೂ, ಆಸ್ಟ್ರೆಲಿಯಾ ಪ್ರವಾಸಕ್ಕೆ ಅವರ ಆಯ್ಕೆ ನಿಶ್ಚಿತ ಎನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net