ಪ್ರಶ್ನೆಗಳಿಗೆಲ್ಲ ಥಟ್ ಅಂತ ಉತ್ತರಿಸುವ ಮೇಧಾವಿ

Medha
Published on
ಚಾಕಲೇಟ್ ಹಿಡಿದುಕೊಂಡು ತನ್ನದೇ ಆದ ಲೋಕದಲ್ಲಿ ವಿಹರಿಸುತ್ತಾ ಕೂರುವ ಹಾಲುಗಲ್ಲದ ಕಂದಮ್ಮನನ್ನು ಕಣ್ತುಂಬಿಕೊಳ್ಳುವುದೇ ಒಂಥರಾ ಖುಷಿ. ಆ ಮಗು ಮಾತನಾಡಿದರಂತೂ ಮುತ್ತು ಸುರಿದಂತೆ. ಇಂಥದ್ದರಲ್ಲಿ ನಾವು ಯಾವುದೇ ಪ್ರಶ್ನೆ ಕೇಳಿದರೂ ಒಂದು ಚಿಕ್ಕ ಮಗು ಅರಳು ಹುರಿದಂತೆ ಪಟಪಟ ಎಂದು ನಿಖರ ಉತ್ತರ ಕೊಡುತ್ತಾ ಹೋದರೆ ಹೇಗಿರುತ್ತೆ? ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ದಾಖಲೆ ಬರೆದ ಬಾಲೆ 3 ವರ್ಷದ ಮೇಧಾಳ ಕಥೆ ಕೇಳಿ...

| ಅರುಣ ಎಂ.ಜಿ.

ಈ ಮಗುವಿಗೆ ಈಗ ಕೇವಲ 3 ವರ್ಷ 5 ತಿಂಗಳು. ಇವಳ ವಯಸ್ಸಿನ ಅದೆಷ್ಟೋ ಮಕ್ಕಳಿಗೆ ಇನ್ನೂ ಸರಿಯಾಗಿ ಮಾತೇ ಬರುತ್ತಿಲ್ಲ. ಅಂತಹದ್ದರಲ್ಲಿ ಈ ಪುಟಾಣಿ ಓದುತ್ತಾಳೆ, ಬರೆಯುತ್ತಾಳೆ. ಸಾಮಾನ್ಯ ಜ್ಞಾನವಂತೂ ಅಗಾಧ... ಇಂತಹ ಮಹಾನ್ ಪ್ರತಿಭೆ ಹೆಸರು ಮೇಧಾ ಗಂಗಾಧರ್. ಅಂದಹಾಗೆ ಇವಳಿನ್ನೂ ಯಾವ ಶಾಲೆಯನ್ನೂ ಸೇರಿಲ್ಲ. ಮನೆಯಲ್ಲಿ ಉನ್ನತ ಶಿಕ್ಷಣ ಪಡೆದವರೂ ಇಲ್ಲ! ಆದರೂ ಈಕೆ ಅಸಾಧಾರಣ ಪ್ರತಿಭೆಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​​ನಲ್ಲಿ ತನ್ನ ಹೆಸರು ದಾಖಲಿಸಿದ್ದಾಳೆ!

ಮೇಧಾ ಜನಿಸಿದ್ದು 2018ರ ಮಾರ್ಚ್ 1ರಂದು. ತಂದೆ-ತಾಯಿ ಜತೆ ಬೆಂಗಳೂರಿನಲ್ಲೇ ವಾಸ. ಸದಾ ಲವಲವಿಕೆಯಿಂದಿರುವ ಈ ಪೋರಿಯ ನೆನಪಿನ ಶಕ್ತಿ ದೊಡ್ಡವರನ್ನೂ ಮೀರಿಸುವಂತಿದೆ. ಅಪ್ಪ-ಅಮ್ಮ ಏನೇ ಹೇಳಿಕೊಟ್ಟರೂ ಕ್ಷಣಾರ್ಧದಲ್ಲೇ ಕಲಿತುಬಿಡ್ತಾಳೆ. ಒಂದು ವಾರದ ಬಳಿಕ ಕೇಳಿದ್ರೂ ತಪ್ಪಿಲ್ಲದೆ ಪುನರುಚ್ಛರಿಸುತ್ತಾಳೆ. ಯಾರಾದರೂ ಬೇಕಂತಲೇ ಅದು ತಪ್ಪು ಎಂದು ಹೇಳಿದ್ರೂ ವಿಚಲಿತಗೊಳ್ಳದೆ ಸರಿಯುತ್ತರ ಹೇಳ್ತಾಳೆ. ಆಟವಾಡುತ್ತಲೇ ಓದಿನತ್ತ ವಾಲಿದ ಪುಟಾಣಿಗೆ ಈಗ ಏನೆಲ್ಲಾ ಬರುತ್ತೆ ಗೊತ್ತಾ? ಇದನ್ನ ಕೇಳಿದ್ರೆ ಖಂಡಿತ ಬೆರಗಾಗ್ತೀರಿ... ‘ಅ’ಯಿಂದ ‘ಳ’ವರೆಗೂ ಕನ್ನಡ ವರ್ಣಮಾಲೆ, ಇಂಗ್ಲಿಷ್​ ವರ್ಣಮಾಲೆಯ ಸಣ್ಣ ಮತ್ತು ದೊಡ್ಡ ಅಕ್ಷರಗಳು, ‘ಅ’ನಿಂದ ‘ಅಃ’ವರೆಗೂ ಹಿಂದಿ ವರ್ಣಮಾಲೆಯನ್ನು ಸ್ಪಷ್ಟವಾಗಿ ಹೇಳುತ್ತಾಳೆ ಹಾಗೂ ತಪ್ಪಿಲ್ಲದೆ ಬರೆಯುತ್ತಾಳೆ. 1-20ರವರೆಗೂ ಅಂಕಿಗಳನ್ನು ಕನ್ನಡ-ಇಂಗ್ಲಿಷ್-ಹಿಂದಿಯಲ್ಲಿ ಹೇಳುವುದು ಮಾತ್ರವಲ್ಲ, ಮೂರು ಭಾಷೆಯಲ್ಲೂ ಬರೆಯುತ್ತಾಳೆ. ದೇಶದ ಎಲ್ಲ ರಾಜ್ಯಗಳ ಹೆಸರು-ಅವುಗಳ ರಾಜಧಾನಿ, ಕರ್ನಾಟಕದಲ್ಲಿರುವ ಶಾಸಕರು-ಸಂಸದರು ಮತ್ತು ಅವರ ಕ್ಷೇತ್ರಗಳ ಹೆಸರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರು- ಯಾವ ಕೃತಿಗೆ ಎಂಬುದನ್ನೂ ಹೇಳುತ್ತಾಳೆ. 160ಕ್ಕೂ ಹೆಚ್ಚು ಸಾಮಾನ್ಯ ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುತ್ತಾಳೆ. ದೇಶದ ಗಣ್ಯ ವ್ಯಕ್ತಿಗಳು, ಪ್ರಮುಖ ಸ್ಥಳಗಳ ಚಿತ್ರಗಳನ್ನು ಗುರುತಿಸುತ್ತಾಳೆ. ಆ ಬಗ್ಗೆ ಒಂದೆರಡು ವಾಕ್ಯ ಮಾತನಾಡುತ್ತಾಳೆ. ಪುಟ್ಟದೊಂದು ಪತ್ರ ಬರೆಯುವುದನ್ನೂ ಕಲಿತಿದ್ದಾಳೆ. ರಾಷ್ಟ್ರಗೀತೆಯನ್ನು ಸ್ಪಷ್ಟವಾಗಿ ಹೇಳುತ್ತಾಳೆ. ರಾಷ್ಟ್ರ ಲಾಂಛನ- ಧ್ವಜ, ರಾಷ್ಟ್ರ ಪಕ್ಷಿ, ಪ್ರಾಣಿ, ಮಾನವನ ದೇಹದಲ್ಲಿರುವ ಅಂಗಾಂಗಗಳು, ಕಂಪ್ಯೂಟರ್​ನ ಭಾಗಗಳು, 21ಕ್ಕೂ ಹೆಚ್ಚು ಬಿತ್ತನೆ ಬೀಜಗಳ ಹೆಸರು, 30 ಹೂವು, 20 ವಾಹನ, 70ಕ್ಕೂ ಹೆಚ್ಚು ಪ್ರಾಣಿ, 25 ಪಕ್ಷಿಗಳ ಹೆಸರನ್ನು ಚಿತ್ರ ಸಹಿತ ಗುರುತಿಸುತ್ತಾಳೆ. ಕನ್ನಡ-ಇಂಗ್ಲಿಷ್​ನಲ್ಲಿ ವಾರ, ತಿಂಗಳು ಹೇಳುತ್ತಾಳೆ. ತಿರುಚಿ ಕೇಳಿದ್ರೂ ಎಲ್ಲದ್ದಕ್ಕೂ ಥಟ್ ಅಂತ ಸರಿ ಉತ್ತರ ಕೊಟ್ಟು ಆಟದಲ್ಲಿ ಮಗ್ನವಾಗುತ್ತಾಳೆ... ಅಬ್ಬಬ್ಬಾ ಮೇಧಾಳ ಬಾಯಲ್ಲಿ ಇದನ್ನೆಲ್ಲ ಕೇಳುತ್ತಿದ್ದರೆ ಈಕೆ ಸಾಕ್ಷಾತ್ ಸರಸ್ವತಿ ದೇವಿಯ ವರವೋ ಎನ್ನಿಸುತ್ತಿದೆ. ಪುಟ್ಟ ಕೈಯಲ್ಲಿ ಪೆನ್ಸಿಲ್ ಹಿಡಿದು ದುಂಡಾಗಿ ‘ಮೇಧಾ’ ಎಂದು ಹೆಸರು ಬರೆಯುವ ದೃಶ್ಯ ನೋಡಿದರಂತೂ ‘ಭಲೇ ಪುಟಾಣಿ’ ಎಂದು ಬೆನ್ನು ತಟ್ಟಬೇಕು ಅನ್ನಿಸುತ್ತದೆ.

ಮನೆಯೇ ಮೊದಲ ಶಾಲೆ

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಹೋಬಳಿಯ ಉಗೇನಹಳ್ಳಿ ಮೂಲದ ದಂಪತಿ ಎಚ್.ಎಸ್. ಮಂಜು ನಾಥ್ ಮತ್ತು ಟಿ.ಎಂ. ಪವಿತ್ರಾ ಅವರ ಏಕೈಕ ಪುತ್ರಿ ಮೇಧಾ. ಪುಟ್ಟ ವಯಸ್ಸಲ್ಲೇ ಬುಕ್ ಆಫ್ ರೆಕಾರ್ಡ್ ಸೇರಿದ ಮೇಧಾಗೆ ತಾಯಿಯೇ ಗುರು. ತಂದೆ-ತಾಯಿ ಹೆಚ್ಚೇನೂ ಓದಿಲ್ಲ. ತಂದೆ ಮಂಜುನಾಥ್ ಬೆಂಗಳೂರಿನ ಬಾರ್​ವೊಂದರಲ್ಲಿ ಕೆಲಸ ಮಾಡುತ್ತಿದ್ದು, 10ನೇ ತರಗತಿ, ಐಟಿಐ ಓದಿರುವ ಪವಿತ್ರಾ, ಮನೆಯಲ್ಲಿ ಮಗಳಿಗೆ ಆಟವಾಡಿಸುತ್ತಲೇ ಓದಿನ ಹುಚ್ಚು ಹಿಡಿಸಿದ್ದಾರೆ. ಮೇಧಾಳ ಕಲಿಕೆ ‘ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲು ಗುರು’ ಎಂಬ ಮಾತನ್ನು ನೆನಪಿಸುತ್ತದೆ.

ತಾಯಿಯೇ ಗುರು

2 ವರ್ಷ 10 ತಿಂಗಳಿಗೇ ಚೆನ್ನಾಗಿ ಮಾತನಾಡುತ್ತಿದ್ದ ಈ ಪೋರಿಗೆ ಎಷ್ಟೇ ಕ್ಲಿಷ್ಟಕರ ಪದ ಹೇಳಿದ್ರೂ ಸರಾಗವಾಗಿ ಹೇಳುತ್ತಿದ್ದಳಂತೆ. ಇದನ್ನು ಮನಗಂಡ ತಾಯಿ ಪವಿತ್ರಾ, ಮನೆಯಲ್ಲೇ ಅ, ಆ, ಇ, ... ಕಲಿಸಿದ್ದಾರೆ. ಒಂದೇ ವಾರದಲ್ಲಿ ಮಗಳು ಕನ್ನಡ ವರ್ಣಮಾಲೆ ಕಲಿತದ್ದನ್ನು ನೋಡಿ ಖುಷಿಯಾದ ಪವಿತ್ರಾ, ಮಗಳ ಕೈಗೆ ಪೆನ್ಸಿಲ್ ಕೊಟ್ಟು ಬರಹ ಅಭ್ಯಾಸ ಮಾಡಿಸಿದ್ದಾರೆ. ಆರಂಭದಲ್ಲಿ ವಕ್ರ ವಕ್ರವಾಗಿ ಬರೆದ ಮಗಳು, ಕೆಲವೇ ದಿನದಲ್ಲಿ ದುಂಡಾಗಿ ಬರೆದಿದ್ದಾಳೆ. ಇದನ್ನು ನೋಡಿ ಆಶ್ಚರ್ಯಗೊಂಡ ತಾಯಿ, ಇಂಗ್ಲಿಷ್-ಹಿಂದಿ ಅಕ್ಷರಾಭ್ಯಾಸವನ್ನೂ ಮಾಡಿಸಿದ್ದಾರೆ. ಏನೇ ಹೇಳಿಕೊಟ್ಟರೂ ಕ್ಷಣಾರ್ಧದಲ್ಲೇ ಕಲಿತುಬಿಡುವ ಮಗಳಿಗೆ ನಿತ್ಯವೂ ಆಟ-ಊಟದ ಜತೆಗೆ ಓದು-ಬರಹ ಕಲಿಸುವಲ್ಲಿ ಪವಿತ್ರಾ ಮಗ್ನರಾಗಿದ್ದಾರೆ.

ನನ್ನ ಮಗಳು ತುಂಬಾ ಕಲಿತಿದ್ದಾಳೆ. ದುಂಡಾಗಿ ಬರೆಯುತ್ತಾಳೆ ಎಂದು ನನ್ನ ಅಣ್ಣನಿಗೆ ಹಾಗೇ ಮಾತನಾಡುತ್ತಾ ಹೇಳಿದೆ. ಲಾರಿ ಚಾಲಕನಾಗಿರುವ ನನ್ನಣ್ಣ, ನಿನ್ನ ಮಗಳ ಪ್ರತಿಭೆಯನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್​ಗೆ ಕಳಿಸು ಅಂದ್ರು. ಮಗಳ ಸಾಧನೆ ಬಗ್ಗೆ ವಿಡಿಯೋ ಮಾಡಿ ಕನ್ನಡದಲ್ಲೇ ಮಾತನಾಡಿ ಕಳಿಸಿದ್ದೆವು. ನಮಗೆ ಇಂಗ್ಲಿಷ್​ನಲ್ಲಿ ಮಾತನಾಡಲು ಬರಲ್ಲ ಹಾಗಾಗಿ. ಆ ಕಡೆಯಿಂದ ‘ಇಂಗ್ಲಿಷ್​ನಲ್ಲಿ ಎಕ್ಸ್​ಪ್ಲೇನ್ ಮಾಡಿ ಶಾಲಾ-ಕಾಲೇಜುಗಳ ಪ್ರಿನ್ಸಿಪಾಲ್​ರಿಂದ ರುಜು ಮಾಡಿಸಿ ವಿಡಿಯೋ ಕಳಿಸಬೇಕು’ ಎಂದು ಒಂದು ಮೇಲ್ ಬಂತು. ನಾನು ಓದಿದ್ದ ತುರುವೇಕೆರೆಯ ಸ್ವಾಮಿ ವಿವೇಕಾನಂದ ಪಿಯು ಕಾಲೇಜಿನ ಪ್ರಾಧ್ಯಾಪಕರ ಸಹಾಯ ಪಡೆದು ಇಂಡಿಯಾ ಬುಕ್ ಆಫ್ ರೆಕಾರ್ಡ್್ಸೆ ಕಳಿಸಿದೆವು. 2021ರ ಮೇ 28ರಂದು ಮಗಳ ಹೆಸರು ಅದರಲ್ಲಿ ದಾಖಲಾಯಿತು.| ಎಚ್.ಎಸ್. ಮಂಜುನಾಥ್ ಮೇಧಾಳ ತಂದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net