ನವದೆಹಲಿ: ಪಾಕಿಸ್ತಾನದ ಕ್ರಿಕೆಟ್ ದಂತಕಥೆ ವಾಸಿಂ ಅಕ್ರಮ್ ಅವರು ಭಾರತದ ಸ್ಟಾರ್ ಬೌಲರ್ನನ್ನು ಮನಸಾರೆ ಕೊಂಡಾಡಿದ್ದು, ಕ್ರಿಕೆಟ್ ಜಗತ್ತಿನಲ್ಲಿ ಈ ಪೀಳಿಗೆಯ ಅತ್ಯುತ್ತಮ ಬೌಲರ್ ಎಂದಿದ್ದಾರೆ. ಲೆಜೆಂಡರಿ ಅಕ್ರಮ್ ಅವರಿಂದ ಪ್ರಶಂಸೆ ಪಡೆದ ಆ ಬೌಲರ್ ಬೇರೆ ಯಾರೂ ಅಲ್ಲ, ಅವರೇ ಟೀಮ್ ಇಂಡಿಯಾದ ಡೆತ್ ಓವರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ.
ಯಾರೇ ಒಪ್ಪಿದರೂ ಒಪ್ಪದಿದ್ದರೂ ಬುಮ್ರಾ ವಿಶ್ವದ ಶ್ರೇಷ್ಠ ಎಂದು ಅಕ್ರಮ್ ಹೇಳಿದ್ದಾರೆ. ಹೀಗೆ ಹೇಳಿದರೆ ನಮ್ಮ ದೇಶದ ಅಭಿಮಾನಿಗಳು ಒಪ್ಪಿಕೊಳ್ಳುವುದಿಲ್ಲ, ಆದರೆ ಈಗಿನ ಕ್ರಿಕೆಟ್‌ನಲ್ಲಿ ಬುಮ್ರಾ ಅವರಿಗಿಂತ ಮಿಗಿಲಾದವರು ಯಾರೂ ಇಲ್ಲ. ಅವರ ಬೌಲಿಂಗ್ ಅನ್ನು ಎದುರಿಸುವುದು ಅಷ್ಟು ಸುಲಭವಲ್ಲ ಎಂದು ಬುಮ್ರಾರನ್ನು ವಾಸಿಂ ಅಕ್ರಮ್ ಹೊಗಳಿದರು.
ಅಮೇರಿಕ್ರಿಕೆಟ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಕ್ರಮ್, ಈ ತಲೆಮಾರಿನ ಅತ್ಯುತ್ತಮ ಬೌಲರ್ ಯಾರು ಎಂದು ಯಾರಾದರೂ ಪ್ರಶ್ನೆ ಮಾಡಿದರೆ, ನಾನು ಜಸ್ಪ್ರೀತ್ ಬುಮ್ರಾ ಹೆಸರನ್ನು ಹೇಳುತ್ತೇನೆ. ಪಾಕಿಸ್ತಾನದ ಅಭಿಮಾನಿಗಳಿಗೆ ಇದು ಇಷ್ಟವಾಗದಿರಬಹುದು. ಆದರೆ ಅವನು ನನ್ನ ನೆಚ್ಚಿನ ವೇಗದ ಬೌಲರ್. ಬುಮ್ರಾ ಆಧುನಿಕ ಶ್ರೇಷ್ಠ ಎಂದರೆ ಅತಿಶಯೋಕ್ತಿಯಲ್ಲ. ತುಂಬಾ ವಿಭಿನ್ನವಾದ ಬೌಲರ್ ಆತ. ಎಲ್ಲ ಮಾದರಿಗಳಲ್ಲಿಯೂ ಆತ ತುಂಬಾ ಅಪಾಯಕಾರಿ ಎಂದರು.
ಅಂದಹಾಗೆ ಬುಮ್ರಾ ಅವರು 2016ರ ಜನವರಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಎಲ್ಲ ಮೂರು ಮಾದರಿಯ ಆಟಗಳಲ್ಲಿ ನಂಬರ್ 1 ಸ್ಥಾನವನ್ನು ತಲುಪಿದ ವಿಶ್ವದ ಏಕೈಕ ಬೌಲರ್ ಎನಿಸಿಕೊಂಡಿದ್ದಾರೆ.
ವಾಸಿಂ ಅಕ್ರಮ್ ವಿಚಾರಕ್ಕೆ ಬರುವುದಾದರೆ, ಏಕದಿನ ಮಾದರಿ ಪಂದ್ಯಗಳಲ್ಲಿ 500 ವಿಕೆಟ್‌ಗಳನ್ನು ಪಡೆದ ವಿಶ್ವದ ಮೊದಲ ಬೌಲರ್ ಆಗಿದ್ದಾರೆ. 1999ರಲ್ಲಿ ಏಕದಿನ ವಿಶ್ವಕಪ್ ಫೈನಲ್‌ಗೆ ಮೆನ್ ಇನ್ ಗ್ರೀನ್ ಅನ್ನು ಮುನ್ನಡೆಸಿದ್ದ ಮಾಜಿ ನಾಯಕನೆಂಬ ಹೆಗ್ಗಳಿಕೆ ಹೊಂದಿದ್ದಾರೆ. (ಏಜೆನ್ಸೀಸ್)
9 ಐಷಾರಾಮಿ ಕಾರುಗಳ ಮಾಲೀಕ ಈ ಪೌರ ಕಾರ್ಮಿಕ! ಈತನ ಹಿನ್ನೆಲೆ ತಿಳಿದು ಅಧಿಕಾರಿಗಳೇ ಶಾಕ್
ಇದು ಗೌತಮ್ ಗಂಭೀರ್ ಯುಗ! ರಿಷಭ್ ಪಂತ್ ಬೌಲಿಂಗ್ ಕಂಡು ನಗೆಗಡಲಲ್ಲಿ ತೇಲಿದ ನೆಟ್ಟಿಗರು