ಈ ಮದ್ವೆ ಬಗ್ಗೆ ತಕರಾರು ತೆಗೆಯುವ ಹಾಗೇ ಇಲ್ಲ. ಏಕೆಂದರೆ ಇದು ಅಕ್ಷರಶಃ 'ಸಂವಿಧಾನಬದ್ಧ' ಮದುವೆ!

Marriage
Published on

ನವದೆಹಲಿ: ಮದುವೆ ಎಂದ ಮೇಲೆ ಅಲ್ಲಿ ಒಂದಷ್ಟು ಸಂಪ್ರದಾಯವಿರುತ್ತದೆ, ಸಪ್ತಪದಿ ಇರುತ್ತದೆ. ಜೊತೆಗೊಬ್ಬರು ಪುರೋಹಿತರು ಇರಬೇಕು. ಆದರೆ ಅದ್ಯಾವುದೂ ಇರದ ಮದುವೆಯೊಂದು ನೆರವೇರಿದ್ದಷ್ಟೇ ಅಲ್ಲ, ಅದು ನಡೆದ ರೀತಿಗೇ ಹಲವರ ಗಮನ ಸೆಳೆದಿದೆ. ಅಷ್ಟಕ್ಕೂ ಈ ಮದುವೆ ಬಗ್ಗೆ ಯಾರೂ ತಕರಾರು ತೆಗೆಯುವ ಹಾಗೇ ಇಲ್ಲ. ಏಕೆಂದರೆ ಇದು ಅಕ್ಷರಶಃ 'ಸಂವಿಧಾನಬದ್ಧ' ಮದುವೆ.

ಅದರಲ್ಲೂ ಬುಡಕಟ್ಟು ಜನಾಂಗದಲ್ಲಿ ಇಂಥದ್ದೊಂದು ಮದುವೆ ಇದೇ ಮೊದಲ ಸಲ ನೆರವೇರಿದ್ದು ಎಂದೂ ಹೇಳಲಾಗುತ್ತಿದೆ. ಮೊನ್ನೆಮೊನ್ನೆ ಅಂದರೆ ಜನವರಿ 15ರಂದು ಕುಟುಂಬ ಸದಸ್ಯರು ಸೇರಿ ನೂರಾರು ಮಂದಿಯ ನಡುವೆ ಇಂಥದ್ದೊಂದು ಮದುವೆ ನಡೆದಿದೆ. ವರ ಇಕ್ರಂ ಅರ್ಸೆ ಹಾಗೂ ವಧು ನೈಜ ಹೀಗೆ ವಿಶಿಷ್ಟ ರೀತಿಯಲ್ಲಿ ಮದುವೆಯಾಗಿ ಗಮನ ಸೆಳೆದಿದ್ದಾರೆ.

ಮಧ್ಯಪ್ರದೇಶದ ಖರ್ಗೋನ್ ಜಿಲ್ಲೆಯಲ್ಲಿ ನಡೆದ ಈ ಮದುವೆ ಸದ್ಯ ಟಾಕ್​ ಆಫ್​ ದ ಟೌನ್​ ಆಗಿರುವುದಷ್ಟೇ ಅಲ್ಲ, ಸೋಷಿಯಲ್ ಮೀಡಿಯಾ ಮೂಲಕ ವರ್ಲ್ಡ್​ ಫೇಮಸ್ ಆಗುವ ರೀತಿಯಲ್ಲಿ ವೈರಲ್​ ಆಗುತ್ತಲೂ ಇದೆ. ಭಗವಾನ್​ಪುರ ತೆಹಸಿಲ್​ನ ಧಾಬ್ಲಾ ಗ್ರಾಮದಲ್ಲಿ ಈ ಮದುವೆ ನಡೆದಿದೆ. ಯಾವ ಸಂಪ್ರದಾಯವೂ ಇರದೆ ಈ ವಧು-ವರರು ಅಗ್ನಿಸಾಕ್ಷಿಯ ಬದಲು ನಮ್ಮ ಸಂವಿಧಾನವನ್ನೇ ಸಾಕ್ಷಿಯಾಗಿ ಇರಿಸಿಕೊಂಡು ಮದುವೆ ಆಗಿದ್ದಾರೆ. ಈ ಸಂದರ್ಭದಲ್ಲಿ ಡಾ.ಬಿ.ಆರ್​.ಅಂಬೇಡ್ಕರ್ ಹಾಗೂ ಬಿರ್ಸಾ ಮುಂಡಾ ಮುಂತಾದವರ ಫೋಟೋ ಇರಿಸಿಕೊಂಡು ಅದರ ಸಾಕ್ಷಿಯಾಗಿ ವಚನ ಸ್ವೀಕರಿಸುವ ಮೂಲಕ ದಾಂಪತ್ಯ ಜೀವನಕ್ಕೆ ಪ್ರವೇಶಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net