

ಆನಂದಪುರ (ಶಿವಮೊಗ್ಗ): ಇಲ್ಲಿನ ಹೊಸಗುಂದದ ಶ್ರೀ ಕಂಚಿಕಾಳಮ್ಮ ದೇವಾಲಯದಲ್ಲಿ ಕಳವು ಮಾಡಿದ್ದ ಎರಡು ಗಂಟೆಗಳನ್ನು ಕಳ್ಳರು 500 ರೂ. ತಪ್ಪೊಪ್ಪಿಗೆ ಕಾಣಿಕೆ ಸಹಿತ ಮಂಗಳವಾರ ವಾಪಸ್ ಇಟ್ಟು ಹೋಗಿದ್ದಾರೆ.
ಮಾ. 24ರಂದು ಸಂಜೆ ಅರ್ಚಕರು ದೇವಾಲಯದ ಪೂಜೆ ಮುಗಿಸಿ ಬೀಗ ಹಾಕಿ ಹೊರಡುವ ಸಮಯದಲ್ಲಿ ಪ್ರವೇಶ ದ್ವಾರದ ಬಳಿ ಇರುವ ದೊಡ್ಡ ಎರಡು ಗಂಟೆಗಳನ್ನು ಬೈಕ್ನಲ್ಲಿ ಬಂದಿದ್ದ ಮೂವರು ಕದ್ದು ಪರಾರಿಯಾಗಿದ್ದರು. ಅರ್ಚಕರು ಕೂಗಿ ಕರೆದರೂ ನೋಡದೆ ಪರಾರಿಯಾಗಿದ್ದರು.
ಕಳ್ಳತನ ನಡೆದ ಮರುದಿನ ದೇವಾಲಯ ಸಮಿತಿ ಪೊಲೀಸ್ ಠಾಣೆಗೆ ದೂರು ನೀಡಿತ್ತು. ದೇವಾಲಯ ಸಮಿತಿ ಸದಸ್ಯರೆಲ್ಲ ಸೇರಿ ವಿಶೇಷ ಪೂಜೆ ನಡೆಸಿ ಕಳುವಾದ 15 ದಿನದೊಳಗೆ ಗಂಟೆ ವಾಪಸ್ ದೊರೆಯಲಿ. ಕಳ್ಳರಿಗೆ ತಕ್ಷ ಶಿಕ್ಷೆಯಾಗಲಿ ಎಂದು ಪ್ರಾರ್ಥಿಸಿದ್ದರು.
ಈ ವಿಷಯ ಎಲ್ಲೆಡೆ ಹರಡುತ್ತಿದ್ದಂತೆ ಮಂಗಳವಾರ ಬೆಳಗ್ಗೆ ದೇವಾಲಯದ ಎದುರು ಎರಡು ಗಂಟೆ ಮತ್ತು 500 ರೂ. ನೋಟನ್ನು ಇಟ್ಟು ಹೋಗಿದ್ದಾರೆ. ಗಂಟೆ ದೊರೆತ ಸುದ್ದಿ ತಿಳಿಯುತ್ತಿದ್ದಂತೆ ಶಶಿ ಗೌಡ, ಗಿರೀಶ ನೇದರವಳ್ಳಿ, ನಟರಾಜ್ ಹೆಬ್ಬಾರ ಮತ್ತು ಅರ್ಚಕರು ಗಂಟೆಯನ್ನು ಪುನಃ ದೇವರ ಸನ್ನಿಧಿಗೆ ತಂದಿಟ್ಟು ವಿಶೇಷ ಪೂಜೆ ಸಲ್ಲಿಸಿದರು.