10 ಅಡಿ ಸುರಂಗ ಕೊರೆದು ಚಿನ್ನಾಭರಣ ಮಳಿಗೆ ದೋಚಿದ ಕಳ್ಳರು

up meerut
Published on

ಮೀರತ್​: ಚರಂಡಿ ಮೂಲಕ 10 ಅಡಿ ಸುರಂಗ ಕೊರೆದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನ ಕಳ್ಳರು ದೋಚಿರುವ ಘಟನೆ ಉತ್ತರಪ್ರದೇಶದ ಮೀರತ್​ನಲ್ಲಿ ನಡೆದಿದೆ.

ಮಂಗಳವಾರ ಬೆಳಗ್ಗೆ ಎಂದಿನಂತೆ ಅಂಗಡಿ ಮಾಲೀಕ ಮಳಿಗೆ ತೆರೆದಾಗ ಘಟನೆ ಬೆಳಕಿಗೆ ಬಂದಿದೆ. ಚರಂಡಿ ಮೂಲಕ ಸುರಂಗ ಕೊರೆದಿರುವುದನ್ನು ಗಮನಿಸಿದ ಮಾಲೀಕ ಪೊಲೀಸರಿಗೆ ದೂರು ನೀಡಿ ಆರೋಪಿಗಳನ್ನು ಬಂಧಿಸುವಂತೆ ವಿನಂತಿಸಿದ್ದಾರೆ.

ಚಿನ್ನಾಭರಣ ಮಳಿಗೆಯಲ್ಲಿ ಕಳ್ಳತನವಾಗಿರುವ ಸುದ್ಧಿ ನಗರದಾದ್ಯಂತ ಹರಡುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಬುಲಿಯನ್​ ಟ್ರೇಡರ್ಸ್​ ಅಸೋಸಿಯೇಷನ್(BTA)​ ಸದಸ್ಯರು ಪೊಲೀಸರ ವಿರುದ್ದ ಘೋಷಣೆಗಳನ್ನ ಕೂಗಿ ಆಕ್ರೋಶವನ್ನು ಹೊರಹಾಕಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ BTA ಸದಸ್ಯರು ನಗರದಲ್ಲಿ ಇದು ಒಟ್ಟಾರೆ ನಾಲ್ಕನೇ ಪ್ರಕರಣವಾಗಿದ್ದು ಇದುವರೆಗೂ ಪೊಲೀಸರು ಯಾರನ್ನು ಸಹ ಬಂಧಿಸಿಲ್ಲ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಿ ಕಳ್ಳರನ್ನು ಸೆರೆ ಹಿಡಿಯಬೇಕು ಎಂದು ಆಗ್ರಹಿಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿ ಒಬ್ಬರು ಕಳ್ಳರು ಚರಂಡಿಯ ಒಂದು ಭಾಗದಿಂದ ಸುರಂಗವನ್ನು ಕೊರೆದು ಅಂಗಡಿಯನ್ನು ದೋಚಿದ್ದಾರೆ. ಕಳ್ಳತನವಾಗಿರುವ ಚಿನ್ನಾಭರಣದ ಒಟ್ಟು ಮೌಲ್ಯದ ಬಗ್ಗೆ ಇನ್ನು ತಿಳಿದು ಬಂದಿಲ್ಲ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net