ಮುಂಗಡ ಹಣ ವಾಪಾಸ್ ಕೊಡದ್ದಕ್ಕೆ ಕಾಲಿಗೆ ಸರಪಳಿ ಹಾಕಿ ದುಡಿಸಿಕೊಳ್ಳುತ್ತಿದ್ದರು..ಪೊಲೀಸರಿಂದ ಜೀತದಾಳು ರಕ್ಷಣೆ

crime
Published on

ರಾಮನಗರ: ಖಚಿತ ಮಾಹಿತಿ ಮೇರೆಗೆ ಫಿಲೇಚರ್ ಒಂದರ ಮೇಲೆ ದಾಳಿ ನಡೆಸಿದ ಜೀತದಾಳನ್ನು ರಕ್ಷಣೆ ಮಾಡಿ ಇಬ್ಬರ ವಿರುದ್ಧ ಪ್ರಕರಣ ದಾಖಲು ಮಾಡಿರುವ ಘಟನೆ ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಮಹೆಬೂಬ್ ನಗರದಲ್ಲಿ ನಡೆದಿದೆ.

ನಗರದ ವಾಟರ್ ಟ್ಯಾಂಕ್ ವೃತ್ತದ ನಿವಾಸಿ ಮಹಮದ್ ವಾಸೀಂ (24) ಬಿಡುಗಡೆಗೊಂಡ ಜೀತದಾಳು. ಕಾಲಿಗೆ ಸರಪಳಿಯಿಂದ ಕಟ್ಟಿ ಈತನಿಂದ ದುಡಿಸಿಕೊಳ್ಳುತ್ತಿದ್ದ ಫಿಲೇಚರ್‌ನ ಮಾಲೀಕ ಸಯದ್ ಇಸಾಂ ಮತ್ತು ಸೂಪರ್‌ವೈಸರ್ ಸೈಯದ್ ಅಮ್ಜದ್ ಬಂಧಿತರು.

ಘಟನೆ ವಿವರ: ಕಳೆದ 5 ತಿಂಗಳ ಹಿಂದೆ ಮಹಮದ್ ವಾಸೀಂ, ಫಿಲೇಚರ್ ಮಾಲೀಕರಿಂದ 1.5 ಲಕ್ಷ ರೂ ಹಣವನ್ನು ಮುಂಗಡವಾಗಿ ಪಡೆದು ಫಿಲೇಚರ್‌ನಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಒಂದುವರೆ ತಿಂಗಳ ಹಿಂದೆ ಕಾರಣಾಂತರದಿಂದ ಕೆಲಸಕ್ಕೆ ಹೋಗಿರಲಿಲ್ಲ. ಮತ್ತೆ ಕಳೆದ ಕೆಲ ದಿನಗಳ ಹಿಂದೆ ಕೆಲಸಕ್ಕೆ ಹೋದಾಗ, ಫಿಲೇಚರ್ ಮಾಲೀಕರು ತಮ್ಮ ಹಣವನ್ನು ವಾಪಾಸ್ ಕೊಡುವವರೆಗೂ ಕೆಲಸ ಮಾಡುವಂತೆ ಹೇಳಿ ಕಾಲಿಗೆ ಸರಪಳಿಯನ್ನು ಕಟ್ಟಿ ಬಲವಂತವಾಗಿ ಕೆಲಸ ಮಾಡಿಸಿದ್ದಾರೆ. ರಾತ್ರಿಯ ವೇಳೆಯೂ ಸರಪಳಿಯಿಂದಲೇ ಕಟ್ಟಿ ಇರಿಸುತ್ತಿದ್ದರು.

ಈ ಬಗ್ಗೆ ಖಚಿತ ಮಾಹಿತಿ ಪಡೆದ ರಾಮನಗರ ಠಾಣೆ ಪಿಎಸ್‌ಐ ಅಶೋಕ್ ಎಸ್ ಚನ್ನಾಳ್ ಹಾಗೂ ಕಂದಾಯ

ಇಲಾಖೆ ಶಿರಸ್ತೇದಾರ್ ಸಬೀನ್ ತಾಜ್ ನೇತೃತ್ವದ ತಂಡ ಭಾನುವಾರ ಸಂಜೆ ದಾಳಿ ನಡೆಸಿ ಕಾರ್ಮಿಕ ಮಹಮದ್ ವಾಸೀಂನನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೆ, ಅಲ್ಲಿಯೇ ಇದ್ದ ಫ್ಯಾಕ್ಟರಿ ಮಾಲೀಕ ಸಯದ್ ಇಸಾಂ ಮತ್ತು ಸೂಪರ್‌ವೈಸರ್ ಸೈಯದ್ ಅಮ್ಜದ್‌ರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳದಲ್ಲಿಯೇ ಇದ್ದ ಕಬ್ಬಿಣದ ಸರಪಳಿ ಹಾಗೂ ಬೀಗವನ್ನು ಸಹ ವಶಪಡಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net