

ನವದೆಹಲಿ: ಗುಜರಾತ್ ಮೂಲದ ಸ್ಟರ್ಲಿಂಗ್ ಬಯೋಟೆಕ್ ಕಂಪನಿಯ ಸಂದೇಸಾರ ಗ್ರೂಪ್ ನಡೆಸಿರುವ ಸಾಲದ ಹಗರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ ಕಾಂಗ್ರೆಸ್ ನಾಯಕ, ಸೋನಿಯಾ ಗಾಂಧಿ ಅವರ ಆಪ್ತ ಅಹ್ಮದ್ ಪಟೇಲ್ ಅವರ ಮನೆ ಮೇಲೆ ದಾಳಿ ಮಾಡಿ, ಅವರನ್ನು ವಿಚಾರಣೆಗೆ ಒಳಪಡಿಸಿದೆ.
ಸ್ಟರ್ಲಿಂಗ್ ಬಯೋಟೆಕ್ ಕಂಪನಿಯ ಪ್ರಮೋಟರ್ ಆಗಿದ್ದ ಸಂದೇಸಾರ ಗ್ರುಪ್ ಬ್ಯಾಂಕ್ಗಳಿಂದ ಸುಮಾರು 15,000 ಕೋಟಿ ರೂಪಾಯಿಯನ್ನು ವಿವಿಧ ಬ್ಯಾಂಕ್ಗಳಿಂದ ಪಡೆದು, ಅದನ್ನು ಮರುಪಾವತಿಸದೆ ವಂಚನೆ ಮಾಡಿದೆ. ಈ ಅಕ್ರಮ ಸಾಲದ ಹಗರಣದಲ್ಲಿ ಅಹ್ಮದ್ ಪಟೇಲ್ ಪುತ್ರ ಹಾಗೂ ಅಳಿಯನ ಹೆಸರು ಕೇಳಿಬಂದಿತ್ತು. ಅವರಿಬ್ಬರೂ ತಮಗೆ ಸಂದೇಸಾರ ಗ್ರೂಪ್ ಬಗ್ಗೆ ಗೊತ್ತು. ಪ್ರಮುಖ ಆರೋಪಿಗಳಾದ ನಿತಿನ್ ಸಂದೇಸಾರ, ಚೇತನ್ ಸಂದೇಸಾರ ಮತ್ತು ದೀಪ್ತಿ ಸಂದೇಸಾರ ಪರಿಚಯ ಇದೆ ಎಂದು ಹೇಳಿದ್ದರು. ಅದಾದ ಬಳಿಕ ಅಹ್ಮದ್ ಪಟೇಲ್ ಅವರನ್ನೂ ಇ.ಡಿ. ವಿಚಾರಣೆಗೆ ಒಳಪಡಿಸಿದೆ. ಇದನ್ನೂ ಓದಿ: ದೇವಸ್ಥಾನಕ್ಕೆ ಹೋಗುವ ಮಾರ್ಗಮಧ್ಯದಲ್ಲೇ ಮೂವರು ಮಕ್ಕಳು ಸಾವು, ಬದುಕುಳಿದ ತಾಯಿ
ಒಂದು ವಾರದಲ್ಲಿ ಮೂರು ಬಾರಿ ಇ.ಡಿ.ವಿಚಾರಣೆಗೆ ಹಾಜರಾದ ಅಹ್ಮದ್ ಪಟೇಲ್ ಅವರು ಇದೀಗ ಜಾರಿ ನಿರ್ದೇಶನಾಲಯದ ವಿರುದ್ಧವೇ ವ್ಯಂಗ್ಯವಾಡಿದ್ದಾರೆ. ಇ.ಡಿ.ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೂ ನಾನು ಉತ್ತರ ನೀಡಿದೆ. ಆದರೆ ಅವರಿಗೆ ನನ್ನ ಒಂದು ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗಲಿಲ್ಲ ಎಂದು ಟೀಕಿಸಿದ್ದಾರೆ.
ಟ್ವೀಟ್ ಮಾಡಿರುವ ಅಹ್ಮದ್ ಪಟೇಲ್, ವಾರದಲ್ಲಿ ಮೂರು ಬಾರಿ ನಮ್ಮ ಮನೆಗೆ ಆಗಮಿಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಧನ್ಯವಾದಗಳು. ನಾನು ಅವರ 128 ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಆದರೆ ನನ್ನ ಒಂದು ಮೂಲಭೂತ ಪ್ರಶ್ನೆಗೆ ಉತ್ತರಿಸಲು ಅವರು ವಿಫಲರಾದರು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೊವಿಡ್-19 ಸೋಂಕಿಗೆ ಒಳಗಾದ ತನ್ನ 80 ವರ್ಷದ ತಾಯಿಗೆ ಈ ಮಗ ಕೊಟ್ಟಿದ್ದು ಕ್ರೂರ ಶಿಕ್ಷೆ…
ಸಂದೇಸಾರ ಗ್ರೂಪ್ಗೆ ನೀಡಲಾಗುತ್ತಿದ್ದ ಹಲವು ಸವಲತ್ತುಗಳು, ಗೌರವ, ಅನುಕೂಲಗಳಿಗೆ ಗುಜರಾತ್ ರಾಜ್ಯ ಸರ್ಕಾರದಲ್ಲಿದ್ದ ಯಾರು ಜವಾಬ್ದಾರಿಯಾಗಿದ್ದರು ಎಂಬ ಪ್ರಶ್ನೆಯನ್ನು ನಾನು ತನಿಖಾ ದಳಕ್ಕೆ ಕೇಳಿದೆ. ಆದರೆ ಅವರು ಈ ಪ್ರಶ್ನೆಗೆ ಉತ್ತರವನ್ನೇ ನೀಡಲಿಲ್ಲ ಎಂದು ಅಹ್ಮದ್ ಪಟೇಲ್ ತಿಳಿಸಿದ್ದಾರೆ.
ಇ.ಡಿ. ಅಧಿಕಾರಿಗಳು ಕೇಳಿದ 128 ಪ್ರಶ್ನೆಗಳಿಗೆ ನಾನು ಉತ್ತರಿಸಿದೆ. ಅವರಿಗೆ ನನ್ನ ವಿರುದ್ಧದ ಒಂದೂ ಪುರಾವೆ ಸಿಗಲಿಲ್ಲ. ನನ್ನ ಎಲ್ಲ ಉತ್ತರಗಳಿಂದ ಅಧಿಕಾರಿಗಳು ತೃಪ್ತರಾಗಿದ್ದಾರೆ. ಆದರೆ ನನಗೆ ಅನ್ನಿಸುವ ಪ್ರಕಾರ ನನ್ನ ವಿರುದ್ಧ ರಾಜಕೀಯ ಪಿತೂರಿ ನಡೆಯುತ್ತಿದೆ. ಈ ಹುನ್ನಾರದ ಹಿಂದೆ ಯಾರಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಅಹ್ಮದ್ ಪಟೇಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. (ಏಜೆನ್ಸೀಸ್)