

Zodiac Signs : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ. ಹಿಂದು ಧರ್ಮದಲ್ಲಿ ಈ ಜನ್ಮ ದಿನಾಂಕ ಮತ್ತು ಹುಟ್ಟಿದ ಗಳಿಗೆಯು ವ್ಯಕ್ತಿಯ ಜೀವನದ ಮೇಲೆ ಬಹಳ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.
ಹುಟ್ಟಿದ ದಿನ ಮತ್ತು ಗಳಿಗೆಯ ಆಧಾರದ ಮೇಲೆ ವ್ಯಕ್ತಿಯ ರಾಶಿ ಮತ್ತು ನಕ್ಷತ್ರಗಳನ್ನು ನಿರ್ಧರಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಒಬ್ಬ ವ್ಯಕ್ತಿಯ ಹುಟ್ಟಿದ ರಾಶಿಚಕ್ರ ಚಿಹ್ನೆ ಮತ್ತು ನಕ್ಷತ್ರವು ಆತನ ಭವಿಷ್ಯ ಜೀವನ ಮತ್ತು ವ್ಯಕ್ತಿತ್ವ ಹಾಗೂ ಹಣಕಾಸಿನ ಸ್ಥಿತಿಯ ಮೇಲೆ ಮಹತ್ವದ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.
ಇಡೀ ಜ್ಯೋತಿಷ್ಯ ನಿಂತಿರುವುದು ಗ್ರಹಗಳ ಆಧಾರದ ಮೇಲೆ. ಏಕೆಂದರೆ, ಗ್ರಹಗಳ ಚಲನೆಯು ರಾಶಿಚಕ್ರ ಮತ್ತು ನಕ್ಷತ್ರಗಳ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿಯೇ ಏನಾದರೂ ನಡೆದರೆ ಎಲ್ಲದಕ್ಕೂ ಗ್ರಹಗತಿಗಳೇ ಕಾರಣ ಎಂದು ನಮ್ಮ ಹಿರಿಯರು ಹೇಳುವುದನ್ನು ಕೂಡ ನಾವು ನೋಡಿದ್ದೇವೆ. ಇದು ಬಹುತೇಕ ಸಂದರ್ಭಗಳಲ್ಲಿ ನಿಜವೂ ಆಗಿದೆ. ಹೀಗಾಗಿ ಜ್ಯೋತಿಷ್ಯವನ್ನು ಬಹುತೇಕ ಮಂದಿ ನಂಬುತ್ತಾರೆ. ಏನೇ ಕಹಿ ಘಟನೆ ನಡೆದರೆ ಅದಕ್ಕೆ ಜ್ಯೋತಿಷ್ಯದಲ್ಲಿ ಪರಿಹಾರ ಇದೆ ಎಂದು ಅನೇಕ ಮಂದಿ ನಂಬುತ್ತಾರೆ.
ಅಂದಹಾಗೆ, ಎಲ್ಲ ಮನುಷ್ಯರು ತಮ್ಮ ಜೀವನದಲ್ಲಿ ಸುಖ-ದುಃಖಗಳನ್ನು ಅನುಭವಿಸುವುದು ಸಹಜ. ಆದರೆ, ನಾವು ಹೇಗೆ ಅದನ್ನು ಎದುರಿಸುತ್ತೇವೆ ಎಂಬುದರ ಮೇಲೆ ನಮ್ಮ ಯಶಸ್ಸು ಅವಲಂಬಿತವಾಗಿರುತ್ತದೆ. ಹೀಗಾಗಿ ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಜನರು ಯಾವುದೇ ಕಠಿಣ ಪರಿಸ್ಥಿತಿಗಳನ್ನೂ ಶಾಂತವಾಗಿ ಮತ್ತು ಸ್ಪಷ್ಟವಾಗಿ ಎದುರಿಸಲು ಸಮರ್ಥರಾಗಿರುತ್ತಾರಂತೆ. ಆ ರಾಶಿ ಚಿಹ್ನೆಗಳು ಯಾವುವು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಕುಂಭ ರಾಶಿಯವರು ತಮ್ಮ ಬೌದ್ಧಿಕ ಮತ್ತು ಸ್ವತಂತ್ರ ಮನಸ್ಥಿತಿಗೆ ಹೆಸರುವಾಸಿಯಾಗಿದ್ದಾರೆ. ಯಾವುದೇ ಸಮಸ್ಯೆಗಳು ಎದುರಾದರೂ ತುಂಬಾ ಕೂಲ್ ಆಗಿ, ವಿಶ್ಲೇಷಣಾತ್ಮಕ ಮನಸ್ಸಿನಿಂದ ಬಗೆಹರಿಸುವ ಸಾಮರ್ಥ್ಯ ಅವರಲ್ಲಿದೆ. ಇತರರು ತುಂಬಾ ಗೊಂದಲಕ್ಕೆ ಒಳಗಾಗುವ ಸನ್ನಿವೇಶವನ್ನೂ ತುಂಬಾ ಶಾಂತವಾಗಿ ನ್ಯಾವಿಗೇಟ್ ಮಾಡುವ ವಿಶೇಷ ಗುಣ ಈ ರಾಶಿಯವರಲ್ಲಿದೆಯಂತೆ.
ಮಿಥುನ ರಾಶಿಯವರು ಯಾವಾಗಲೂ ಆಶಾವಾದಿಗಳಾಗಿರುತ್ತಾರೆ. ಆದರೆ, ಅವರು ಸಮಸ್ಯೆಗಳಿಗೆ ಪರಿಹಾರಗಳ ಬಗ್ಗೆ ಯಾವಾಗಲೂ ಯೋಚಿಸುತ್ತಾರೆ. ಅವರ ಶಾಂತತೆ ಗುಣವೇ ಸರಿಯಾದ ಪರಿಹಾರಕ್ಕೆ ಕಾರಣವಾಗುತ್ತದೆ. ಅವರು ತಮ್ಮ ಮೋಜಿನ, ಸ್ನೇಹಪರ ಮತ್ತು ಶಾಂತ ವ್ಯಕ್ತಿತ್ವಗಳಿಗೆ ಹೆಸರುವಾಸಿಯಾಗಿದ್ದಾರೆ. ಸುಲಭವಾಗಿ ಹೊಂದಿಕೊಳ್ಳುವ ಸಾಮರ್ಥ್ಯವು ಅವರನ್ನು ಕೂಲ್ ಆಗಿ ಕಾಣುವಂತೆ ಮಾಡುತ್ತದೆ.
ತುಲಾ ರಾಶಿಯವರು ಜೀವನವನ್ನು ಶಾಂತ ಮತ್ತು ಸಮತೋಲಿತ ವಿಧಾನದಿಂದ ನಿರ್ವಹಿಸುತ್ತಾರೆ. ಈ ರಾಶಿಯವರು ತಮ್ಮ ದಯೆ ಮತ್ತು ಎಲ್ಲ ಸಂದರ್ಭಗಳಲ್ಲಿಯೂ ಸಾಮರಸ್ಯವನ್ನು ಕಂಡುಕೊಳ್ಳುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಒತ್ತಡ ಮತ್ತು ಕೋಪದ ಸಮಯದಲ್ಲಿ ಅವರ ಶಾಂತತೆಯು ಅವರ ವಿಶೇಷ ಗುಣವಾಗಿದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.