ಕಿನ್ನಿಗೋಳಿ: ಪಡ್ರೆ ಶ್ರೀ ಧೂಮಾವತಿ ದೈವಸ್ಥಾನಕ್ಕೆ ಅಪಪ್ರಚಾರ ಮಾಡುತ್ತಿರುವವರಿಗೆ ಕೋರ್ಟ್ ಮೂಲಕ ಉತ್ತರ ನೀಡುತ್ತೇವೆ ಎಂದು ದೈವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು ಸುರತ್ಕಲ್‌ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇತ್ತೀಚೆಗೆ ಗ್ರಾಮದ ಪದ್ಮನಾಭ ಶೆಟ್ಟಿ ಎಂಬುವರು ನ್ಯಾಯಾಲಯದಲ್ಲಿ ಸುಮಾರು 13 ಜನರ ಮೇಲೆ ಖಾಸಗಿ ದೂರು ನೀಡಿದ್ದು ಅದರ ಆಧಾರದ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲಾಗಿದೆ. ಕಳ್ಳತನ, ವಂಚನೆ ಪ್ರಕರಣ ದಾಖಲಿಸಿದ್ದು ಇದು ಸತ್ಯಕ್ಕೆ ದೂರದ ಮಾತು ಎಂದು ರೂಪೇಶ್ ರೈ ತಡಂಬೈಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಡ್ರೆಯ ಭಂಡ್ರಿಯಾಲ್ 1974ರಿಂದ ದೈವಸ್ಥಾನಕ್ಕೆ ಸಂಬಂಧಪಟ್ಟ ಸುತ್ತಮುತ್ತಲಿನ ಗ್ರಾಮಸ್ಥರಿಂದ ಸಹಕಾರ ಪಡೆದು ಖರ್ಚು-ವೆಚ್ಚ ಭರಿಸುವ ಸಂಬಂಧ ಒಂದು ಸಮಿತಿ ರಚನೆ ಮಾಡಿದ್ದು, ಈ ಸಮಿತಿಗೆ ನೋಂದಣಿಯಾಗಲಿ, ನಿರ್ದಿಷ್ಟ ಬೈಲಾ ಆಗಲಿ ಇಲ್ಲ. ಸುಮಾರು 12 ವರ್ಷಗಳಿಂದ ಗ್ರಾಮಸ್ಥರ ಸಭೆ ನಡೆಸದೆ ಇದ್ದುದರಿಂದ ಗಡಿ ಪ್ರಧಾನ ಬಾಬು ಭಂಡ್ರಿಯಾಲ್ ಈ ವರ್ಷ ಗ್ರಾಮಸ್ಥರ ಸಭೆ ಕರೆದು ಸಮಿತಿ ರಚಿಸಿದರು. ಈ ಸಮಿತಿ ರಚಿಸುವ ಮುನ್ನ ಗ್ರಾಮದ ಸಭೆ ಕರೆಯದಂತೆ ಕೆಲವೊಂದು ವ್ಯಕ್ತಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಸಭೆ ನಡೆಸಲು ಅನುಮತಿ ಕೊಟ್ಟಿದ್ದರಿಂದ ಸಭೆ ನಡೆದಿದೆ ಎಂದರು.
ಬಳಿಕ ಮಾತಾಡಿದ ಗಡಿಪ್ರಧಾನ ಬಾಬು ಭಂಡ್ರಿಯಾಲ್, ಇಲ್ಲಿಯವರೆಗೆ ನನ್ನ ಮೇಲೆ ಇಂತಹ ಆರೋಪ ಬಂದಿಲ್ಲ. ಕೋರ್ಟ್‌ನಲ್ಲಿ ವಕೀಲರು ರಾಜಿ ಪಂಚಾಯಿತಿ ನಡೆಸೋಣ ಎಂದು ಕರೆದ ಹಿನ್ನೆಲೆಯಲ್ಲಿ ನಾವೆಲ್ಲರೂ ಹೋಗಿದ್ದೆವು. ಅಲ್ಲಿ ಪದ್ಮನಾಭ ಶೆಟ್ಟಿ ಈಗಿರುವ ಸಮಿತಿ ಬರ್ಕಾಸ್ತುಗೊಳಿಸಿ ಹೊಸ ಸಮಿತಿ ರಚಿಸುವಂತೆ ಮತ್ತು ತನ್ನನ್ನು ಅದರಲ್ಲಿ ಸೇರಿಸುವಂತೆ ಕೇಳಿದ್ದ. ಆಗ ನಾನು ಹೊಸ ಸಮಿತಿ ರಚಿಸಿಯಾಗಿದೆ. ಈಗ ಸಾಧ್ಯವಿಲ್ಲ ಅಂದಿದ್ದಕ್ಕೆ ನಮ್ಮನ್ನು ಕೆಟ್ಟ ಭಾಷೆಗಳಲ್ಲಿ ನಿಂದಿಸಿದ್ದಾನೆ. ಆತನನ್ನು ಪಡ್ರೆ ಜುಮಾದಿ ದೈವವೇ ನೋಡಿಕೊಳ್ಳಲಿ ಎಂದರು.
ಗಡಿಪ್ರಧಾನ ಜಗನ್ನಾಥ್ ಅತ್ತಾರ್, ಗೌರವಾಧ್ಯಕ್ಷ ದೇವಣ್ಣ ಶೆಟ್ಟಿ, ಉಪಾಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಉಪಾಧ್ಯಕ್ಷ ಸತೀಶ್ ಮುಂಚೂರು, ಗಡಿಪ್ರಧಾನರಾದ ದೇವೇಂದ್ರ ಪೂಜಾರಿ, ಯೋಗೀಶ್ ಕೊಂಕಣಬೈಲ್, ಶ್ರೀನಿವಾಸ್ ಗುತ್ತಿನಾರ್, ಬೀರಣ್ಣ ಶೆಟ್ಟಿ ಮುಕ್ಕ, ಸುನೀಲ್, ಸಂಜಯ, ಧೀರಜ್ ಮತ್ತಿತರರು ಉಪಸ್ಥಿತರಿದ್ದರು.