ಬಿಸಿಲಿಗೆ ಸೊರಗಿದ ಗಿಡಗಳು!, ಮಂಗಳೂರುನಗರದ ರಸ್ತೆ ವಿಭಜಕ ಸೇರಿದಂತೆ ರಸ್ತೆಗಳ ಇಕ್ಕೆಲಗಳಲ್ಲಿ ಹೂವಿನ ಗಿಡಗಳಿಗೆ ನೀರಿಲ್ಲ

mng-feb25-gidha1
ಕೆಪಿಟಿಯಿಂದ ನಂತೂರು ಪಂಪ್‌ವೆಲ್ ಕಡೆಗೆ ಸಾಗುವ ಹಾದಿಯಲ್ಲೂ ನೀರಿಲ್ಲದೇ ಸೊರಗುತ್ತಿರುವ ಗಿಡಮರಗಳು ಸಾರ್ವಜನಿಕರ ಕಣ್ಣಿಗೆ ರಾಚುತ್ತದೆ.
Published on

-ಶ್ರವಣ್‌ಕುಮಾರ್ ನಾಳ, ಮಂಗಳೂರು

ಸ್ಮಾರ್ಟ್‌ಸಿಟಿಯಾಗಿ ಬೆಳೆಯುತ್ತಿರುವ ಮಂಗಳೂರಿನಂತಹ ನಗರದಲ್ಲಿ ಎಲ್ಲೆಡೆ ಕಟ್ಟಡಗಳೇ ತಲೆ ಎತ್ತುತ್ತಿದ್ದಂತೆ ಇತ್ತ ಭಾಗದಲ್ಲಿ ಕೊಂಚ ಹಸಿರು ಇರಲಿ ಎನ್ನುವ ಉದ್ದೇಶದಿಂದ ನಾನಾ ಸಂಘ ಸಂಸ್ಥೆಗಳ ಜತೆಗೆ ಕೆಲವೊಂದು ಕಂಪನಿಗಳು ಮುಂದೆ ಬಂದು ಗಿಡ, ಮರಗಳನ್ನು ರಸ್ತೆ ವಿಭಜಕ ಸೇರಿದಂತೆ ರಸ್ತೆಯ ಇಕ್ಕೆಲಗಳಲ್ಲಿ ಬೆಳೆಸುವ ಕಾರ್ಯಕ್ಕೆ ಕೈಹಾಕಿದ್ದರು. ಆದರೆ ಈ ಗಿಡಗಳಿಗೀಗ ನೀರಿಲ್ಲ!, ಬಹುತೇಕ ಕಡೆ ಬಿಸಿಲಿನ ಶಾಖಕ್ಕೆ ಸೊರಗಿ ಸಾಯುವ ಸ್ಥಿತಿಯಲ್ಲಿದೆ.

ಮಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಉರ್ವದಿಂದ ಕೊಟ್ಟಾರ ಚೌಕಿಯ ತನಕನೂ ಈ ಹಿಂದೆ ಗಿಡಮರಗಳು ರಸ್ತೆ ವಿಭಜಕದಲ್ಲಿ ನಳನಳಿಸುತ್ತಿದ್ದರೆ ಈಗ ಪೂರ್ಣ ರೂಪದಲ್ಲಿ ಸೊರಗಿ ಹೋಗಿದೆ. ಇದೇ ರೀತಿಯಲ್ಲಿ ಕೆಪಿಟಿಯಿಂದ ನಂತೂರು ಪಂಪ್‌ವೆಲ್ ಕಡೆಗೆ ಸಾಗುವ ಹಾದಿಯಲ್ಲೂ ನೀರಿಲ್ಲದೇ ಸೊರಗುತ್ತಿರುವ ಗಿಡಮರಗಳು ಸಾರ್ವಜನಿಕರ ಕಣ್ಣಿಗೆ ರಾಚುತ್ತದೆ. ಕದ್ರಿ ಉದ್ಯಾನವನ ಭಾಗದಲ್ಲೂ ನೀರು ಹಾಕುವವರೇ ಕಾಣಿಸುತ್ತಿಲ್ಲ. ಕೆಪಿಟಿ ಪಾದುವ ಕಾಲೇಜು ಸಾಗುವ ದಾರಿಯಲ್ಲಿ ಗಿಡಗಳು ಕರಟಿ ಹೋಗಿವೆ

*ಸೊರಗಿದ ಗಿಡಗಳಿಗಿಲ್ಲ ನೀರು

ಮೇರಿಹಿಲ್ ರಸ್ತೆ ವಿಭಜಕದಲ್ಲಿ ಈ ಹಿಂದೆ ಸುಂದರವಾದ ಗಿಡಗಳನ್ನು ನೆಡಲಾಗಿದ್ದು, ಪ್ರಸ್ತುತ ಅಸ್ತಿತ್ವ ಕಳೆದುಕೊಂಡ ರೀತಿಯಲ್ಲಿದೆ. ಅದೇ ರೀತಿ ಶರ್ಬತ್ ಕಟ್ಟೆ ಸಮೀಪ ಡಿವೈಡರ್‌ನಲ್ಲಿ ಗಿಡಗಳ ನಾಮಾವಶೇಷ ಇಲ್ಲ, ಕೆಪಿಟಿ ಕೊಟ್ಟಾರ ಹೈವೆಯ ಡಿವೈಡರ್‌ನಲ್ಲಂತೂ ಹಸಿರಗಿಡಗಳನ್ನು ಹುಡುಕುವ ಸ್ಥಿತಿ ನಿರ್ಮಾಣಗೊಂಡಿದೆ. ಈ ಹಿಂದೆ ರಸ್ತೆ ವಿಭಜಕ ಸೇರಿದಂತೆ ರಸ್ತೆಗಳ ಇಕ್ಕೆಲಗಳಲ್ಲಿ ಹೂವಿನ ಗಿಡ ಸೇರಿದಂತೆ ನಾನಾ ಜಾತಿಯ ಗಿಡಗಳನ್ನು ನೆಟ್ಟು ಚಿತ್ರ ಹಾಕಿ ಪ್ರಚಾರ ಗಿಟ್ಟಿಸಿಕೊಂಡ ಪ್ರಚಾರ ಪ್ರಿಯರಿಂದ ಈಗ ಬಿರು ಬಿಸಿಲಿನ ಝಳಕ್ಕೆ ಸೊರಗುತ್ತಿರುವ ಹೂಗಿಡಗಳಿಗೆ ನೀರುಣಿಸುವ ಕಾರ್ಯವೂ ನಡೆದಿಲ್ಲ.

*ಹಸಿರು ಗಿಡಗಳ ಸಮಗ್ರ ನಿರ್ವಹಣೆ

ಸ್ಮಾರ್ಟ್‌ಸಿಟಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಸೇರಿದಂತೆ ಸಾರ್ವಜನಿಕರಿಗೂ ಈ ಹಸಿರಿನ ಗಿಡ ಮರಗಳು ತಂಪಿನ ಜತೆಗೆ ಕಣ್ಣಿಗೆ ಇಂಪು ತಂದುಕೊಡುತ್ತಿದೆ. ಮಳೆಗಾಲದಲ್ಲಂತೂ ವರುಣನ ಕೃಪೆಯಿಂದ ಅಬ್ಬರವಾಗಿ ಬೆಳೆದ ಗಿಡ ಮರಗಳು ಈಗ ಬಿಸಿಲಿನ ಅಬ್ಬರಕ್ಕೆ ಸೊರಗಿ ಹೋಗುತ್ತಿದೆ. ಇದಕ್ಕೆ ಅಪವಾದ ಎನ್ನುವಂತೆ ಕೆಲವೊಂದು ಭಾಗದಲ್ಲಿ ಈಗಲೂ ಗಿಡ ಮರಗಳನ್ನು ಪೋಷಣೆ ಮಾಡುವವರು ಕೂಡ ಇದ್ದಾರೆ. ನಗರದ ಲೇಡಿಹಿಲ್ ಸರ್ಕಲ್‌ನಿಂದ ಚಿಲಿಂಬಿ ದೇವಸ್ಥಾನದ ತನಕ ಈಗಲೂ ಹಸಿರು ಗಿಡಗಳು ಮುದ ನೀಡುತ್ತದೆ. ಇಲ್ಲಿ ವ್ಯವಸ್ಥಿತವಾಗಿ ಗಿಡ ಮರಗಳನ್ನು ಪೋಷಣೆಮಾಡುವ ತಂಡವೇ ಕಾರ್ಯನಿರ್ವಹಿಸುತ್ತಿದೆ.

----------------

ನೀರು ಹಾಕುವ ಟೆಂಡರ್ ಇಲ್ಲ!

ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆಲವು ವರ್ಷಗಳ ಹಿಂದೆ ರಸ್ತೆ ವಿಭಜಕ ಹಾಘೂ ಸುತ್ತಮುತ್ತಲಿನ ಗಿಡ ಮರಗಳಿಗೆ ನೀರು ಹಾಕಲು ಟೆಂಡರ್ ಮೂಲಕ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈಗ ಇಂತಹ ವ್ಯವಸ್ಥೆಯೇ ಇಲ್ಲ. ಕೆಲವೊಂದು ಭಾಗದಲ್ಲಿ ನೀರು ಹಾಕುವ ಜತೆಗೆ ಈ ಹೂ, ಗಿಡಗಳ ನಿರ್ವಹಣೆಯನ್ನು ಸ್ಥಳೀಯ ಮಟ್ಟದಲ್ಲಿ ನಿರ್ವಹಣೆ ಮಾಡಲು ಸಂಘ ಸಂಸ್ಥೆಗಳಿಗೆ ಹೊಣೆಗಾರಿಕೆಯನ್ನು ನೀಡಲಾಗಿದೆ. ಉಳಿದಂತೆ ಮಹಾನಗರ ಪಾಲಿಕೆಯೇ ಈ ವ್ಯವಸ್ಥೆಗೆ ಯೋಜನೆ ರೂಪಿಸುತ್ತಿತ್ತು. ಸಧ್ಯಕ್ಕೆ ಗಿಡಗಳಿಗೆ ನೀರು ಹಾಕಲು ಟೆಂಡರ್‌ಇಲ್ಲ, ನಿರ್ವಹಣೆಯೂ ಇಲ್ಲದ ಸ್ಥಿತಿ ನಿರ್ಮಾಣಗೊಂಡಿದೆ.

-------------

ಮಂಗಳೂರು ನಗರ ವ್ಯಾಪ್ತಿಯಲ್ಲಿ ಗಿಡ ಮರಗಳಿಗೆ ನೀರು ಹಾಕುವ ವಿಚಾರದಲ್ಲಿ ಯಾವುದೇ ದೂರುಗಳು ಬಂದಿಲ್ಲ. ಈ ಕುರಿತು ಅಕಾರಿಗಳಿಂದ ಮಾಹಿತಿ ಪಡೆದುಕೊಂಡು ಇದಕ್ಕೆ ವ್ಯವಸ್ಥೆ ಮಾಡುವ ಕೆಲಸ ಮಾಡುತ್ತೇವೆ. ರಸ್ತೆ ವಿಭಜಕ ಹಾಗೂ ಸುತ್ತಮುತ್ತಲಿನ ಗಿಡ ಮರಗಳಿಗೆ ನೀರು ಹಾಕಲು ಟೆಂಡರ್ ಕರೆಯುವ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು.

-ಮನೋಜ್‌ಕುಮಾರ್ ಕೋಡಿಕಲ್, ಮೇಯರ್

ಮಂಗಳೂರು ಮಹಾನಗರ ಪಾಲಿಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net