

ಹಾಸನ: ಮಹಿಳೆಯರು ಅಬಲೆಯಲ್ಲ ಸಬಲೆ. ಮಹಿಳೆಯರು ಸಾಧಿಸದ ಸಾಧನೆಯಿಲ್ಲ, ಕ್ಷೇತ್ರಗಳಿಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹೇಮಾವತಿ ತಿಳಿಸಿದರು.
ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘದ ವತಿಯಿಂದ ಜಿಲ್ಲಾ ನ್ಯಾಯಾಲಯದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಮಹಿಳಾ ದಿನಾಚಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆ ಮಗಳಾಗಿ, ಅಕ್ಕ, ತಂಗಿಯಾಗಿ, ಸೊಸೆಯಾಗಿ, ಪತ್ನಿಯಾಗಿ, ಅತ್ತಿಗೆ, ನಾದಿನಿ, ಅತ್ತಿಗೆಯಾಗಿ, ಕುಟುಂಬದೊಳಗೆ ಪಾತ್ರ ನಿರ್ವಹಿಸುವ ಅವಳು ಹೊರಗೆ ಗೆಳತಿಯಾಗಿ ವಿವಿಧ ರಂಗಗಳಲ್ಲಿ ಸಾಧಕಳಾಗಿ ಗುರುತಿಸಿಕೊಂಡಿದ್ದು ತಾನು ನಿಭಾಯಿಸುವ ಪಾತ್ರ ಅನನ್ಯವಾದುದು. ಪುರುಷ ಪ್ರಧಾನವಾದ ಸಮಾಜದಲ್ಲಿ ಮಹಿಳೆ ಸಮಾನತೆಯನ್ನು ಕಾಯ್ದುಕೊಂಡಿದ್ದು ವಿಶೇಷವಾದ ಸಾಧನೆಗೈದಿದ್ದಾಳೆ. ಮಹಿಳೆಯರಿಗೆ ಪ್ರತಿದಿನವೂ ಮಹಿಳೆ ದಿನಾಚರಣೆಯಾಗಿದೆ. ಅದನ್ನು ವಿಶೇಷವಾಗಿ ಆಚರಿಸುವುದರಲ್ಲಿ ಹುರುಳಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಂ. ಶೈಲಾ ಅವರು ಮಾತನಾಡಿ, ಮಹಿಳೆಯರಾಗಿ ಹುಟ್ಟಿರುವ ನಾವು ಹೆಮ್ಮೆ ಪಡಬೇಕಾದ ವಿಷಯವಾಗಿದೆ. ನಮ್ಮ ಸನಾತನ ಸಂಸ್ಕೃತಿಯಲ್ಲಿ ದೇವಾನು ದೇವತೆಗಳು, ಪ್ರಕೃತಿ, ನದಿ, ಭೂಮಿ ಎಲ್ಲವನ್ನೂ ಹೆಣ್ಣಾಗಿ ಪೂಜಿಸುತ್ತಾ ಬಂದಿದ್ದೇವೆ. ತಾಯಿಯನ್ನು ದೇವರಾಗಿ ಪೂಜಿಸುವ ಸಂಸ್ಕೃತಿ ನಮ್ಮ ದೇಶದ ಹೆಮ್ಮೆಯಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ದಾಕ್ಷಾಯಿಣಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮನುಸ್ಮೃತಿಯ ಬಗ್ಗೆ ಉಲ್ಲೇಖಿಸಿ ಎಲ್ಲಿ ಸ್ತ್ರೀ ಗೌರವಿಸಲ್ಪಡುತ್ತಾಳೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಗಾದೆಯಂತೆ ಇಂದು ಸ್ತ್ರೀ ಸಾಧಿಸದ ಕ್ಷೇತ್ರಗಳಿಲ್ಲ ಎಂದರು.
ಈ ವೇಳೆ ನ್ಯಾಯಾಲಯಗಳಲ್ಲಿ ಸ್ವಚ್ಚಾತಾಗಾರರಾಗಿ ನಿಸ್ವಾರ್ಥತೆಯಿಂದ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ನ್ಯಾಯಾಂಗದ ವತಿಯಿಂದ ಎಲ್ಲ ನ್ಯಾಯಾಧೀಶರುಗಳು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಸಿವಿಲ್ ನ್ಯಾಯಾಧೀಶರಾದ ಎಂ.ಎಲ್. ನಾಗಜ್ಯೋತಿ, ಪ್ರಧಾನ ನ್ಯಾಯಾಧೀಶರಾದ ಮೊಹಮ್ಮದ್ ಅಶ್ರಫ್ ಆರಿಸ್, ಸಿವಿಲ್ ನ್ಯಾಯಾಧೀಶರಾದ ಎಸ್.ಸೂರ್ಯನಾರಾಯಣ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆ.ಎಂ. ಪುಟ್ಟಸ್ವಾಮಿ, ಎರಡನೇ ಅಧಿಕ ಜಿಲ್ಲಾ ನ್ಯಾಯಾಧೀಶರಾದ ಎಸ್.ಎ. ಹಿದಾಯತ್ ಉಲ್ಲಾ ಷರೀಫ್, ಮೂರನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾ. ಆನಂದ, ಐದನೇ ಅಧಿಕ ಜಿಲ್ಲಾ ನ್ಯಾ. ಎಚ್.ಆರ್. ರವಿಕುಮಾರ್, ಅಧಿಕ ಜಿಲ್ಲಾ ನ್ಯಾ. ಎಚ್.ಎಂ.ದೇವರಾಜು, ವಕೀಲರ ಸಂಘದ ಅಧ್ಯಕ್ಷ ಡಿ.ಟಿ. ಪ್ರಸನ್ನ, ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಆರ್.ರೂಪಾ ಹಾಗೂ ಇತರ ನ್ಯಾಯಾಧೀಶರು, ವಕೀಲರು ಉಪಸ್ಥಿತರಿದ್ದರು.