

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು
ಮುಖ್ಯಮಂತ್ರಿ ತವರು ಜಿಲ್ಲೆ ಮೈಸೂರಿನಲ್ಲೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸಿಬ್ಬಂದಿ ಕೊರತೆ ತೀವ್ರವಾಗಿ ಕಾಡುತ್ತಿದೆ. ಇದುವೇ ಹಾಸ್ಟೆಲ್ಗಳ ನಿರ್ವಹಣೆಗೆ ತೊಡಕಾಗಿದೆ.
ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ, ಶೈಕ್ಷಣಿಕ ಪ್ರೋತ್ಸಾಹ, ಆರ್ಥಿಕ ನೆರವು ನೀಡುವ ಈ ಇಲಾಖೆಯ ಕಾರ್ಯಕ್ರಮ, ಯೋಜನೆಗಳ ಜಾರಿಗೆ ಸಿಬ್ಬಂದಿ ವರ್ಗವಿಲ್ಲ. ಈ ಕೊರತೆಯೇ ಇಡೀ ಇಲಾಖೆಗೆ ಗರ ಬಡಿಯುವಂತೆ ಮಾಡಿದ್ದು, ಗ್ರೂಪ್ ಡಿ ಹುದ್ದೆಗಳೇ ಬಹಳಷ್ಟು ಖಾಲಿ ಇವೆ. ತಾತ್ಕಾಲಿಕ ಸಿಬ್ಬಂದಿ ಮೇಲೆ ನಿರ್ವಹಣೆ ಮಾಡಲಾಗುತ್ತಿದೆ.
ಮೇಲ್ವಿಚಾರಕರು, ವಾರ್ಡನ್ಗಳ ಸಂಖ್ಯೆ ತೀರ ಕಡಿಮೆ ಇದೆ. ಒಬ್ಬರು ಎರಡ್ಮೂರು ಹಾಸ್ಟೆಲ್ಗಳನ್ನು ನೋಡಿಕೊಳ್ಳಬೇಕಾಗಿದೆ. ಜಿಲ್ಲೆಯಲ್ಲಿ 8 ಮಹಿಳಾ ಮತ್ತು 29 ಪುರುಷ ನಿಲಯ ಮೇಲ್ವಿಚಾರಕರ ಅಭಾವ ಇದೆ. ಇದರಿಂದ ಹೈರಾಣಾಗಿರುವ ಸಿಬ್ಬಂದಿಯಿಂದ ಹೆಚ್ಚಿನ ಕಾರ್ಯಕ್ಷಮತೆ ಹೇಗೆ ನಿರೀಕ್ಷಿಸಲು ಸಾಧ್ಯ ಎನ್ನುವುದೇ ಈಗ ದೊಡ್ಡ ಪ್ರಶ್ನೆಯಾಗಿದೆ.
ಇಲಾಖೆಯಲ್ಲಿ ಗ್ರೂಪ್ ಎ, ಬಿ, ಸಿ, ಡಿ ಸೇರಿದಂತೆ ಜಿಲ್ಲೆಗೆ 591 ಹುದ್ದೆ ಮಂಜೂರಾಗಿವೆ. ಈ ಪೈಕಿ 281 ಭರ್ತಿಯಾಗಿವೆ. ಬರೋಬ್ಬರಿ 310 ಹುದ್ದೆ ಖಾಲಿ ಇವೆ. ಒಟ್ಟು 9ರ ಪೈಕಿ 3 ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಸ್ಥಾನ ಖಾಲಿ ಇವೆ. ಈಗಿರುವ 6 ತಾಲೂಕು ಮಟ್ಟದ ಅಧಿಕಾರಿಗಳು ಖಾಲಿ ಇರುವ 3 ಹುದ್ದೆಗಳನ್ನು ಪ್ರಭಾರವಾಗಿ ನೋಡಿಕೊಳ್ಳಬೇಕಿದೆ. ಇದು ಹೆಚ್ಚುವರಿ ಕೆಲಸವಾಗಿದೆ.
ಗ್ರೂಪ್ ಸಿ ವಿಭಾಗದಲ್ಲಿ 415 ಹುದ್ದೆ ಪೈಕಿ 186 ಹುದ್ದೆ ಭರ್ತಿಯಾಗಿವೆ. ಉಳಿದ 78 ಸ್ಥಾನ ಖಾಲಿ ಹೊಡೆಯುತ್ತಿವೆ. ಗ್ರೂಪ್ ಡಿ ವಿಭಾಗದಲ್ಲಿ 415 ಮಂಜೂರಾದ ಹುದ್ದೆಗಳಲ್ಲಿ 186 ಭರ್ತಿಯಾಗಿದ್ದರೆ, ಬರೋಬ್ಬರಿ 229 ಹುದ್ದೆಗಳು ಹಲವು ವರ್ಷಗಳಿಂದ ಭರ್ತಿಯೇ ಆಗಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಕೆಳ ಹಂತದ ಸಿಬ್ಬಂದಿ ಅಭಾವದಿಂದ ಇಲಾಖೆಯ ಕೆಲಸ-ಕಾರ್ಯಗಳನ್ನು ತ್ವರಿತಗತಿಯಲ್ಲಿ ಮತ್ತು ಗುಣಮಟ್ಟದಲ್ಲಿ ಮಾಡಲು ಆಗುತ್ತಿಲ್ಲವೆಂದು ಮೂಲಗಳು ತಿಳಿಸಿವೆ.
ಇಲಾಖೆ ವ್ಯಾಪ್ತಿಯ ಹಾಸ್ಟೆಲ್ಗಳ ನಿರ್ವಹಣೆಗೆ ಸಿಬ್ಬಂದಿ ಕೊರತೆ ಅಡಚಣೆ ಉಂಟುಮಾಡಿದೆ. ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್ಗಳು 37, ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್ 6, ಮೆಟ್ರಿಕ್ ನಂತರ ಬಾಲಕರ ಹಾಸ್ಟೆಲ್ 25, ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ 24 ಸೇರಿದಂತೆ ಜಿಲ್ಲೆಯಲ್ಲಿ ಇಲಾಖೆಯ 92 ವಿದ್ಯಾರ್ಥಿನಿಲಯಗಳಿವೆ. ಇದರೊಂದಿಗೆ 2 ಆಶ್ರಮ ಶಾಲೆ, 4 ಮುರಾರ್ಜಿ ದೇಸಾಯಿ ವಸತಿ ಶಾಲೆ, 370 ಸಮುದಾಯ ಭವನಗಳಿವೆ. ಇವುಗಳ ನಿರ್ವಹಣೆಗೆ ಸಮರ್ಪಕ ಪ್ರಮಾಣದಲ್ಲಿ ಸಿಬ್ಬಂದಿಯೇ ಇಲ್ಲ.
ಜಿಲ್ಲೆಯಲ್ಲಿರುವ 43 ಮೆಟ್ರಿಕ್ ಪೂರ್ವ ಬಾಲಕ, ಬಾಲಕಿಯರ ಹಾಸ್ಟೆಲ್ಗಳಲ್ಲಿ 1,875 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಳ್ಳುವ ಮೂಲಕ ವಾಸ್ತವ್ಯ ಹೂಡಿದ್ದಾರೆ. ಅಂತೆಯೆ, 49 ಮೆಟ್ರಿಕ್ ನಂತರದ ಬಾಲಕ, ಬಾಲಕಿಯರ ಹಾಸ್ಟೆಲ್ಗಳಲ್ಲಿ 7,210 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಗ್ರಾಮಾಂತರ ಭಾಗದಿಂದ ಬಂದಿರುವ ಈ ಎಲ್ಲ ವಿದ್ಯಾರ್ಥಿಗಳ ಶಿಕ್ಷಣ ಕಲಿಕೆಗೆ ಹಾಸ್ಟೆಲ್ಗಳು ನೆರವಾಗಿವೆ. ಆದರೆ, 9,085 ವಿದ್ಯಾರ್ಥಿಗಳಿಗೆ ತಕ್ಕಷ್ಟು ಸಿಬ್ಬಂದಿಯಿಲ್ಲ. ಹಾಸ್ಟೆಲ್ ನಿರ್ವಹಣೆ, ಊಟದ ಸೌಲಭ್ಯ ಕಲ್ಪಿಸಲು ಕಷ್ಟಕರವಾಗಿದೆ. ಇದು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತಿದೆ.
ಕೆಲ ಕಡೆಗೆ ಗಣಕಯಂತ್ರ ನೋಡಿಕೊಳ್ಳುವವರು ಯಾರೂ ಇಲ್ಲದಂತಾಗಿದೆ. ಇಲಾಖೆಯ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲು ಕಷ್ಟಕರವಾಗಿದೆ. ಕರಾಟೆ, ಯೋಗ, ಗಣಕಯಂತ್ರ ಸೇರಿದಂತೆ ಇನ್ನಿತರ ತರಬೇತಿ ಕಾರ್ಯವನ್ನು ವಿದ್ಯಾರ್ಥಿಗಳಿಗೆ ಸೂಕ್ತವಾಗಿ ನೀಡಲಾಗುತ್ತಿಲ್ಲ. ಖಾಲಿ ಹುದ್ದೆಗಳ ಭರ್ತಿಯೊಂದಿಗೆ 30 ರಾತ್ರಿ ಕಾವಲುಗಾರರ ಹುದ್ದೆಗಳಿಗೆ ಕಾಯಂ ನೌಕರರನ್ನೂ ನೇಮಕ ಮಾಡಬೇಕಿದೆ.
ಇಲಾಖೆಯ 92 ಹಾಸ್ಟೆಲ್ಗಳ ಪೈಕಿ 27 ಹಾಸ್ಟೆಲ್ಗಳಿಗೆ ಸ್ವಂತ ಕಟ್ಟಡವೇ ಇಲ್ಲ. ಇವುಗಳೆಲ್ಲ ಬಾಡಿಗೆ ಕಟ್ಟಡದಲ್ಲಿ ನೆಲೆಯೂರಿವೆ. 63 ಹಾಸ್ಟೆಲ್ಗಳಿಗೆ ಸ್ವಂತ ಕಟ್ಟಡವಿದೆ. 2 ಹಾಸ್ಟೆಲ್ಗಳು ಉಚಿತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಸ್ವಂತ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಸ್ಟೆಲ್ಗಳಲ್ಲಿ ಸ್ಥಳಾವಕಾಶದ ಕೊರತೆ ಇದೆ. ಹೀಗಾಗಿ, ಹೆಚ್ಚುವರಿ ಕೊಠಡಿಗಳು, ಶೌಚಗೃಹ, ಸ್ನಾನಗೃಹ, ಡೈನಿಂಗ್ ಹಾಲ್, ಗ್ರಂಥಾಲಯ ಕೊಠಡಿ, ದಾಸ್ತಾನು ಕೊಠಡಿಗಳನ್ನು ನಿರ್ಮಿಸಬೇಕಿದೆ.
ವಿದ್ಯಾರ್ಥಿನಿಲಯಗಳಲ್ಲಿ ಮೂಲಸೌಕರ್ಯದ ಅಭಾವವೂ ಇದೆ. ಇದು ನಿಲಯಾರ್ಥಿಗಳ ಪರದಾಟಕ್ಕೆ ಕಾರಣವಾಗಿದೆ. ಅಗತ್ಯವಾಗಿ 2 ಅಂತಸ್ತಿನ ಮಂಚ 880, ಬೆಡ್ 3,358, ಡೈನಿಂಗ್ ಟೇಬಲ್, ರೀಡಿಂಗ್ ಟೇಬಲ್, ಕುರ್ಚಿ, ಅಲ್ಮೆರಾ ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂಬುದು ವಿದ್ಯಾರ್ಥಿಗಳ ಆಗ್ರಹವಾಗಿದೆ.
ಶೈಕ್ಷಣಿಕ ಕೇಂದ್ರ ಆಗಿರುವ ಮೈಸೂರಿನಲ್ಲಿ ಸಿಬ್ಬಂದಿಯಷ್ಟೇ ಅಲ್ಲ, ಹಾಸ್ಟೆಲ್ಗಳ ಕೊರತೆಯೂ ತೀವ್ರವಾಗಿ ಕಾಡುತ್ತಿದೆ. ಬೇಡಿಕೆ ಹೆಚ್ಚಾಗಿದೆ. ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ರಾಜ್ಯದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಇಲ್ಲಿಗೆ ಬರುತ್ತಾರೆ. ಹೀಗಾಗಿ, ಹೊಸದಾಗಿ ಮೆಟ್ರಿಕ್ ನಂತರದ ಸಾಮಾನ್ಯ ಬಾಲಕರ-2, ಬಾಲಕಿಯರ-2, ವೃತ್ತಿಪರ ಯುವಕರ -1, ಯುವತಿಯರ 1, ಮಾದರಿ ಬಾಲಕರ-1, ಬಾಲಕಿಯರ-1 ಸೇರಿದಂತೆ ಒಟ್ಟು 8 ವಿದ್ಯಾರ್ಥಿನಿಲಯಗಳು ಅಗತ್ಯವಾಗಿವೆ. ಈ ಕುರಿತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ. ಮಂಜೂರಾತಿ ನಿರೀಕ್ಷೆ ಇದೆ.
ಕೆಳ ಹಂತ ಸಿಬ್ಬಂದಿ ಕೊರತೆಯನ್ನು ನೀಗಿಸಲು ಹೊರಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕ ಸಿಬ್ಬಂದಿಯನ್ನು ತೆಗೆದುಕೊಳ್ಳಲು ಅವಕಾಶವಿದೆ. ಹೀಗಾಗಿ, ಅಡುಗೆ ಸಿಬ್ಬಂದಿ ಸೇರಿದಂತೆ ಇನ್ನಿತರ ಡಿ ದರ್ಜೆಯ ಸಿಬ್ಬಂದಿ ಸಮಸ್ಯೆ ಇಲ್ಲ. ಆದರೆ, ಕಾಯಂ ಸಿಬ್ಬಂದಿ ಇಲ್ಲವಷ್ಟೇ. ಹಾಸ್ಟೆಲ್ಗಳ ವಾರ್ಡನ್, ಮೇಲ್ವಿಚಾರಕರ ಕೊರತೆ ಇದೆ. ಹೀಗಾಗಿ, ಇಬ್ಬರು ಎರಡ್ಮೂರು ಹುದ್ದೆಗಳಲ್ಲಿ ಪ್ರಭಾರವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.ರಾಘವೇಂದ್ರಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ