ಸಿನಿರಂಗದಲ್ಲಿ ಮಾದಕ ವ್ಯಸನಿಗಳಿದ್ದಾರೆ: ಸರ್ಜಾ ಕುಟುಂಬದ ಆಪ್ತ ಪ್ರಶಾಂತ್ ಸಂಬರಗಿ ಹೇಳಿಕೆ

Sambaragi
Published on

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಮಾದಕ ದ್ರವ್ಯ ವ್ಯಸನಿಗಳು ಇರುವುದು ನಿಜ ಎಂದು ಚಿತ್ರೋದ್ಯಮಿ ಹಾಗೂ ಸರ್ಜಾ ಕುಟುಂಬದ ಆಪ್ತ ಪ್ರಶಾಂತ್ ಸಂಬರಗಿ ಹೇಳಿದ್ದಾರೆ.

ಚಿತ್ರರಂಗಲ್ಲಿ ಹಲವು ಮಂದಿ ವ್ಯಸನಿಗಳಾಗಿರುವ ಬಗ್ಗೆ ನನಗೆ ಗೊತ್ತಿದೆ. ಸಿಸಿಬಿ ಅಧಿಕಾರಿಗಳಿಂದಲೂ ಅದನ್ನು ತಿಳಿದುಕೊಂಡಿದ್ದೇನೆ. ಎರಡು ವರ್ಷದ ಹಿಂದೆ ಚಿತ್ರರಂಗದಲ್ಲಿರುವ ಮಾದಕ ವ್ಯಸನಿಗಳ ಹೆಸರನ್ನು ಸಿಸಿಬಿ ಗಮನಕ್ಕೆ ತಂದಿದ್ದೆ. ಈ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ಕೊಡುತ್ತೇನೆ ಎಂದಿದ್ದಾರೆ.

ಯಾರೊಬ್ಬರನ್ನು ತೇಜೋವಧೆ ಮಾಡುವುದು ನನ್ನ ಉದ್ದೇಶವಲ್ಲ. ಸಮಾಜದ ಕಳಕಳಿ ಹಾಗೂ ದೇಶದ ಒಳಿತಿಗಾಗಿ ಹೇಳುತ್ತಿದ್ದೇನೆ. ಮಾದಕ ದ್ರವ್ಯ ಜಾಲ ಭಯೋತ್ಪಾದನೆ ಇದ್ದಂತೆ. ಅದಕ್ಕೆ ಕಡಿವಾಣ ಹಾಕಬೇಕಿದೆ. ಬೆಂಕಿ ಇಲ್ಲದೆ, ಹೊಗೆ ಆಡುವುದಿಲ್ಲ ಎಂದು ಹೇಳಿದ್ದಾರೆ.

ಆರೋಪ ಸರಿಯಿಲ್ಲ: ಇಂದ್ರಜಿತ್ ಲಂಕೇಶ್ ಆರೋಪ ಮಾಡಿರುವುದು ಸರಿಯಲ್ಲ. ಚಿರಂಜೀವಿ ಸರ್ಜಾ ಹೆಸರು ಹೇಳದೇ, ಅವರ ಮರಣೋತ್ತರ ಪರೀಕ್ಷೆ ಆಗಬೇಕಿತ್ತು ಎಂದು ಸುಳ್ಳು ಆರೋಪ ಮಾಡಿದ್ದಾರೆ. ಚಿರಂಜೀವಿ ಮೃತಪಟ್ಟಾಗ ಅವರ ತಂದೆ ಹಾಗೂ ನಾವೆಲ್ಲರೂ ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ವೈದ್ಯರನ್ನು ಕೇಳಿದ್ದೆವು. ಚಿರಂಜೀವಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಆದ್ದರಿಂದ ಮರಣೋತ್ತರ ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದರು. ಇಂದ್ರಜಿತ್ ಲಂಕೇಶ್ ವೈದ್ಯರಿಗಿಂತ ದೊಡ್ಡವರೆ?. ವೃಥಾ ಆರೋಪ ಮಾಡುವುದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net