

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ತೆಂಕುತಿಟ್ಟು ಚಿಕ್ಕ ಮೇಳಗಳ ಒಕ್ಕೂಟ ಕೇಂದ್ರ ಸಮಿತಿಯ ಮೂರನೇ ವರ್ಷದ ಸಮಾಲೋಚನಾ ಸಭೆ ಬಿ.ಸಿ.ರೋಡಿನಲ್ಲಿ ನಡೆಯಿತು.
ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಅಧ್ಯಕ್ಷತೆ ವಹಿಸಿ, ಮಳೆಗಾಲದಲ್ಲಿ ವೃತ್ತಿಪರ ಯಕ್ಷಗಾನ ಕಲಾವಿದರು ಜೀವನೋಪಾಯಕ್ಕಾಗಿ ಪರಂಪರೆಯಿಂದ ನಡೆದು ಬಂದ ‘ಮನೆ-ಮನೆ ಯಕ್ಷಗಾನ’ ವ್ಯಾಪಾರೀಕರಣವಾಗದೆ ದೇವರ ಸೇವೆ ಮನೋಭಾವನೆಯೊಂದಿಗೆ ಕಲಾಭಿಮಾನಿಗಳ ಮನಸ್ಸಿಗೆ ಹಿತವಾಗುವಂತೆ, ಸಭ್ಯತೆಯ ಪ್ರದರ್ಶನ ನೀಡುವುದರೊಂದಿಗೆ ಶಿಸ್ತನ್ನು ಕಾಪಾಡಿಕೊಳ್ಳಬೇಕು ಎಂದರು.
ಮುಂದಿನ ಮಳೆಗಾಲದ ತಿರುಗಾಟವನ್ನು ತಳಕಲ ಕಾಶಿ ಶ್ರೀ ವಿಶ್ವನಾಥೇಶ್ವರ ದೇವಸ್ಥಾನದಲ್ಲಿ ಜೂನ್ 5ರಂದು ಆರಂಭಿಸುವುದೆಂದು ತೀರ್ಮಾನಿಸಲಾಯಿತು.
ಉಪಾಧ್ಯಕ್ಷರಾದ ಭಾಗವತ ಮೋಹನ್ ಕಲಂಬಾಡಿ, ರಮೇಶ್ ಕುಲಶೇಖರ, ಕೋಶಾಧಿಕಾರಿ ದಿವಾಕರದಾಸ್ ಕಾವಲ್ ಕಟ್ಟೆ, ಪ್ರಧಾನ ಕಾರ್ಯದರ್ಶಿ ಕುಮಾರ್ ಮಾಲೇಮಾರ್, ಪದಾಧಿಕಾರಿಗಳು ಮತ್ತು ತೆಂಕುತಿಟ್ಟು ಚಿಕ್ಕ ಮೇಳಗಳ ಸಂಚಾಲಕರು, ಕಲಾವಿದರು ಉಪಸ್ಥಿತರಿದ್ದರು. ಕಡಬ ದಿನೇಶ್ ರೈ ವಂದಿಸಿದರು.
ನುಡಿನಮನ: ಚಿಕ್ಕ ಮೇಳದಲ್ಲಿ ದುಡಿಯುತ್ತಿದ್ದ ದಿ.ಪ್ರವೀತ್ ಆಚಾರ್ಯ ಗುರುವಾಯನಕೆರೆ ಮತ್ತು ದಿ.ಸತೀಶ್ ಆಚಾರ್ಯ ವೇಣೂರು ಅವರಿಗೆ ನುಡಿನಮನ ಸಲ್ಲಿಸಲಾಯಿತು.